ADVERTISEMENT

ಸವಿಸವಿ ನೆನಪು...

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST

ಅಂದು ಊರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಶ್ರೀರಾಮನ ರಥೋತ್ಸವ. ಅಪ್ಪ ಕೊಡಿಸಿದ್ದ ತಿಳಿ ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದೆ. ಹುಡುಗೀರೆಲ್ಲ ಒಬ್ಬರನ್ನೊಬ್ಬರು ಚುಡಾಯಿಸಿಕೊಂಡು  ತಿರುಗಾಡುತ್ತಿದ್ದಾಗ, ಸಿಕ್ಕಿದನಪ್ಪಾ ನನ್ನವ...!

ನಾನೆಂದೂ ಮನಸ್ಸಿನಲ್ಲಿ ಎಣಿಸಿರಲಾರದ ವ್ಯಕ್ತಿ. ಕಟ್ಟುಮಸ್ತಾದ ಮಿಲಿಟರಿ ದೇಹ, ಮಿಲ್ಟ್ರಿ ಕಟ್‌ನಲ್ಲಿ ಮಿಂಚುವ ತಲೆಗೂದಲು. ಒಟ್ಟಿನಲ್ಲಿ ಸುರಸುಂದರ.
ಆತ ಆಗತಾನೆ ಮನೆಯಿಂದ ಹೊರಬಂದು, ಎದುರು ಮನೆಯ ಜಗುಲಿಯ ಮೇಲೆ ಕುಳಿತಿದ್ದ ನಮ್ಮ ಗ್ಯಾಂಗ್ ಕಡೆಗೆ ಕಿರುನಗೆ ಬೀರಿದ್ದ. ನನ್ನನ್ನು ಕಂಡು, ‘ಓಹ್! ನೀನು ಇಲ್ಲಿದ್ದೀಯಾ? ಏನ್ ಓದುತ್ತಿದ್ದೀಯಾ?’  ಎಂದು ಕೇಳಿದ. ‘ನಮ್ಮನ್ನೆಲ್ಲಾ ಬಿಟ್ಟು, ನಿನ್ನನ್ನು ಮಾತ್ರ ವಿಚಾರಿಸಲು ಕಾರಣವೇನು?’ ಎಂದು ನನ್ನ ಸ್ನೇಹಿತೆಯರೆಲ್ಲರೂ ಪಿಸುಗುಟ್ಟತೊಡಗಿದರು.

ಮಾರನೆ ದಿನ ಹನುಮಂತೋತ್ಸವ. ಓಕುಳಿಯಾಡಿ ಸುಸ್ತಾಗಿ ಮನೆ ಸೇರಿದ್ದ ನಾವು ನಿದ್ದೆಯಲ್ಲಿ ಮುಳುಗಿದ್ದೆವು. ಬಾಗಿಲ ಬಳಿ ಸದ್ದಾಯಿತು. ತೆರೆದು ನೋಡಿದರೆ ಅವನ ಅಪ್ಪ. ‘ಮುಖ ತೊಳೆದು ಬಾ’ ಎಂದು ನನಗೆ ಹೇಳಿದರು.

ನಂತರ ಅವರ ಪಕ್ಕದಲ್ಲೇ ಕೂರಿಸಿಕೊಂಡು, ಅವನ ಬಗ್ಗೆ ನನ್ನ ಮನೆಯ ಹಿರಿಯರೆಲ್ಲರ ಮುಂದೆ ತಿಳಿಸಿದರು. ‘ನಿನಗೆ ಒಪ್ಪಿಗೆಯಾದರೆ ಮದುವೆ ಮಾಡುತ್ತೇವೆ’ ಎಂದರು.

‘ಅರೆ, ಇನ್ನೂ ನನ್ನ ಡಿಗ್ರಿ ಮುಗಿದಿಲ್ಲ. ಕೆಲಸಕ್ಕೆ ಸೇರುವ ಯೋಚನೆ ಇದೆ. ನಮ್ಮ ಮನೆ ಹಣಕಾಸಿನ ಸ್ಥಿತಿಯೂ ಅಷ್ಟಕ್ಕಷ್ಟೇ. ಇಷ್ಟು ಬೇಗ ಮದುವೆ ಬೇಡ’ ಎಂದೆ.

ಅಷ್ಟು ಹೊತ್ತಿಗಾಗಲೆ  ಅವನು ಅಲ್ಲಿ ಬಂದು ನಿಂತಿದ್ದ, ‘ನನಗೆ ನೀನು ತುಂಬಾ ಇಷ್ಟವಾಗಿದ್ದೀಯ, ನಿನ್ನ ಓದು, ಮತ್ತು ಕೆಲಸದ ಯೋಚನೆ ಮದುವೆಯ ನಂತರವೂ ಮುಂದುವರಿಸಬಹುದು, ನಿನ್ನ ಅಭಿಪ್ರಾಯವನ್ನು ನಾಳೆಯೇ ತಿಳಿಸು. ರಜೆಯ ಅವಧಿ ಮುಗಿಯುವುದರೊಳಗೆ ನಿನ್ನನ್ನು ನನ್ನ ಜೊತೆ ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿಬಿಟ್ಟ.

ಅವರಪ್ಪನೆದುರು ಮತ್ತು ಹಿರಿಯರ ಮುಂದೆಯೇ ನನಗೆ ‘ಐ ಲವ್ ಯೂ’ ಎಂದು ಪ್ರಪೋಸ್ ಮಾಡಿದ. ಈ ಘಟನೆ ನಡೆದು 17 ವರ್ಷಗಳಾದರೂ ಅಚ್ಚಳಿಯದೆ ನನ್ನ ಮನಸ್ಸಿನಲ್ಲಿ ಉಳಿದಿದೆ.
-ರಶ್ಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.