ADVERTISEMENT

ರಂಗಭೂಮಿಯ ‘ಮಾಸ್ಟರ್’ ಇಲ್ಲಿ ಬಣ್ಣ ಹಚ್ಚುವುದಿಲ್ಲ

ಹರವು ಸ್ಫೂರ್ತಿ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ರಂಗಭೂಮಿಯ ‘ಮಾಸ್ಟರ್’ ಇಲ್ಲಿ ಬಣ್ಣ ಹಚ್ಚುವುದಿಲ್ಲ
ರಂಗಭೂಮಿಯ ‘ಮಾಸ್ಟರ್’ ಇಲ್ಲಿ ಬಣ್ಣ ಹಚ್ಚುವುದಿಲ್ಲ   

ನಾಟಕ ಅಂದರೆ ರಂಗಪಠ್ಯದಲ್ಲಿನ ಮಾತುಗಳನ್ನು ಭಾವಾಭಿನಯದಲ್ಲಿ ಅಭಿನಯಿಸುವುದು ಎಂಬ ಚೌಕಟ್ಟು ಇದೆ; ಅಲ್ಲಿ ಬೇರೊಂದು ಮಾತಿನ ಸೇರ್ಪಡೆಗೆ ಅವಕಾಶವಿಲ್ಲದ ನಿರ್ಬಂಧವೂ ಇದೆ. ಆದರೆ ಮಾಸ್ಟರ್ ಹಿರಣ್ಣಯ್ಯ ಈ ಬೇಲಿಯ ಆಚೆಗೆ ನಿಂತವರು.

ಅವರ ರಂಗ ಬದುಕು ಆಧರಿಸಿದ ‘ನಟರತ್ನಾಕರ’ ರಂಗರೂಪವನ್ನು ಮಾಡಿದ್ದಾರೆ ನಾಟಕಕಾರ ಎನ್.ಸಿ. ಮಹೇಶ್.

ಮಾಸ್ಟರ್ ಹಿರಣ್ಣಯ್ಯ ದಿನನಿತ್ಯ ಹೊಚ್ಚಹೊಸ ವಿಚಾರ ಸಂಪತ್ತನ್ನು ಕ್ರೋಢಿಕರಿಸಿಕೊಳ್ಳುತ್ತಾ, ಆಡುವ ಮಾತುಗಳಿಗೆ ಪ್ರಭೆ ತಂದವರು. ಹಿರಣ್ಣಯ್ಯ ಅವರು ಸೃಷ್ಟಿಸಿದ ದತ್ತು ಪಾತ್ರ, ವಾಸ್ತವದಲ್ಲಿ ಹಿರಣ್ಣಯ್ಯ ಅವರ ಮುಖೇನ ಜನತೆಯ ಮಾತುಗಳನ್ನು ಆಡುತ್ತಿತ್ತು. ಹಿರಣ್ಣಯ್ಯ ಅವರ ರಂಗ ಪಯಣವನ್ನು ಮೂಲವಾಗಿ ಇಟ್ಟುಕೊಂಡು ‘ನಟರತ್ನಾಕರ’ ರಂಗರೂಪ ಪ್ರದರ್ಶನಗೊಳ್ಳಲಿದೆ.

ADVERTISEMENT

ಮೊದಲನೆಯದಾಗಿ ಈ ಪಾತ್ರ ನೇರ ಹಿರಣ್ಣಯ್ಯ ಅವರ ಬಳಿ ಸಾಗಿ, ‘ನಿಮಗೆ ವಯಸ್ಸಾಗಿರಬಹುದು; ನೀವು ಸೃಷ್ಟಿಸಿದ ಪಾತ್ರವಾದ ನನಗೆ ವಯಸ್ಸಾಗುವುದಿಲ್ಲ, ನಾನು ವಿಡಂಬನೆ ಮುಂದುವರೆಸುತ್ತೇನೆ’ ಎನ್ನುವುದರೊಂದಿಗೆ ನಾಟಕ ಆರಂಭವಾಗುತ್ತದೆ.

ದತ್ತು ಪಾತ್ರ ಹಾಗೂ ಹಿರಣ್ಣಯ್ಯ  ನಟರತ್ನಾಕರನಾದ ಬಗೆಯನ್ನು ಈ ನಾಟಕ ಕಟ್ಟಿಕೊಡುತ್ತದೆ. ‘ಅಜ್ಜನ ಬದುಕನ್ನು ಒಂದೂವರೆ ಗಂಟೆಯೊಳಗೆ ಹಿಡಿದಿಡಲು ಸಾಧ್ಯವಿಲ್ಲದಿದ್ದರೂ ಅಡಕಮಾಡಿ ಹೇಳಲಾಗಿದೆ. ಈ ನನ್ನ ಒತ್ತಾಸೆಗೆ ಬೆಂಬಲವಾಗಿ ನಿಂತು ಮಾತಿಗೆ ನಿಲುಕುತ್ತ ನನ್ನ ರಂಗರೂಪದ ಓರೆಕೋರೆಗಳನ್ನು ತಿದ್ದಿ ಕೆಲವು ಅಗತ್ಯ ದೃಶ್ಯಗಳನ್ನು ಕಟ್ಟಿಕೊಟ್ಟವರು ಬಾಬು ಹಿರಣ್ಣಯ್ಯ’ ಎನ್ನುತ್ತಾರೆ ಎನ್‌.ಸಿ. ಮಹೇಶ್.

‘ನಟರತ್ನಾಕರ’ ನಾಟಕದ ಪ್ರತಿಯನ್ನು  ಹಿರಣ್ಣಯ್ಯ ಅವರ ಎದುರು ಓದಿ ಪುಳಕಗೊಂಡಿರುವ ಮಹೇಶ್, ‘ಅಜ್ಜನ ಸಮ್ಮುಖದಲ್ಲಿ ಸ್ಕ್ರಿಪ್ಟ್‌ ಓದಿದ್ದು ನನಗೆ ಸಾರ್ಥಕ ಭಾವ ತಂದುಕೊಟ್ಟಿದೆ. ಅಜ್ಜ ಇಡೀ ರೀಡಿಂಗ್‌ಗೆ ಕಿವಿಯಾದರು’ ಎನ್ನುತ್ತಾರೆ.

ನಮ್ಮ ತಂಡದ ನಟರು ಬಹಳ ಅಭಿಮಾನದಿಂದ ಅಜ್ಜನನ್ನು ಅನುಕರಿಸಲು ಪ್ರಯತ್ನಿಸಿರುವ ಪರಿ ಹೇಗಿದೆ ಎಂದು ತಿಳಿಯಲು ನಾಟಕಕ್ಕೆ ಬನ್ನಿ ಎಂದು ಆಹ್ವಾನಿಸುತ್ತಾರೆ ಮಹೇಶ್‌.

**

‘ನಟರತ್ನಾಕರ’ ನಾಟಕ ಪ್ರದರ್ಶನ: ಮಾಸ್ಟರ್‌ ಹಿರಣ್ಣಯ್ಯ ಅವರ ಜೀವನದ ಝರಿಗಳು; ಬತ್ತದ ಮಾತಿನ ತೊರೆ, ರಂಗರೂಪ– ನಿರ್ದೇಶನ– ಎನ್.ಸಿ. ಮಹೇಶ್, ನೆರವು– ಬಾಬು ಹಿರಣ್ಣಯ್ಯ, ತಂಡ– ಡ್ರಾಮಾಟ್ರಿಕ್ಸ್‌, ಸ್ಥಳ– ಚೌಡಯ್ಯ ಸ್ಮಾರಕ ಭವನ, ವೈಯಲಿಕಾವಲ್, ಮಲ್ಲೇಶ್ವರ, ಮೇ. 27 ಶನಿವಾರ ಸಂಜೆ 7.15. ಪ್ರವೇಶ ಉಚಿತ. ಟಿಕೆಟ್‌ ಕಾಯ್ದಿರಿಸಲು– www.bookmyshow.com ಸಂಪರ್ಕಿಸಿ.
ಇಮೇಲ್– dramatricks15@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.