ADVERTISEMENT

‘ಶ್ರೀಮಂತ’ನ ಎದೆಯಲ್ಲಿ ಹಾಡಿನ ಕಥಕ್ಕಳಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಹಂಸಲೇಖ
ಹಂಸಲೇಖ   

ಬೆಂಗಳೂರಿನ ಹಂಸಲೇಖ ಅವರ ಸ್ಟುಡಿಯೊ ಒಳಗಡೆಯೇ ಒಂದು ಪುಟ್ಟ ವೇದಿಕೆ ಕಟ್ಟಲಾಗಿತ್ತು. ಹಿನ್ನೆಲೆಯಲ್ಲಿ ಹಂಸಲೇಖ ಚಿತ್ರವಿದ್ದ ದೊಡ್ಡ ಬ್ಯಾನರ್‌. ಪಕ್ಕದಲ್ಲಿದ್ದ ‘ಶ್ರೀಮಂತ’ ಎಂಬ ಶ್ರೀರ್ಷಿಕೆ ಅವರ ಸಂಗೀತ ಶ್ರೀಮಂತಿಕೆಯನ್ನೂ ಧ್ವನಿಸುವಂತೆ ತೋರುತ್ತಿತ್ತು.

ಅದು ‘ಶ್ರೀಮಂತ’ ಚಿತ್ರದ ಹಾಡುಗಳ ರೆಕಾರ್ಡಿಂಗ್‌ ಆರಂಭಿಸಿದ ಸುದ್ದಿಯನ್ನು ಹಂಚಿಕೊಳ್ಳಲು ಕರೆದ ಸುದ್ದಿಗೋಷ್ಠಿ. ಇದುವರೆಗೆ ಹಲವು ಚಿತ್ರಗಳಿಗೆ ಸಾಹಿತ್ಯ ರಚನೆ, ಸಹನಿರ್ದೇಶನ ಮಾಡಿರುವ, ರಂಗಭೂಮಿಯಲ್ಲಿಯೂ ತೊಡಗಿಕೊಂಡಿರುವ ಹಾಸನ್‌ ರಮೇಶ್‌ ಅವರು ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ‘ಶ್ರೀಮಂತ’ನಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಸಿನಿಮಾ ಚಿತ್ರೀಕರಣ ಆರಂಭಿಸುವುದಕ್ಕೂ ಮುನ್ನ ಸಂಗೀತದ ಕೆಲಸ ಮುಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಚಿತ್ರೀಕರಣವನ್ನೂ ಅವರು ಮುಂದೂಡಿದ್ದಾರೆ. ಈ ಹಳ್ಳಿ ‘ಶ್ರೀಮಂತ’ನಿಗೆ ದೇಸಿ ಶೈಲಿಯಲ್ಲಿ ಹಾಡು ಹೊಸೆಯುವ ಶಕ್ತಿ ಇರುವುದು ಹಂಸಲೇಖ ಅವರಿಗೆ ಮಾತ್ರ ಎಂಬ ಕಾರಣಕ್ಕೆ ಸಂಗೀತ ನಿರ್ದೇಶನದ ನೊಗವನ್ನು ಅವರ ಹೆಗಲಿಗಿಟ್ಟಿದ್ದಾರೆ. ರಮೇಶ್‌ ಅವರ ಪ್ರಯತ್ನಕ್ಕೆ ವಿಷ್ಣುವರ್ಧನ್‌ ಅವರು ಕ್ಯಾಮೆರಾ ಕಣ್ಣಾಗಲಿದ್ದಾರೆ.

ADVERTISEMENT

‘ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದೇನೆ. ಇದುವರೆಗೆ ಶೇ 75ರಷ್ಟು ಪಾತ್ರವರ್ಗದ ಆಯ್ಕೆ ಮುಗಿದಿದೆ. ಇನ್ನೂ ಸ್ವಲ್ಪ ಪಾತ್ರಗಳಿಗೆ ನಟರನ್ನು ಆಯ್ಕೆ ಮಾಡಬೇಕಿದೆ. ಚಿತ್ರಕ್ಕೆ ಸಂಬಂಧಿಸಿದ ವಿಷಯವನ್ನೆಲ್ಲ ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ. ಇಂದು ಸಂಗೀತದ ಸಮಯ’ ಎಂದಷ್ಟೇ ಹೇಳಿ ಅವರು ಮೈಕ್‌ ಅನ್ನು ಹಂಸಲೇಖ ಅವರ ಕೈಗೆ ವರ್ಗಾಯಿಸಿದರು.

ಮೊದಲಿಗೆ ಈ ಸಿನಿಮಾದ ಕಥೆಯ ಎಳೆ ಹೇಳಿದಾಗ ಹಂಸಲೇಖ ಅವರಿಗೆ ಅಷ್ಟೇನೂ ಇಷ್ಟ ಆಗಿರಲಿಲ್ಲವಂತೆ. ಆದರೆ ಮೂರು ತಿಂಗಳ ಬಿಟ್ಟು ಪೂರ್ತಿ ಚಿತ್ರಕಥೆಯೊಂದಿಗೆ ಬಂದಾಗ ನಿರ್ದೇಶಕರ ಬದ್ಧತೆಗೆ ಮೆಚ್ಚಿ ಸಂಗೀತ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದಾರೆ.

‘ಗುಳೆ ಮತ್ತು ಮಳೆ ಈ ಸಿನಿಮಾದ ಕೇಂದ್ರವಸ್ತುಗಳು’ ಎಂದು ಅವರು ಸಿನಿಮಾದ ಕಥೆಯ ಎಳೆಯನ್ನು ಎಳೆ ಎಳೆಯಾಗಿ ಬಿಚ್ಚಿಡಲು ತೊಡಗಿದರು.
‘ಹಳ್ಳಿಗಳಲ್ಲಿ ಮಳೆ ಬಂದರೆ ಜೀವನ ಸಮೃದ್ಧವಾಗಿರುತ್ತದೆ. ಆಗ ಜನರು ನಾಟಕದಂಥ ಕಲೆಗಳ ರಂಜನೆಯತ್ತ ಹೊರಳುತ್ತಾರೆ. ಆದರೆ ಬರ ಬಂದರೆ ಗುಳೆ ಹೋಗುತ್ತಾರೆ. ಹೀಗೆ ಒಂದು ಬರದಿಂದ ಈ ಸಿನಿಮಾ ಆರಂಭವಾಗುತ್ತದೆ.

ಆ ಬರದಲ್ಲಿಯೂ ಗುಳೆ ಹೋಗದೆ ಮಣ್ಣನ್ನೂ ಇಷ್ಟಪಡುವ ಹೆಣ್ಣನ್ನೂ ನೆಚ್ಚಿ ಛಲದಿಂದ ಬದುಕುವ ಕಲಾಪ್ರೇಮಿಯ ಕಥೆ ಇದು. ಕೊನೆಗೆ ಅವನು ನೆಚ್ಚಿದ ಮಣ್ಣು–ಹೆಣ್ಣಿನ ಕಾರಣದಿಂದಲೇ ಮಳೆ ಬಂದು ಕಲೆ ಅರಳುವ ಉತ್ತಮ ಸಂದೇಶವೂ ಇದೆ’ ಎಂದು ಅವರು ವಿವರವಾಗಿಯೇ ಸಿನಿಮಾ ಬಗ್ಗೆ ಹೇಳಿದರು.

ಈ ಚಿತ್ರದಲ್ಲಿನ ಆರು ಹಾಡುಗಳನ್ನು ಅವರು ಲೈವ್‌ ರೆಕಾರ್ಡಿಂಗ್‌ ಮಾದರಿಯಲ್ಲಿ ಸಂಯೋಜಿಸುತ್ತಿದ್ದಾರೆ. ಕವಿ ಅರವಿಂದ ಮಾಲಗತ್ತಿ ಅವರ ಒಂದು ಕವಿತೆಯನ್ನೂ ಬಳಸಿಕೊಳ್ಳಲಾಗಿದೆ.

‘ಎಲ್ಲಿಂದ ಶುರುವಿಡಲಿ ಎದೆಯಲ್ಲಿ ನಡೆದ ಕಥಕ್ಕಳಿಯ’ ಎಂಬ ಹಂಸಲೇಖ ಅವರೇ ಬರೆದ ಹಾಡನ್ನು ಅವರೇ ಗುನುಗಿ ತೋರಿಸಿದರು. ಶ್ರೀಮಂತನ ಹಾಡುಗಳು ಕೇಳುಗರ ಎದೆಯಲ್ಲಿಯೂ ಕಥಕ್ಕಳಿ ಶುರುವಿಡುತ್ತದೆ ಎಂಬ ನಂಬಿಕೆ ಅವರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.