ADVERTISEMENT

‘ಲಯನ್‌’ ಎಂಬ ಕರುಳಿನ ಕೂಗು

ಸುರೇಖಾ ಹೆಗಡೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಸನ್ನಿ ಪವಾರ್‌
ಸನ್ನಿ ಪವಾರ್‌   

ವಯಸ್ಸು ಐದು. ಅಣ್ಣನೊಂದಿಗೆ ರೈಲು ನಿಲ್ದಾಣಕ್ಕೆ ಬರುವ ಸರೂವಿಗೆ ನಿಲ್ದಾಣದಲ್ಲೇ ನಿದ್ದೆಯ ಜೊಂಪು. ನಡುರಾತ್ರಿಯಲ್ಲಿ ಎಚ್ಚೆತ್ತು ಅಣ್ಣನಿಗಾಗಿ ಕನವರಿಸುತ್ತಾನೆ. ನಿಂತ ರೈಲಿನ ಖಾಲಿ ಬೋಗಿಯಲ್ಲಿ ಹುಡುಕಿ ಹುಡುಕಿ ಸುಸ್ತಾಗಿ ನಿದ್ದೆಗೆ ಜಾರುತ್ತಾನೆ.

ವೇಗವಾಗಿ ಓಡುವ ರೈಲಿನಲ್ಲಿ ಸರೂವಿಗೆ ಅನಾಥ ಭಾವ ಕಾಡಲಾರಂಭಿಸುತ್ತದೆ. ತಾನೆಲ್ಲೋ ಕಳೆದು ಹೋಗುತ್ತಿದ್ದೇನೆ ಎಂದು ಅರಿವಿಗೆ ಬರುತ್ತಿದ್ದಂತೆ ಅಳುತ್ತಾನೆ, ಬಾಗಿಲು ಬಡಿಯುತ್ತಾನೆ, ಕಾಪಾಡಿ ಎಂದು ಕೂಗಿಕೊಳ್ಳುತ್ತಾನೆ.  ತಬ್ಬಲಿಯ ಭಾವದಲ್ಲಿ ಅತ್ತೂ ಅತ್ತೂ ಬಸವಳಿದ ಆ ಪುಟ್ಟ ಮನಸ್ಸು ಕಿಟಕಿಯಾಚೆ ಕಣ್ಣು ಹಾಯಿಸಿ ಸಹಾಯ ಹಸ್ತ ಬೇಡುತ್ತದೆ. ಕೂಗು ಕೇಳುವರಿಲ್ಲದೆ ಮರುಗುತ್ತ ಮತ್ತೆ ಮತ್ತೆ ನಿದ್ದೆಗೆ ಜಾರುತ್ತಾನೆ ಸರೂ.

ಕೊನೆಗೆ ಆತ ಇದ್ದ ರೈಲು ಬಂದು ನಿಲ್ಲುವುದು 1600 ಕಿ.ಮೀ. ದೂರದ ಕೋಲ್ಕತ್ತಕ್ಕೆ! ಕಲ್ಲು ಆಯುವ ಅಮ್ಮ, ಅಣ್ಣ ಗುಡ್ಡು, ಓಡಾಡಿದ ಸ್ಥಳಗಳು, ಆಟವಾಡಿದ ಜಾಗ, ಮನೆ ಬಿಟ್ಟರೆ ಬೇರೇನೂ ತಿಳಿಯದ ಮುಗ್ಧ ವಯಸ್ಸದು. ಹೀಗೆ ಮನೆಯಿಂದ ಬೇರಾದ ಸರೂ ನಾನಾ ರೀತಿಯಲ್ಲಿ ಸಂಕಷ್ಟಕ್ಕೆ ಗುರಿಯಾಗುತ್ತಾನೆ. ರೈಲು ನಿಲ್ದಾಣದಲ್ಲಿ ದುಷ್ಟರಿಂದ (ಮಾನವ ಕಳ್ಳ ಸಾಗಣೆದಾರರು) ತಪ್ಪಿಸಿಕೊಳ್ಳುವ ಸರೂ ಮಹಿಳೆಯೊಬ್ಬಳ ಮನೆ ಸೇರುತ್ತಾನೆ, ಸ್ನಾನ ಮಾಡಿಸಿ, ಊಟ ತಿಂಡಿ ನೀಡಿ, ಅಮ್ಮನಂತೆ ಮುದ್ದು  ಮಾಡುವ ಆಕೆಯೂ ಆತನನ್ನು ಮಾರಾಟ ಮಾಡುವ ಹುನ್ನಾರ ನಡೆಸಿರುತ್ತಾಳೆ.

ADVERTISEMENT

ಚುರುಕುಬುದ್ಧಿಯ ಸರೂ ಅಲ್ಲಿಂದಲೂ ತಪ್ಪಿಸಿಕೊಂಡು, ದೇವರಿಗಿಟ್ಟ ಬಾಳೆಹಣ್ಣು, ರಸ್ತೆಯಲ್ಲಿ ಸಿಕ್ಕ ಆಹಾರಗಳನ್ನೇ ಸೇವಿಸಿ ಬದುಕುತ್ತಾನೆ. ಕೆಲಕಾಲ ಪ್ಲಾಸ್ಟಿಕ್‌ ಆಯುತ್ತಾನೆ. ಗೊತ್ತುಗುರಿಯಿಲ್ಲದೆ ಅಲೆಯುವ ಸರುವನ್ನು ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗುತ್ತಾನೆ. ಆತನ ವಿವರ ಕಾಣೆಯಾದವರ ಪಟ್ಟಿಯಲ್ಲೂ ಪ್ರಕಟವಾಗುತ್ತದೆ. ತಿಂಗಳು ಕಳೆದರೂ ಸರೂವಿನ ಬಗೆಗೆ ಯಾರೂ ವಿಚಾರಿಸುವುದಿಲ್ಲ.

ಕೊನೆಗೆ ದೂರದ ಆಸ್ಟ್ರೇಲಿಯಾದ ದಂಪತಿ ಸರೂವನ್ನು ದತ್ತು ತೆಗೆದುಕೊಳ್ಳುತ್ತಾರೆ. ದೂರದೂರು, ಗೊತ್ತಿಲ್ಲದ ಭಾಷೆ, ಪರಿಚಯವಿಲ್ಲದವರ  ಮಧ್ಯೆ ಸರೂ 25 ವರ್ಷ ಖುಷಿಖುಷಿಯಾಗಿ ಆಸ್ಟ್ರೇಲಿಯಾವೇ ಮನೆ ಎನ್ನುವಂತೆ ಬದುಕುತ್ತಿರುತ್ತಾನೆ. ಭಾರತದ ಹಲವು ಸ್ನೇಹಿತರ ಪರಿಚಯವಾದ ಮೇಲೆ ತನ್ನೂರು, ಅಮ್ಮ, ಅಣ್ಣನ ನೆನಪು ಆತನನ್ನು ಬಹುವಾಗಿ ಕಾಡುತ್ತದೆ.  ನನ್ನ ನೆನಪಲ್ಲಿ ಅಮ್ಮ ಎಷ್ಟು ಅತ್ತಳೋ, ಅಣ್ಣ ಗುಡ್ಡು ಗಲ್ಲಿಗಲ್ಲಿ ಸುತ್ತಿ ಅದೆಷ್ಟು ಸುಸ್ತಾದನೋ ಎನ್ನುವ ಯೋಚನೆ ಅವನ ಮನಸ್ಸನ್ನು ಕಲುಕಿಬಿಡುತ್ತದೆ.

ಚಿಕ್ಕಂದಿನಲ್ಲಿ ಕಂಡ ಊರಿನ ಚಿತ್ರಣವನ್ನು ಎಳೆಎಳೆಯಾಗಿ ನೆನಪಿಸಿಕೊಳ್ಳುತ್ತಾ, ದಿನಗಟ್ಟಲೆ, ಹಗಲು ರಾತ್ರಿ ಎನ್ನದೆ ಗೂಗಲ್‌ನಲ್ಲಿ ತನ್ನೂರನ್ನು ಹುಡುಕುತ್ತಾನೆ. 25 ವರ್ಷ ಸಾಕಿ ಸಲಹಿದ ಅಮ್ಮನನ್ನು ಒಪ್ಪಿಸಿ ಹೆತ್ತಮ್ಮನ ಹುಡುಕಾಟಕ್ಕಾಗಿ ಭಾರತಕ್ಕೆ ಬರುತ್ತಾನೆ. ಅಮ್ಮನ ಮಡಿಲು ಸೇರುತ್ತಾನೆ. ಅಣ್ಣ ಗುಡ್ಡು ತೀರಿಕೊಂಡಿರುವುದು ಆತನನ್ನು ಕೆಲ ಕ್ಷಣ ಕಾಡಿದರೂ ಎರಡು ದಶಕದ ನಂತರ ಅಮ್ಮನ ಮಡಿಲಿಗೆ ಮರಳಿದ್ದನ್ನು ನೆನೆದು ಹರ್ಷಿಸುತ್ತಾನೆ.

‘ಲಯನ್‌’ಸಿನಿಮಾದ ಈ ಕಥಾನಕ ನೈಜ ಕಥೆಯನ್ನು ಆಧರಿಸಿ ನಿರ್ಮಿಸಿದ ಚಿತ್ರ. ಸರೂವಿನ ಮುಗ್ಧತೆ, ಗುಡ್ಡುವಿನ ಪ್ರೀತಿ, ಅಮ್ಮನ ಕಳವಳ, ಬದುಕು ಹೇಳುವ ಪಾಠ, ಜನರ ಮನಸ್ಸಿನ ವಿಕೃತಿ, ಇನ್ಯಾರದೋ ಮಕ್ಕಳನ್ನು ತನ್ನದೇ ಎನ್ನುವಂತೆ ಸಲಹುವ ಮಾನವೀಯ ಮನಸ್ಸು...ಹೀಗೆ ಬದುಕಿನ ವಿವಿಧ ಭಾವಗಳನ್ನು ಫ್ರೇಂನಲ್ಲಿ ಹಿಡಿದ ರೀತಿ ಇಷ್ಟವಾಗುತ್ತದೆ. 

ಸರೂವಿನ ಪಾತ್ರದಲ್ಲಿ ಪ್ರೇಕ್ಷಕರೂ ಒಂದಾಗುವಂತೆ ಸನ್ನಿ ಪವಾರ್‌ (ಬಾಲ್ಯದ ಸರೂ) ಹಾಗೂ ದೇವ್‌ ಪಟೇಲ್‌ ಹೃದಯಸ್ಪರ್ಶಿಯಾಗಿ ಅಭಿನಯಿಸಿದ್ದಾರೆ. ಚಿತ್ರವನ್ನು ಹೆಣೆದ ರೀತಿ ಅದ್ಭುತವಾಗಿದ್ದು ಬದುಕಿನ ಬಗೆಗೆ ಭಯ, ನೋವುಂಡವರ ಬಗೆಗೆ ಕನಿಕರದ ಭಾವ ಒಟ್ಟಾಗಿ ಉಮ್ಮಳಿಸಿ ಬರುತ್ತದೆ. ಹೀಗೆ ಸಿನಿಮಾ ಮನಸ್ಸಿನೊಳಗೆ ಹಿಂಸೆಯ ನೋವನ್ನು ನೀಡಿದರೂ ಚಿತ್ರದ ಕೊನೆಯಲ್ಲಿ ಒಂದಾಗುವ ತಾಯಿ ಮಕ್ಕಳ ಸಂತಸದ ಮೂಲಕ ಸಮಾಧಾನ ನೀಡುತ್ತದೆ.

ಈ ಚಿತ್ರವನ್ನು ನಿರ್ದೇಶಿಸಿದ್ದು ಗಾರ್ಥ್‌ ಡೇವಿಸ್‌. ಸರೂ ಬ್ರಿಯರ್ಲೆ ರಚಿಸಿದ ‘ದ ಲಾಂಗ್‌ ವೇ ಟು ಹೋಂ‘ ಕೃತಿಯನ್ನಾಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಕಿರುದೃಶ್ಯವೊಂದರಲ್ಲಿ ನವಾಜುದ್ದೀನ್‌ ಸಿದ್ದಿಕಿ ಅವರೂ ಕಾಣಿಸಿಕೊಂಡಿದ್ದಾರೆ.   

ಲಯನ್
ನಿರ್ದೇಶನ: ಗಾರ್ಥ್‌ ಡೇವಿಸ್‌
ಕಲಾವಿದರು: ಸನ್ನಿಪವಾರ್‌, ದೇವ್‌ಪಟೇಲ್‌, ಪ್ರಿಯಾಂಕಾ ಬೋಸ್‌, ನವಾಜುದ್ದೀನ್‌ ಸಿದ್ದಿಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.