ADVERTISEMENT

ವಾಗ್ಗೇಯ ವೈಭವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST
ವಾಗ್ಗೇಯ ವೈಭವ ಇಂದಿನಿಂದ
ವಾಗ್ಗೇಯ ವೈಭವ ಇಂದಿನಿಂದ   

ಶಾಸ್ತ್ರೀಯ ಸಂಗೀತಕ್ಕೆ ಭದ್ರವಾದ ತಳಹದಿ ಹಾಕಿದವರು ವಾಗ್ಗೇಯಕಾರರು. ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗಳು ಮಾತ್ರವಲ್ಲದೆ ಮುತ್ತಯ್ಯ ಭಾಗವತರು, ಪುರಂದರದಾಸ, ಕನಕದಾಸರೂ ವಾಗ್ಗೇಯಕಾರರು ಎನಿಸಿಕೊಂಡು ಸಾವಿರಾರು ಕೃತಿ, ಕೀರ್ತನೆ, ದೇವರನಾಮಗಳನ್ನು ರಚಿಸಿಕೊಟ್ಟಿದ್ದಾರೆ.

ಇವೆಲ್ಲ ಇಂದೂ ಜನಪ್ರಿಯವಾಗಿದ್ದು, ಸಂಗೀತ ಕಛೇರಿಗಳಲ್ಲಿ ಈ ಕೃತಿ ಕೀರ್ತನೆಗಳು ಗಾಯಕ, ವಾದಕರಿಂದ ವಿಜೃಂಭಿಸುತ್ತವೆ.
ಈ ಮಹಾನ್‌ ವಾಗ್ಗೇಯಕಾರರನ್ನು ನೆನಪಿಸಿಕೊಳ್ಳಲೆಂದೇ ನಗರದ ಸಂಗೀತ ಸಂಸ್ಥೆಗಳು ಆರಾಧನೋತ್ಸವವನ್ನು ಆಚರಿಸಿ ನಮನ ಸಲ್ಲಿಸುವುದು ರೂಢಿ.

ಸದ್ಯ ನಗರದ ಬಸವನಗುಡಿಯಲ್ಲಿರುವ ಬಾಲಾಜಿ ಸಂಗೀತ ವಿದ್ಯಾಲಯ ಟ್ರಸ್ಟ್‌ ಪ್ರತಿವರ್ಷದಂತೆ ಈ ವರ್ಷವೂ ‘ವಾಗ್ಗೇಯ ವೈಭವ’ ಹೆಸರಿನಲ್ಲಿ ಆರಾಧನೋತ್ಸವ ಆಚರಿಸಲು ಸಜ್ಜಾಗಿದೆ. ವಿದ್ಯಾಲಯದ ರೂವಾರಿ, ಕರ್ನಾಟಕ ಸಂಗೀತದ ಹಿರಿಯ ಗಾಯಕ ವಿದ್ವಾನ್‌ ಡಿ.ವಿ. ನಾಗರಾಜನ್‌ ಮುಂದಾಳತ್ವದಲ್ಲಿ ನಾಲ್ಕು ದಿನಗಳ ಈ ಸಂಗೀತ ಹಬ್ಬದಲ್ಲಿ ವಿವಿಧ ಸಂಗೀತ ಪ್ರತಿಭೆಗಳ ಅನಾವರಣವಾಗಲಿದೆ.

ಬುಧವಾರ ಸಂಜೆ ಕಾರ್ಯಕ್ರಮ ಉದ್ಘಾಟನೆ. ಬಾಲಾಜಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ. ಗುರುವಾರ ಅತಿಥಿ ಕಲಾವಿದರಿಂದ ಸಂಗೀತ ಸೇವೆ. ಶುಕ್ರವಾರ ವಿಶೇಷ ಕಾರ್ಯಕ್ರಮ, ದೇವಿಸ್ತುತಿ ಗೋಷ್ಟಿ ಗಾಯನ. ಶನಿವಾರವೂ ಅತಿಥಿ ಕಲಾವಿದರಿಂದ ಸಂಗೀತ ಸೇವೆ. ಭಾನುವಾರ ಬೆಳಿಗ್ಗೆ 7.30ಕ್ಕೆ ಜಯನಗರ ಎಂಟನೇ ಬ್ಲಾಕ್‌ ಮುಖ್ಯರಸ್ತೆಗಳಲ್ಲಿ ‘ಊಂಛ ವೃತ್ತಿ’ ಸಂಗೀತ ಕಾರ್ಯಕ್ರಮ.

11ಗಂಟೆಗೆ ‘ಕಲಾ ನಮನ’; ವಿದುಷಿ ಕಲಾವತಿ ಅವಧೂತ್‌ ಮತ್ತು ವಿದ್ವಾನ್‌ ಬಿ. ಧ್ರುವರಾಜ್‌ ಅವರಿಗೆ ಸನ್ಮಾನವಿದೆ. ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ಜೈರಾಜ್‌, ಇನ್‌ಫೋಸಿಸ್‌ ಪ್ರಮುಖರಾದ ಸುಧಾ ಮೂರ್ತಿ ಮತ್ತು ಜಯರಾಮ ಸೇವಾಮಂಡಳಿ ಅಧ್ಯಕ್ಷರಾದ ಆರ್‌.ಎನ್‌.ಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 12 ಗಂಟೆಗೆ ಪಂಚರತ್ನ ಕೃತಿಗಳ ಗಾಯನ ನಡೆಯಲಿದೆ.
ಸ್ಥಳ: ಜಯರಾಮ ಸೇವಾ ಮಂಡಳಿ, ಜಯನಗರ ಎಂಟನೇ ಬ್ಲಾಕ್‌. ಬುಧವಾರ ಸಂಜೆ 4ರಿಂದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.