ADVERTISEMENT

ರಾಜ್‌ ಸ್ಮಾರಕದ ‘ಸಮಾಧಿಪತಿ’

ರಮೇಶ ಕೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ರಾಜ್‌ ಸ್ಮಾರಕದ ‘ಸಮಾಧಿಪತಿ’
ರಾಜ್‌ ಸ್ಮಾರಕದ ‘ಸಮಾಧಿಪತಿ’   
ತುಮಕೂರು ಜಿಲ್ಲೆಯ ಕ್ಯಾಶವಾರ ನಮ್ಮೂರು. ಅಣ್ಣ, ಅತ್ತಿಗೆ ಊರಿನಲ್ಲಿದ್ದಾರೆ. ನನಗಿನ್ನೂ ಮದುವೆ ಆಗಿಲ್ಲ. ಕೆಲಸಕ್ಕೆಂದು ಬೆಂಗಳೂರಿಗೆ ಬಂದೆ. ಗಾರ್ಮೆಂಟ್‌ ಒಂದರಲ್ಲಿ ಕೆಲಸ ಹುಡುಕಿಕೊಂಡೆ.  ನಾನು ರಾಜಕುಮಾರ್‌ ಅವರ ಅಭಿಮಾನಿ. ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. 
 
ರಾಜಕುಮಾರ್‌ ತೀರಿಕೊಂಡ ದಿನ ಅವರನ್ನು ಇಲ್ಲಿ (ಕಂಠೀರವ ಸ್ಟುಡಿಯೊ) ಮಣ್ಣು ಮಾಡುತ್ತಾರೆ ಎಂಬ ಸುದ್ದಿ ತಿಳಿಯಿತು.  ಸ್ವಯಂಪ್ರೇರಿತನಾಗಿ ಕೆಲಸ ಮಾಡಲು ಬಂದೆ. ನನ್ನಂತೆ ನೂರಾರು ಮಂದಿ ಬಂದಿದ್ದರು. ಜೆಸಿಬಿಯಿಂದ ಮಣ್ಣು ತೆಗೆಸುತ್ತಿದ್ದರು. ನನ್ನ ಕೈಲಾದ ಸಹಾಯ ಮಾಡಿದೆ. ಅಂತ್ಯಸಂಸ್ಕಾರವಾದ  ರಾತ್ರಿ ಇಲ್ಲಿಯೇ ಬಿಡಾರ ಹಾಕಿಕೊಂಡು ಕಾಲ ಕಳೆದೆವು. 
 
ಆ ದಿನ ಬಹುದೊಡ್ಡ ಗಲಾಟೆಯಾಗಿದ್ದು ಎಲ್ಲರಿಗೂ ಗೊತ್ತಿದೆ. ಅಂದಿನ ದಿನವನ್ನು ಮರೆಯಲು ಸಾಧ್ಯವಿಲ್ಲ. ಕಂಠೀರವ ಸ್ಟುಡಿಯೊಗೆ ರಾಜಣ್ಣ ಅವರ ಮೃತದೇಹವನ್ನು ಮೆರವಣಿಗೆಯಲ್ಲಿ ತರಲಾಯಿತು. ಆಗ ನಮ್ಮ ತಂಡ ಮೃತದೇಹವನ್ನು ವಾಹನದಿಂದ ಕೆಳಗಿಸಿತು.  ನಂತರ ಅಂತಿಮ ವಿಧಿವಿಧಾನ ನೆರವೇರಿತು. 
 
ಅವರ ಮೇಲಿನ ಅಭಿಮಾನದಿಂದ ಸ್ವಲ್ಪ ದಿನ ಕೆಲಸ ಮಾಡೋಣ ಅಂದುಕೊಂಡೆ. ಆದರೆ ಸಮಾಧಿ ಬಿಟ್ಟು ಹೋಗಲು ಮನಸಾಗಲಿಲ್ಲ. ಆರಂಭದಲ್ಲಿ ಮಣ್ಣಿನ ಸಮಾಧಿ ಇತ್ತು. ಬ್ಯಾರಿಕೇಡ್‌ಗಳನ್ನು ಹಾಕುವುದು, ಜನರನ್ನು ನಿಯಂತ್ರಿಸುವುದು, ಸಮಾಧಿ ಮೇಲೆ ಹಾಕುತ್ತಿದ್ದ ರಾಶಿರಾಶಿ ಹೂವಿನ ಹಾರಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದೆವು. ಕೆಲ ಅಭಿಮಾನಿಗಳು ದಿನವೆಲ್ಲಾ ಸಮಾಧಿ ಬಳಿ ಅಳುತ್ತಾ, ನೆಚ್ಚಿನ ನಟನನ್ನು ಕಳೆದುಕೊಂಡ ದುಃಖ ವ್ಯಕ್ತಪಡಿಸುತ್ತಿದ್ದರು.
 
ಈಗಲೂ ಕೆಲವರು ಹರಕೆ ಮಾಡಿಕೊಂಡು ಹೋಗುತ್ತಾರೆ, ಮಗಳಿಗೆ ಕಂಕಣ ಭಾಗ್ಯ ಕೂಡಿಬರಲೆಂದು ಕೇಳಿಕೊಳ್ಳುತ್ತಾರೆ. ಹರಕೆ ಈಡೇರಿದರೆ ಲಗ್ನಪತ್ರಿಕೆಯನ್ನು ಮೊದಲು ಅಣ್ಣಾವ್ರ ಸಮಾಧಿ ಬಳಿ ತಂದಿಟ್ಟು ಪೂಜೆ ಮಾಡಿಸುತ್ತಾರೆ. 
 
ಎಲ್ಲಾ ಧರ್ಮದ ಅಭಿಮಾನಿಗಳು ಬರುತ್ತಾರೆ, ಅವರಲ್ಲಿ ಕೆಲವರು ಪೂಜೆ ಮಾಡಿಸುತ್ತಾರೆ. ಅವರವರ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹೊರರಾಜ್ಯಗಳ ಅಭಿಮಾನಿಗಳು ಬರುತ್ತಾರೆ. ವರನಟನ ಬಗ್ಗೆ ಗೊತ್ತಿಲ್ಲದವರು ಕೇಳಿ ತಿಳಿದುಕೊಳ್ಳುತ್ತಾರೆ. ಸಿನಿಮಾಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ...

ಹೀಗೆ ಪ್ರತಿದಿನ ಭಿನ್ನಭಿನ್ನ ಜನರನ್ನು ನೋಡುತ್ತೇವೆ. ದಿನವೂ ನೂರಾರು ಮಂದಿ ಬಂದು ನೆಚ್ಚಿನ ನಟನ ಸ್ಮಾರಕವನ್ನು ಕಣ್ತುಂಬಿಕೊಂಡು ಹೋಗುತ್ತಾರೆ. 
ಬೆಳಿಗ್ಗೆ ಕಸ ಗುಡಿಸುವುದು, ಸಮಾಧಿ  ಸ್ವಚ್ಛ ಮಾಡುವುದು, ಅಣ್ಣಾವ್ರ ಫೋಟೊಗೆ ಹೂ ಹಾಕುವುದು, ದೀಪಕ್ಕೆ ಎಣ್ಣೆ ಹಾಕುವುದು ನಮ್ಮ ಕಾಯಕ. ಮುಖ್ಯವಾಗಿ ದೀಪ ಆರದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ.
 
ಅಣ್ಣಾವ್ರ ಕುಟುಂಬದ ಸದಸ್ಯರು ಇಲ್ಲಿಗೆ ಬಂದಾಗ  ಪ್ರೀತಿಯಿಂದ ಮಾತನಾಡಿಸುತ್ತಾರೆ, ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾರೆ. ಅವರ ಮನೆಯಿಂದ ನನಗೆ ಸಂಬಳ ಸಿಗುತ್ತಿದೆ. ಪುನೀತ್‌ ರಾಜಕುಮಾರ್ ಬೆಂಗಳೂರಿನಲ್ಲಿದ್ದರೆ ಪ್ರತಿದಿನ ಇಲ್ಲಿಗೆ ಬಂದು ಹೋಗುತ್ತಾರೆ.
 
ನನಗೆ ಉಳಿದುಕೊಳ್ಳಲು ಇಲ್ಲಿಯೇ ಮನೆ ಕೊಟ್ಟಿದ್ದಾರೆ. ಅಣ್ಣಾವ್ರ ಆಶೀರ್ವಾದ ಇರುವವರೆಗೂ ನಾನು ಈ ಕೆಲಸ ಮಾಡುತ್ತೇನೆ. 11 ವರ್ಷದಿಂದ ಇಲ್ಲಿರುವ ನನ್ನನ್ನು ಜನ ಲಕ್ಷ್ಮೀಪತಿ ಎಂದಲ್ಲ ‘ಸಮಾಧಿಪತಿ’ ಎಂದೇ ಕರೆಯುತ್ತಾರೆ.
***
ಅಣ್ಣಾವ್ರು ಕೊಟ್ಟ ಸಿಹಿತಿನಿಸು...
ಮಹಾಲಕ್ಷ್ಮೀ ಬಡಾವಣೆಯ ಲಲಿತಾ ಅವರು ರಾಜಕುಮಾರ್‌ ಸಾವನ್ನಪ್ಪಿದ ಮೂರನೇ ದಿನ ಸಮಾಧಿಗೆ ಪೂಜೆ ಸಲ್ಲಿಸಲು ಬಂದರು. ಅಣ್ಣಾವ್ರ ಅಭಿಮಾನಿಯೂ ಆದ ಲಲಿತಾ ಸ್ವಯಂಸೇವಕಿಯಾಗಿ ಕೆಲಸ ಮಾಡಲು ಮುಂದಾದರು. ಅಂದಿನಿಂದ ಇಂದಿನವರೆಗೂ ರಾಜ್‌ ಸ್ಮಾರಕ ಸ್ವಚ್ಛತೆ ಮಾಡುವ, ಪೂಜೆ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ.

‘15 ಮಂದಿ ಸ್ವಯಂಸೇವಕರಲ್ಲಿ  ಲಕ್ಷ್ಮೀಪತಿ, ತಿಪಟೂರು ಮಂಜ ಹಾಗೂ ನಾನು ಉಳಿದುಕೊಂಡೆವು. ನಂತರ ತಿಪಟೂರು ಮಂಜನೂ ಬಿಟ್ಟು ಹೋದ. ಈಗ ಇಬ್ಬರಿದ್ದೇವೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಇಲ್ಲಿಯೇ ಇರುತ್ತೇವೆ. ಕಸ ಗುಡಿಸುತ್ತೇವೆ. ದಿನಕ್ಕೆ ಎರಡು ಬಾರಿ ಪೂಜೆ ಮಾಡುತ್ತೇವೆ. ಅಣ್ಣಾವ್ರ ಕುಟುಂಬ ಸದಸ್ಯರು ಬಂದ್ರೆ ಪೂಜೆಗೆ ಸಿದ್ಧತೆ ಮಾಡಿಕೊಡಬೇಕು.

ಮೂರು ವರ್ಷಗಳವರೆಗೂ ಯಾವುದೇ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದೆ. ಆರು ತಿಂಗಳು ರಾಘವೇಂದ್ರ ರಾಜಕುಮಾರ್‌ ಸಂಬಳ ಕೊಡುತ್ತಿದ್ದರು. ನಂತರ ರಾಜಕುಮಾರ್‌ ಪ್ರತಿಷ್ಠಾನದಿಂದ ₹3 ಸಾವಿರ ಕೊಡುತ್ತಿದ್ದರು. ಈಗ ಶಶಿ ಏಜೆನ್ಸಿ ಕಡೆಯಿಂದ ಸಿಗುತ್ತಿದೆ’ ಎನ್ನುತ್ತಾರೆ ಲಲಿತಾ.

‘ಮದುವೆಯಾಗಿ ಹತ್ತು ವರ್ಷ ಮಕ್ಕಳಿರಲಿಲ್ಲ. ಇಲ್ಲಿಗೆ ಬಂದು ನಾಲ್ಕು ವರ್ಷವಾದ ಮೇಲೆ ಗಂಡು ಮಗು ಹುಟ್ಟಿತು. ನಮ್ಮ ಕುಟುಂಬವೇ ರಾಜಕುಮಾರ್‌ ಅಭಿಮಾನಿ ಆಗಿತ್ತು. 2000ನೇ ಇಸವಿ, ನನಗಿನ್ನೂ ಮದುವೆ ಆಗಿರಲಿಲ್ಲ. ಅಣ್ಣಾವ್ರ ಹುಟ್ಟುಹಬ್ಬ ಸಮಾರಂಭಕ್ಕೆ  ಸದಾಶಿವಗರದ ಅವರ ಮನೆಗೆ ನಾನು ಪ್ರೀತಿಸಿದ ಹುಡುಗ ನನ್ನನ್ನು ಕರೆದುಕೊಂಡು ಹೋಗಿದ್ದ.
 
ಅಣ್ಣಾವ್ರ ಹತ್ತಿರ ಪ್ರೀತಿಸುತ್ತಿರುವ ವಿಷಯ ತಿಳಿಸಿ, ಮದುವೆ ಆಗುವುದಾಗಿ ಹೇಳಿದೆವು. ಅವರು ಆಶೀರ್ವದಿಸಿ ಅವರು ಒಂದು ಬಾಕ್ಸ್ ಸ್ವೀಟ್ಸ್‌ ಹಾಗೂ ಹೂ ಕೊಟ್ಟಿದ್ದರು.  ಆ ಕ್ಷಣವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎನ್ನುತ್ತಾರೆ ಲಲಿತಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.