ADVERTISEMENT

ರಾತ್ರಿ ಜೀವನದ ಭಿನ್ನ ಮಜಲುಗಳು

ರಮೇಶ ಕೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಚಿತ್ರಗಳು: ರಂಜು ಪಿ.
ಚಿತ್ರಗಳು: ರಂಜು ಪಿ.   

ರಾತ್ರಿ 10...
ಎಂ.ಜಿ.ರಸ್ತೆಯಲ್ಲಿ ನಾಲ್ವರು ಯುವಕರು ಸೂಪರ್‌ ಬೈಕ್‌ಗಳನ್ನು ವೀಲ್ಹಿಂಗ್‌ ಮಾಡಿಕೊಂಡು ಬಂದರು. ಹಿಂಬದಿ ಕುಳಿತ  ಹುಡುಗಿಯರು ಗಟ್ಟಿಯಾಗಿ ಬೈಕ್‌ ಸವಾರರನ್ನು ಹಿಡಿದಿದ್ದರು.  ರಸ್ತೆ ಬದಿಯ ದೀಪಗಳ ಬೆಳಕು ಬೈಕ್‌ ವೀಲ್ಹಿಂಗ್‌ ಮಾಡುತ್ತಿದ್ದವರನ್ನು ಅಣುಕಿಸುವಂತಿತ್ತು.
***

ರಾತ್ರಿ 11 ಗಂಟೆ...
ಚರ್ಚ್‌ಸ್ಟ್ರೀಟ್‌ ರಸ್ತೆಯಲ್ಲಿ ಅಲ್ಲಲ್ಲಿ ಜನದಟ್ಟಣೆ. ಮೊಣಕಾಲ ಮೇಲೆ ಉಡುಪು ಧರಿಸಿದ್ದ ಯುವತಿಯರು ಕೈಯಲ್ಲಿ ಸಿಗರೇಟ್‌ ಹಿಡಿದಿದ್ದರು, ಕೆಲವು ಹುಡುಗರ ಕೈ ಜೊತೆಯಲ್ಲಿದ್ದ ಹುಡುಗಿಯರ ಸೊಂಟ ಬಳಸಿತ್ತು. ರಸ್ತೆ ಮೇಲಿದ್ದ ಕೊಳಚೆ ನೀರಿನಲ್ಲಿ ಹೈಹೀಲ್ಡ್‌ ಚಪ್ಪಲಿಯೂ ಸದ್ದು ಮಾಡುತ್ತಿತ್ತು. ಇದೇ ಸಮಯ ಸೂಕ್ತವೆಂದು ಭಿಕ್ಷುಕಿಯೊಬ್ಬಳು ಕೈಚಾಚಿ ಚಿಲ್ಲರೆ ಪಡೆದು ಧನ್ಯಳಾಗುತ್ತಿದ್ದಳು.
***

ರಾತ್ರಿ 11.30...
ತಣ್ಣನೆ ಗಾಳಿ  ಬೀಸುತ್ತಿತ್ತು. ಆದಷ್ಟೂ ಕಡಿಮೆ ಉಡುಪು ತೊಟ್ಟ ಯುವತಿಯರೇ ಹೆಚ್ಚಿದ್ದ ರಸ್ತೆ ಪಕ್ಕದಲ್ಲಿ ಸೀರೆಯುಟ್ಟ ನಾಲ್ವರು ವಿದೇಶಿ ಯುವತಿಯರಿದ್ದರು. ಇವರೂ ಸಹ ಸಿಗರೇಟ್‌ ಸೇದುತ್ತಾ ಪಬ್‌ ಒಂದರ ಮುಂದಿನ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು...
***

ರಾತ್ರಿ11.40...
ಚರ್ಚ್‌ ಸ್ಟ್ರೀಟ್‌ನಲ್ಲಿ ಮಾತಿಗೆ ಸಿಕ್ಕ ಆಸ್ಟ್ರೇಲಿಯಾ ಯುವತಿಯರು ಬೆಂಗಳೂರಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
‘ನಮ್ಮದು ಆಸ್ಟ್ರೇಲಿಯಾದ ಮೆಲ್ಬರ್ನ್. ನಮ್ಮ ಕಂಪೆನಿಯ  ಉದ್ಯೋಗಿಗಳಿಗೆ ತರಬೇತಿ ನೀಡಲೆಂದು ಇಲ್ಲಿಗೆ ಮೂರು ತಿಂಗಳಿಗೊಮ್ಮೆ ಬರುತ್ತೇವೆ. ಇಲ್ಲಿನ ಪುಸ್ತಕ ಮಳಿಗೆಗಳು, ಆಹಾರ ಇಷ್ಟವಾಯಿತು. ಅದರಲ್ಲೂ ಮಸಾಲೆ ದೋಸೆ, ವೆಜ್‌ ಬಿರಿಯಾನಿ, ಪಾನಿಪೂರಿ ಹೆಸರು ಹೇಳಲೇಬೇಕು. ನಾವೆಲ್ಲಾ ರಾಮನಗರದ ಸೀರೆ ಧರಿಸಿದ್ದೇವೆ, ಇಲ್ಲಿನ ಸಂಸ್ಕೃತಿ ಇಷ್ಟವಾಯಿತು’ ಎಂದವರ ಹೆಸರು ಜೊಯ್‌.

‘ಐದು ತಿಂಗಳಿನಿಂದ ವ್ಯಾಪಾರ ಕಡಿಮೆ ಆಗಿದೆ. ಬಾಂಬ್‌ ಸ್ಫೋಟವಾದಾಗಿನಿಂದ ಜನ ಬರುವುದು ವಿರಳವಾಗಿದೆ.  ಮೊದಲೆಲ್ಲಾ ರಾತ್ರಿ 12ರವರೆಗೂ ಜನದಟ್ಟಣೆ ಇರುತ್ತಿತ್ತು, ಈಗ 10ಗಂಟೆಗೆ ಅಂಗಡಿ ಮುಚ್ಚಿಕೊಂಡು ಮನೆಗೆ ಹೋಗುತ್ತೇವೆ. ತಡರಾತ್ರಿ 1 ಗಂಟೆಯವರೆಗೂ ಬಾರ್‌ ಮತ್ತು ಪಬ್‌ಗಳ ಅವಧಿ ವಿಸ್ತರಣೆ ಮಾಡಿದರೆ ಏನು ಪ್ರಯೋಜನ? ಇಲ್ಲಿನ ರಸ್ತೆ  ಮೇಲೆ ಚರಂಡಿ ನೀರು ಹರಿಯುತ್ತದೆ, ಹೊರಗಿನವರು ಬರಲು ಹಿಂಜರಿಯುವಂತಾಗಿದೆ. ಐದು ತಿಂಗಳ ಹಿಂದೆ ದಿನಕ್ಕೆ ₹25 ಸಾವಿರ ವ್ಯಾಪಾರವಾಗುತ್ತಿತ್ತು, ಈಗ ₹10 ಸಾವಿರವಾದರೆ ದೊಡ್ಡದು, ಕರೆಂಟ್‌ ಬಿಲ್ಲು ಕಟ್ಟುವುದಕ್ಕೂ ಕಷ್ಟವಾಗುತ್ತದೆ’ ಎಂದು ವ್ಯಾಪಾರದ ಏರಿಳಿತದ ಬಗ್ಗೆ ಮಾಹಿತಿ ನೀಡುತ್ತಾರೆ 10 ವರ್ಷಗಳಿಂದ ಚಿಲ್ಲರೆ ಅಂಗಡಿ ನಡೆಸುತ್ತಿರುವ ಸಮೀರ್‌.

***
ರಾತ್ರಿ 12...
ಚರ್ಚ್‌ ಸ್ಟ್ರೀಟ್‌ ಸೋಶಿಯಲ್‌ ಪಬ್‌ನಲ್ಲಿ ಡಿಜೆ ಹಾಕುತ್ತಿದ್ದ ಸಂಗೀತಕ್ಕೆ ತಲೆದೂಗಿ, ಮೈಮರೆತು ಹೆಜ್ಜೆ ಹಾಕುತ್ತಿದ್ದ ಯುವತಿಯರು, ಬಿಯರ್‌, ವೈನ್‌ ಕುಡಿದವರೂ ಅಬ್ಬರದ ಸಂಗೀತಕ್ಕೆ ದೆವ್ವ ಬಂದವರಂತೆ ಕುಣಿಯುತ್ತಿದ್ದರು.
‘ವಸತಿ ಪ್ರದೇಶಗಳ ಸುತ್ತ ರಾತ್ರಿ 1 ಗಂಟೆ ವರೆಗೆ ಬಾರ್‌ ಮತ್ತು  ಪಬ್‌ಗಳು ತೆರೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ವಾರಾಂತ್ಯದ ದಿನಗಳಾದರೆ ಓಕೆ, ವಾರಪೂರ್ತಿ ತಡರಾತ್ರಿ ತೆಗೆದಿರುವುದರಿಂದ ತೊಂದರೆಯಾಗುತ್ತದೆ. ಕಮರ್ಷಿಯಲ್‌ ಬೀದಿಗಳಲ್ಲಿ ವಾರಪೂರ್ತಿ ಅವಧಿ ವಿಸ್ತರಣೆ ಮಾಡಿರುವುದು ಯಾರಿಗೂ ತೊಂದರೆ ಆಗುವುದಿಲ್ಲ’ ಎಂದು ಹೇಳುತ್ತಾರೆ ಸಾಫ್ಟ್‌ವೇರ್‌ ಉದ್ಯೋಗಿ ರೋಹಿತ್‌ ನಾಯರ್‌.
ಪಬ್‌ನಿಂದ ಹೊರಬಂದರೂ ಒಳಗಿನ ಸಂಗೀತ ರಸ್ತೆಯಲ್ಲೂ ಕೇಳಿಸುತ್ತಿತ್ತು.
***

ರಾತ್ರಿ 12.30...
ಚರ್ಚ್‌ಸ್ಟ್ರೀಟ್‌ ರಸ್ತೆಯಂತೆಯೇ ಬ್ರಿಗೇಡ್‌ ರಸ್ತೆಯಲ್ಲಿಯೂ ಜನದಟ್ಟಣೆ ಇತ್ತು. ಪಬ್‌ಗಳಿಗೆ ಆಗ ತಾನೆ ಬರುತ್ತಿದ್ದ ಪಡ್ಡೆ ಹುಡುಗರು, ಗ್ರಾಹಕರ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಆಟೊ ಚಾಲಕರು, ದಾರಿಯಲ್ಲಿ ಸುಮ್ಮನೆ ಹೋಗದೇ ನಿಂತಿದ್ದ ನಾಲ್ಕೈದು  ಯುವತಿಯರನ್ನು ಕೆಣಕುತ್ತಿದ್ದ ಬೀದಿ ಕಾಮಣ್ಣರು... ಈ ಎಲ್ಲಾ ದೃಶ್ಯಗಳು ರಾತ್ರಿ ಜಗತ್ತಿನ ಹಲವು ಮುಖಗಳನ್ನು ಅನಾವರಣಗೊಳಿಸುವಂತಿದ್ದವು.
‘ರಾತ್ರಿ ಒಂದು ಗಂಟೆಯವರೆಗೂ ಆಟೊ ಓಡಿಸುತ್ತೇನೆ. ದೊಮ್ಮಲೂರು, ಕೋರಮಂಗಲ, ಇಂದಿರಾನಗರ, ಆರ್‌.ಟಿ.ನಗರ ಕಡೆ ಬಾಡಿಗೆ ಹೋಗುತ್ತೇನೆ. ಕಳೆದ ವಾರದಿಂದ ರಾತ್ರಿ ವೇಳೆಯ ಗ್ರಾಹಕರು ಸ್ವಲ್ಪ ಹೆಚ್ಚಾಗಿದ್ದಾರೆ. ಬೆಳಿಗ್ಗೆ ಗ್ಯಾರೇಜ್‌ನಲ್ಲಿ ಕೆಲಸ ಮಾಡಿದರೆ ರಾತ್ರಿಯಾಗುತ್ತಿದ್ದಂತೆ ಆಟೊ ಓಡಿಸಲು ಅಣಿಯಾಗುತ್ತೇನೆ’ ಎನ್ನುತ್ತಾರೆ ಟ್ಯಾನರಿ ರಸ್ತೆ ಆಟೊ ಚಾಲಕ ತಪ್ರೇಸ್‌.
***

ರಾತ್ರಿ 12:50...
ಗರುಡಾ ಮಾಲ್‌ನಲ್ಲಿ ತಡರಾತ್ರಿ ಸಿನಿಮಾ ನೋಡಿಕೊಂಡು ಬರುವ ಜನ ಕಂಡು ಬಂದರು. 1.15ರ ಸುಮಾರಿಗೆ ಇಂದಿರಾನಗರ 100 ಅಡಿ ರಸ್ತೆಯಲ್ಲಿ  ಅಲ್ಲಲ್ಲಿ ಜನ ಕಂಡು ಬಂದರು.
‘ಸದ್ಯ ನಮ್ಮ ಮಾಲ್‌ನಲ್ಲಿ ಮಾಮೂಲಿಯಂತೆ ಅಂಗಡಿಗಳನ್ನು ನಡೆಸುತ್ತಿದ್ದೇವೆ. ಉದ್ಯೋಗಿಗಳ ಕೊರತೆ ಇದೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಸಮಯ ವಿಸ್ತರಿಸುವ ಯೋಜನೆ ಮಾಡಿಕೊಳ್ಳುತ್ತೇವೆ. ಕಳೆದ ವಾರದಿಂದ ಶೇ 20ರಷ್ಟು ಗ್ರಾಹಕರು ಹೆಚ್ಚಾಗಿದ್ದಾರೆ, ಅದು ರೆಸ್ಟೊರೆಂಟ್‌ಗೆ ಬರುವವರು’ ಎನ್ನುತ್ತಾರೆ ಒರಾಯನ್‌ ಮಾಲ್‌ನ ಸಿಇಒ ವಿಶಾಲ್‌ ಮೀರ್‌ಚಾಂದನಿ. (ಬ್ರಿಗೇಡ್‌ ಎಂಟರ್‌ಪ್ರೈಸಸ್‌ ವಾಣಿಜ್ಯ ಮತ್ತು ಚಿಲ್ಲರೆ ವಿಭಾಗ).

***
‘ಸಮಾಜಕ್ಕೆ ಒಳ್ಳೆಯದಲ್ಲ’
‘ಬಾರ್‌ ಮತ್ತು ಪಬ್‌ಗಳ ಅವಧಿ ವಿಸ್ತರಣೆ ಆಗಿರುವುದರಿಂದ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುವ ಅಪಾಯವಿದೆ. ಅದರಲ್ಲೂ ಅತ್ಯಾಚಾರದಂಥ ಕೃತ್ಯಗಳು ಜಾಸ್ತಿಯಾಗಬಹುದು, ಕ್ಯಾಬ್‌ಗಳಲ್ಲಿಯೂ ಸುರಕ್ಷೆ ಇಲ್ಲ, ಈ ಹಿಂದೆ ಕಡಿಮೆ ಕುಡಿಯುತ್ತಿದ್ದವರು ಈಗ ಮೈಮೇಲೆ ಜ್ಞಾನ ಇಲ್ಲದಂತೆ ಕುಡಿದು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ನಾನು ಎರಡು ತಿಂಗಳಿಗೊಮ್ಮೆ ಸ್ನೇಹಿತರೊಂದಿಗೆ ಪಬ್‌ಗಳಿಗೆ ಬರುತ್ತೇನೆ. 12.30ರವೆಗೂ ಇರುತ್ತೇನೆ. ಸಮಯ ವಿಸ್ತರಣೆ ಮಾಡಿದ್ದು ಸಮಾಜಕ್ಕೆ ಒಳ್ಳೆಯದೇನಲ್ಲ’

ADVERTISEMENT

ಹೇಮಂತ್‌, ವೈಟ್‌ಫೀಲ್ಡ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.