ADVERTISEMENT

‘ಶಾಂತಿಯ ಓಯಸಿಸ್‌’ನ ಸಂಘರ್ಷದ ಕತೆ

ರೋಹಿಣಿ ಮುಂಡಾಜೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
‘ಶಾಂತಿಯ ಓಯಸಿಸ್‌’ನ ಸಂಘರ್ಷದ ಕತೆ
‘ಶಾಂತಿಯ ಓಯಸಿಸ್‌’ನ ಸಂಘರ್ಷದ ಕತೆ   

ಗಾಂಧಿಭವನದಲ್ಲಿ ಇತ್ತೀಚೆಗೆ ‘ಅಂತರರಾಷ್ಟ್ರೀಯ ಶಾಂತಿ ಚಿತ್ರೋತ್ಸವ’ ನಡೆಯಿತು. ‘ಬಿಯಾಂಡ್‌ ಥ್ರೆಶ್‌ಹೋಲ್ಡ್ಸ್‌ ಆಫ್‌ ಕಾನ್‌ಫ್ಲಿಕ್ಟ್‌’ (ಸಂಘರ್ಷದ ಬಿಗಿ ಹಿಡಿತದಲ್ಲಿ) ಎಂಬ ಅಡಿ ಟಿಪ್ಪಣಿಯಿದ್ದ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡದ್ದು 12 ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳು.

ಮೊದಲು ಪ್ರದರ್ಶನಗೊಂಡ ‘ಫಸ್ಟ್‌ ಲೆಸನ್‌ ಇನ್‌ ಪೀಸ್‌’  ಎಂಬ ಇಸ್ರೇಲಿ ಸಾಕ್ಷ್ಯಚಿತ್ರ (ಹೀಬ್ರೂ ಭಾಷೆ) ಜೆರುಸಲೇಂ ಬಳಿಯ ನೀವ್‌ ಶಾಲೊಮ್‌ ಎಂಬ ಹಳ್ಳಿಯಲ್ಲಿ ಯಹೂದಿಗಳು ಮತ್ತು ಅರಬ್ಬರ ನಡುವಿನ ಭಾಷಾ ಸಂಘರ್ಷ, ಮಕ್ಕಳ ಶಿಕ್ಷಣದ ಮೇಲೆ ಅದರಿಂದಾಗುವ ಪರಿಣಾಮವನ್ನು ಬಿಡಿಸಿಡುತ್ತದೆ.

ಇನ್ನೂ ಶಾಲೆಗೆ ಸೇರಿರದ ಆರು ವರ್ಷದ ಮಗಳಿಗೆ ತಂದೆ ಬರೆಯುವ ಪತ್ರ, ಆಕೆ ಶಾಲೆಗೆ ಹೋಗಿ ಮನೆಗೆ ವಾಪಸಾಗುವವರೆಗೆ ಪ್ರತಿದಿನ ಎದುರಾಗುವ ಸನ್ನಿವೇಶಗಳನ್ನು ಎಳೆಎಳೆಯಾಗಿ ವಿವರಿಸುತ್ತದೆ. ಈ ಪತ್ರವೇ ಸಾಕ್ಷ್ಯಚಿತ್ರದ ನಾಯಕನೆನ್ನಬಹುದು.

ಇಸ್ರೇಲ್‌ನ ಯೊರಾಮ್‌ ಹಾನಿಗ್‌ ಅವರೇ ಕತೆ ಬರೆದು, ನಿರ್ದೇಶಿಸಿ ಈ ಸಾಕ್ಷ್ಯಚಿತ್ರದ ನಿರ್ಮಾಣವನ್ನೂ ಮಾಡಿದ್ದಾರೆ. ಅವರ ಆರು ವರ್ಷದ ಮಗಳು ಮಿಷಲ್‌ ಈ ಚಿತ್ರದ ‘ನಾಯಕಿ’.

ಒಂದೆಡೆ ಯುದ್ಧ ಮತ್ತೊಂದೆಡೆ ಅದರಿಂದ ಹಾಗೂ ರಾಜಕೀಯ ಪ್ರೇರಿತವಾದ ಆಂತರಿಕ ಸಂಘರ್ಷದಲ್ಲಿ ನಲುಗಿರುವ ಇಸ್ರೇಲ್‌ನ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಡುವ ಪಾಡುಗಳಿಗೆ ‘ಫಸ್ಟ್‌ ಲೆಸನ್‌ ಇನ್‌ ಪೀಸ್‌’  ಕನ್ನಡಿ ಹಿಡಿಯುತ್ತದೆ.

ಶಿಕ್ಷಕಿ ಒಂದೊಂದು ಪ್ರಶ್ನೆಯನ್ನೂ ಹೀಬ್ರೂ ಮತ್ತು ಅರಬ್‌ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಕೇಳುತ್ತಾರೆ. ತಮ್ಮದಲ್ಲದ ಭಾಷೆಯಲ್ಲಿ ಸಂವಾದ ನಡೆಯುವಾಗ ಮಕ್ಕಳು ಗದ್ದಲ ಮಾಡುತ್ತಾರೆ.

ತಮ್ಮ ಮಗಳೂ ಸೇರಿದಂತೆ ಶಾಲೆಗೆ ಹೋಗುವ ಮಕ್ಕಳು ಮಾರ್ಗಮಧ್ಯ ಯಾವುದೇ ಕ್ಷಣದಲ್ಲಿ ಗಲಭೆಯನ್ನೋ, ಎನ್‌ಕೌಂಟರ್‌ ನಡೆಯುವುದನ್ನೋ ಕಣ್ಣಾರೆ ಕಾಣಬೇಕಾದೀತು ಎಂಬ ವಾಸ್ತವವನ್ನು ಪುಟ್ಟ ಮಗಳ ಬಳಿ ಹೇಳಿಕೊಳ್ಳಲಾಗದ ತಂದೆ ಪತ್ರದ ಮೂಲಕ ವಿವರಿಸುತ್ತಾನೆ. 56 ನಿಮಿಷಗಳ ಸಾಕ್ಷ್ಯಚಿತ್ರದುದ್ದಕ್ಕೂ ಆ ಪತ್ರದಲ್ಲಿನ ಪ್ರತಿ ಮಾತಿಗೂ ಸಾಕ್ಷಿಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ.

ಸಹಶಿಕ್ಷಣ (ಕೋ ಎಜುಕೇಶನ್‌) ಬೇಡ, ಹುಡುಗಿಯರು ಮತ್ತು ಹುಡುಗರಿಗೆ ಪ್ರತ್ಯೇಕ ಶಾಲೆ ಇರಬೇಕು ಎಂದು ನಾವು ಎಷ್ಟೇ ಮನವಿ ಮಾಡಿಕೊಂಡರೂ ಯಾರೂ ಕಿವಿಗೊಡುವುದಿಲ್ಲ ಎಂಬ ದೂರು ಕೂಡಾ ಕನಿಷ್ಠ ನಾಲ್ಕೈದು ಬಾರಿ ಪುನರಾವರ್ತನೆಯಾಗುತ್ತದೆ.

‘ಫಸ್ಟ್‌ ಲೆಸನ್‌ ಇನ್‌ ಪೀಸ್‌’ ಸಾಕ್ಷ್ಯಚಿತ್ರದಲ್ಲಿ ನಮ್ಮ ಕಣ್ಮುಂದೆ ತೆರೆದುಕೊಳ್ಳುವ ಹಳ್ಳಿ ‘ನೀವ್‌ ಶಾಲೊಮ್‌’ಗೆ ಹೀಬ್ರೂ ಭಾಷೆಯಲ್ಲಿ ‘ಶಾಂತಿಯ ಓಯಸಿಸ್‌’ ಎಂದರ್ಥ. ಈ ಹಳ್ಳಿ ಹುಟ್ಟಿಕೊಂಡದ್ದಕ್ಕೇ ಒಂದು ಬಹುದೊಡ್ಡ ಮಹತ್ವಾಕಾಂಕ್ಷೆಯೊಂದಿಗೆ. ಅದೇನೆಂದರೆ, ಯಹೂದಿಗಳು ಮತ್ತು ಅರಬರು ಒಂದೇ ಊರಿನಲ್ಲಿ ಶಾಂತಿಯುತವಾಗಿ ಬಾಳಲು ಸಾಧ್ಯ ಎಂಬುದನ್ನು ನಿರೂಪಿಸುವ ಉದ್ದೇಶದಿಂದ ಈ ಹಳ್ಳಿ ಹುಟ್ಟಿಕೊಂಡಿತ್ತು. 2015ರಲ್ಲಿ ಈ ಹಳ್ಳಿಯಲ್ಲಿದ್ದ ಜನಸಂಖ್ಯೆ ಕೇವಲ 265.

ಆದರೆ ಕಡಿಮೆ ಜನರಿದ್ದ ಮಾತ್ರಕ್ಕೆ ಅಲ್ಲಿ ಘರ್ಷಣೆಗಳು, ಗಲಭೆಗಳು ಇಲ್ಲವೆಂದಲ್ಲ. ಆ ಪುಟ್ಟ ಊರು ರಾಜಕೀಯ ಕಿತ್ತಾಟ ಮತ್ತು ರಾಷ್ಟ್ರೀಯ ಬಿಕ್ಕಟ್ಟುಗಳ ಆಡುಂಬೊಲವಾಗಿರುವುದು  ಹಳ್ಳಿಯ ಪ್ರತಿ ಸದಸ್ಯರ ಮೇಲೂ ಪರಿಣಾಮ ಬೀರುತ್ತಿದೆ. ಒಬ್ಬೊಬ್ಬ ವ್ಯಕ್ತಿಯೂ ತೆಗೆದುಕೊಳ್ಳುವ ವೈಯಕ್ತಿಕ ತೀರ್ಮಾನವೂ ರಾಜಕೀಯ ಬಣ್ಣ ಪಡೆಯುತ್ತದೆ ಮತ್ತು ಅದೇ ಕಾರಣದಿಂದ ಪ್ರತಿ ಮನೆಯೂ ರಾಜಕೀಯ ಹಿತಾಸಕ್ತಿಗಳಿಗೆ ಆಹಾರವಾಗುತ್ತಿವೆ ಎಂಬುದನ್ನು ಯೊರಾಮ್‌ ಬಹಳ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

ಆಡುತ್ತಾ ಕಲಿಕೆಯನ್ನು ಆನಂದಿಸಬೇಕಾದ ಮಕ್ಕಳ ಬದುಕು ಮತ್ತು ಶಿಕ್ಷಣದ ಹಕ್ಕು ರಾಷ್ಟ್ರೀಯ ಬಿಕ್ಕಟ್ಟಿಗೆ ಬಲಿಯಾಗುತ್ತಿರುವ ದುರಂತದ ರೂಪಕದಂತಿದೆ ‘ಫಸ್ಟ್ ಲೆಸನ್‌ ಇನ್‌ ಪೀಸ್‌’. ಇದೇ ಕಾರಣಕ್ಕೆ ಇದು ದೇಶಭಾಷೆಯ ಚೌಕಟ್ಟು ಮೀರಿ ತನ್ನ ಪ್ರಸ್ತುತತೆಯನ್ನು ಬಿಂಬಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.