ADVERTISEMENT

‘ವಾದ್ಯ ವೈಭವ’ದ ನಿನಾದ, ಗೌರವ ಪುರಸ್ಕಾರ

ಪ್ರೊ.ಮೈ.ವಿ.ಸು
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ಪ್ರೊ. ಟಿ.ಎನ್. ಕೃಷ್ಣನ್
ಪ್ರೊ. ಟಿ.ಎನ್. ಕೃಷ್ಣನ್   

ರಾಷ್ಟ್ರದ ಅತ್ಯಂತ ಹಿರಿಯ ಸಂಗೀತ ಸಭೆಯಾದ ಬೆಂಗಳೂರು ಗಾಯನ ಸಮಾಜವು 1968ರಲ್ಲಿ ಆರಂಭಿಸಿದ ಸಂಗೀತ ಸಮ್ಮೇಳನ ನಾಡಿನಾದ್ಯಂತ ಹೆಸರುವಾಸಿ. 2013ರಲ್ಲಿ ‘ವಾದ್ಯ ವೈಭವ’ ಎಂಬ ವಿಶಿಷ್ಟ ಸಂಗೀತೋತ್ಸವಕ್ಕೂ ನಾಂದಿ ಹಾಡಿತು.

ಈ ವರ್ಷದ ವಾದ್ಯ ವೈಭವದಲ್ಲಿ ವೀಣೆ ವೆಂಕಟಗಿರಿಯಪ್ಪನವರ ಸ್ಮರಣೆಯೂ ಮಿಳಿತವಾಗಿರುವುದು ಇನ್ನೊಂದು ವಿಶೇಷ. ಇದೇ ಸಂದರ್ಭದಲ್ಲಿ ವಾದ್ಯ ಸಂಗೀತಕ್ಕೆ ಗಣ್ಯ ಕೊಡುಗೆ ನೀಡಿರುವ ಓರ್ವ ಹಿರಿಯ ಕಲಾವಿದರಿಗೆ ಪ್ರಶಸ್ತಿ ಹಾಗೂ ‘ನಾದಶ್ರೀ’ ಬಿರುದು ನೀಡಿ ಗೌರವಿಸಲಾಗುವುದು. ಡಾ.ಜಯಂತಿ ಕುಮರೇಶನ್ ಹಾಗೂ ವಿದ್ವಾನ್ ಕುಮರೇಶನ್ ಪ್ರಾಯೋಜಿತ ಪ್ರಶಸ್ತಿಗೆ (ರೂ.50,000) ಈ ವರ್ಷ ಭಾಜನರಾಗಲಿರುವವರು ಪ್ರೊ. ಟಿ.ಎನ್. ಕೃಷ್ಣನ್.
ನಾದಶ್ರೀ ಪುರಸ್ಕೃತರ ಬಗ್ಗೆ...

ಪ್ರೊ. ಟಿ.ಎನ್. ಕೃಷ್ಣನ್ ಅವರು ತಂದೆ ಎ. ನಾರಾಯಣ ಅಯ್ಯರ್ ಅವರಲ್ಲಿ ಎಳೆಯ ವಯಸ್ಸಿನಿಂದಲೇ ಸಂಗೀತ ಕಲಿಯಲಾರಂಭಿಸಿ, ಮುಂದೆ ಸಂಗೀತ ದಿಗ್ಗಜ ಶೆಮ್ಮಂಗುಡಿ ಶ್ರೀನಿವಾಸಯ್ಯರ್ ಅವರಲ್ಲಿ ಪಾಠ ಪಡೆದರು.

ADVERTISEMENT

ದೀರ್ಘ ಕಾಲದ ಶಿಸ್ತಿನ ಶಿಕ್ಷಣ, ಕೃಷ್ಣನ್ ಅವರನ್ನು ಒಬ್ಬ ಶ್ರೇಷ್ಠ ಪಿಟೀಲು ವಾದಕರಾಗಿ ರೂಪಿಸಿತು. ಜೊತೆಗೆ ಆ ಕಾಲದ ಹಿರಿಯ ವಿದ್ವಾಂಸರುಗಳಿಗೆ ಅನೇಕ ದಶಕಗಳ ಕಾಲ ಪಕ್ಕವಾದ್ಯ ನುಡಿಸುತ್ತಾ-ನುಡಿಸುತ್ತಾ ಕೃಷ್ಣನ್ ಒಬ್ಬ ದಕ್ಷ ಪಕ್ಕವಾದ್ಯಗಾರರಾಗಿ ಬೆಳಗತೊಡಗಿದರು. ಪ್ರಧಾನ ಕಲಾವಿದರನ್ನು ನೆರಳಿನಂತೆ ಅನುಸರಿಸುತ್ತಾ, ಗಾಯನದ ಸ್ವಾದ ಹೆಚ್ಚಿಸುತ್ತಾ, ಹಿತ-ಮಿತವಾಗಿ ಪಸರಿಸುತ್ತಾ ವಾದ್ಯ ಧರ್ಮವನ್ನು ಎತ್ತಿ ಹಿಡಿಯುತ್ತಾ ಅವರು ನುಡಿಸುವರು.

ತಮ್ಮ ಎಂಟನೇ ವಯಸ್ಸಿನಿಂದಲೇ ಕಛೇರಿ ಮಾಡತೊಡಗಿದ ಕೃಷ್ಣನ್ ಅವರು ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಆಲತ್ತೂರು ಸಹೋದರರು, ಚೆಂಬೈ ವೈದ್ಯನಾಥ ಭಾಗವತರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್ ಮುಂತಾದ ಹಿರಿಯರಿಗೆಲ್ಲಾ ಪಿಟೀಲು ಪಕ್ಕವಾದ್ಯ ನುಡಿಸಿ ಜನಪ್ರಿಯರಾದರು.

ಮೇರು ಪಿಟೀಲು ವಾದಕರಷ್ಟೇ ಅಲ್ಲ, ಟಿ.ಎನ್.ಕೃಷ್ಣನ್ ಅವರು ದಕ್ಷ ಬೋಧಕರಾಗಿಯೂ ಗೌರವಾನ್ವಿತರು. ಮಗಳು ವಿಜಿ ಕೃಷ್ಣನ್, ಶ್ರೀರಾಮ ಕೃಷ್ಣನ್, ಚಾರುಮತಿ ರಘುರಾಮನ್ ಅವರ ಶಿಷ್ಯರಲ್ಲಿ ಕೆಲವರು. ಜೊತೆಗೆ ದೆಹಲಿ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಡೀನ್ ಆಗಿ ನೂರಾರು ಜನಕ್ಕೆ ಸಂಗೀತ ಶಿಕ್ಷಣ ನೀಡಿದ್ದಾರೆ.

ಸಹಜವಾಗೇ ಪ್ರೊ. ಟಿ.ಎನ್. ಕೃಷ್ಣನ್ ಅನೇಕ ಗೌರವ-ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇದೀಗ ಬೆಂಗಳೂರು ಗಾಯನ ಸಮಾಜದಿಂದ
ಜೀವಮಾನದ ಸಾಧನೆಗೆ ‘ನಾದಶ್ರೀ’ ಪ್ರಶಸ್ತಿಯನ್ನು ಭಾನುವಾರದಂದು (ಮಾ. 26) ಪೂಜ್ಯ ಶ್ರೀಶ್ರೀ ಯದುಗಿರಿ ಯತಿರಾಜ ನಾರಾಯಣ ಜೀಯರ್ ಅವರಿಂದ ಸ್ವೀಕರಿಸುವರು.

***

ಕಾರ್ಯಕ್ರಮದ ವಿವರ

ವಾದ್ಯವೈಭವ: ಶನಿವಾರ ವಯೊಲಿನ್‌–ಪಿಯಾನೊ ಜುಗಲ್‌ಬಂದಿ. ಎಚ್‌.ಕೆ.ವೆಂಕಟರಾಮ್‌–ಪಿಟೀಲು, ಅನಿಲ್‌ ಶ್ರೀನಿವಾಸನ್‌–ಪಿಯಾನೊ, ಜಯಚಂದ್ರರಾವ್‌– ಮೃದಂಗ, ಗಿರಿಧರ ಉಡುಪ–ಘಟ.

ಭಾನುವಾರ ವೀಣಾ ವೆಂಕಟಗಿರಿಯಪ್ಪ ಸ್ಮರಣಾರ್ಥ ಕಾರ್ಯಕ್ರಮ. ಬೆಳಿಗ್ಗೆ 10ಕ್ಕೆ ಗೋಷ್ಠಿ. ಜಯಂತಿ ಕುಮರೇಶ್‌ (ಸರಸ್ವತಿ ವೀಣೆ–ನಡೆದು ಬಂದ ದಾರಿ),  ಡಿ.ಬಾಲಕೃಷ್ಣ (ಮೈಸೂರು ವೀಣಾ ಬಾನಿ), ಪ್ರಮಥ್‌ ಕಿರಣ್‌ (ಭಾರತೀಯ ವಾದ್ಯಗಳಲ್ಲಿ ಧ್ವನಿವರ್ಧಕ ಅಳವಡಿಕೆ).

ಸಂಜೆ 6ಕ್ಕೆ ಪಿಟೀಲು ವಿದ್ವಾಸ ಟಿ.ಎಸ್‌.ಕೃಷ್ಣನ್‌ ಅವರಿಗೆ ‘ನಾದಶ್ರೀ’ ಬಿರುದು ಪ್ರದಾನ. ಸಂಜೆ 6.30ಕ್ಕೆ ಟಿ.ಎನ್‌. ಕೃಷ್ಣನ್‌ ಅವರಿಂದ ಪಿಟೀಲು ಕಛೇರಿ. ತಿರುವಾಯೂರು ಭಕ್ತವತ್ಸಲಂ–ಮೃದಂಗ, ವೈಕೊಂ ಗೋಪಾಲಕೃಷ್ಣನ್‌– ಘಟ. ಆಯೋಜನೆ/ಸ್ಥಳ– ಬೆಂಗಳೂರು ಗಾಯನ ಸಮಾಜ, ಕೆ.ಆರ್‌.ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.