ADVERTISEMENT

ಸಾಂತ್ವನ ನೀಡುವ ಕಿರುಚಿತ್ರ...

ಹರವು ಸ್ಫೂರ್ತಿ
Published 23 ಮೇ 2017, 19:30 IST
Last Updated 23 ಮೇ 2017, 19:30 IST
‘ಗೇಮ್‌ ಆಫ್‌ ಶ್ಯಾಡೊ’ಕಿರುಚಿತ್ರದ ದೃಶ್ಯ
‘ಗೇಮ್‌ ಆಫ್‌ ಶ್ಯಾಡೊ’ಕಿರುಚಿತ್ರದ ದೃಶ್ಯ   

ಪ್ರೀತಿಸಿದ ಹುಡುಗಿ ದೂರಾಗುವುದು, ಅದೇ ನೋವಿನಲ್ಲಿ ಬದುಕನ್ನು ಹಾಳುಮಾಡಿಕೊಳ್ಳುವುದು. ಒಂದು ಹಂತಕ್ಕೆ ನಮಗೆ ನಾವೇ ಸಮಾಧಾನ ಮಾಡಿಕೊಂಡು ನೋವನ್ನು ಮರೆಯಲು ಯತ್ನಿಸುವುದು. ಇದು ಬಹುಪಾಲು ಯುವಕರ ಬದುಕಿನಲ್ಲಿ ನಡೆಯುವ ಘಟನೆಗಳು. ಇದೇ ಎಳೆಯನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರ ‘ಗೇಮ್ ಆಫ್ ಶ್ಯಾಡೊ’.

ಈ ಕಿರುಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ನಿರ್ದೇಶಿಸಿದವರು ಗುರುದತ್ ಶ್ರೀಕಾಂತ್‌ ಎಂಬ ಯುವಕ.

ಈ ಕಿರುಚಿತ್ರದ ವಿಶೇಷವೆಂದರೆ ನಿರೂಪಣಾ ತಂತ್ರ. ಕಥೆಯನ್ನು ಸೀದಾ ಹೇಳದೆ. ಮನಸ್ಸು ಎಂಬ ಪಾತ್ರವೊಂದು ಬಂದು ನೋವಿನಲ್ಲಿ ಇರುವ ಭಗ್ನ ಪ್ರೇಮಿಯನ್ನು ಸಮಾಧಾನ ಪಡಿಸುತ್ತಾನೆ. ಹೀಗೆ ಭಗ್ನಪ್ರೇಮಿಯೊಂದಿಗೆ ಮಾತನಾಡುತ್ತಾ ಆತನಿಗೆ ಹತ್ತಿರವಾಗುವ ಮನಸ್ಸಿನ ಪಾತ್ರ ನೋವಿಗೆ ಸಾಂತ್ವನ ಹೇಳುವ ಪ್ರಯತ್ನವನ್ನೂ ಮಾಡುತ್ತದೆ. ಸಮಸ್ಯೆ, ನೋವು, ಸೋಲು ಎಲ್ಲರಿಗೂ ಇರುತ್ತದೆ, ಕಷ್ಟ ಬಂದಾಗ ಮನುಷ್ಯ ಕುಗ್ಗಬಾರದು, ಪರಿಸ್ಥಿತಿಯನ್ನು ಎದುರಿಸಿ ನಿಲ್ಲಬೇಕು ಎಂಬ ಸಂದೇಶದೊಂದಿಗೆ ಕಿರುಚಿತ್ರ ಮುಗಿಯುತ್ತದೆ.

ADVERTISEMENT

ಕಿರುಚಿತ್ರ 30 ನಿಮಿಷದ್ದು. ನೋಡುತ್ತಾ ಹೋದಂತೆ ಬಹಳ ದೀರ್ಘವಾಗಿದೆ ಎನಿಸುತ್ತದೆ. ಕೆಲವು ಕಡೆ ಅನವಶ್ಯಕ ದೃಶ್ಯಗಳಿವೆ ಎನಿಸುವುದೂ ಉಂಟು.

ಕಿರುಚಿತ್ರದ ಮಧ್ಯೆ ಬರುವ ಹಾಡು, ಪ್ರೇಮಿಗಳ ಸಂಭಾಷಣೆ, ತುಂಟತನ ಖುಷಿಪಡಿಸುತ್ತದೆ. ಕಿರುಚಿತ್ರದ ಸಂಭಾಷಣೆ ಬರಹದಲ್ಲಿ ಸಾಕಷ್ಟು ಪ್ರೌಢಿಮೆಯನ್ನು ಕಾಣಬಹುದು. ಭಗ್ನ ಪ್ರೇಮಿಯನ್ನು ಸಮಾಧಾನ ಮಾಡುವ ಸಂದರ್ಭದಲ್ಲಿ ಹಲವು ಕಡೆ ಸಂಭಾಷಣೆ ಕಾವ್ಯಾತ್ಮಕವಾಗಿ, ಮತ್ತೆ ಹಲವೆಡೆ ಹೇಳಿಕೆಯಂತೆ ಇದ್ದರೂ ಇದು ಒಂದು ವಿಭಿನ್ನ ಪ್ರಯತ್ನದಂತೆ ಕಾಣುತ್ತದೆ.

(ಗುರುದತ್‌ ಶ್ರೀಕಾಂತ್)

‘ಪ್ರೇಮ ವೈಫಲ್ಯ ಎಲ್ಲಾ ಮನಸ್ಸುಗಳನ್ನು ನೋಯಿಸುತ್ತದೆ. ಇದೇ ಕೊರಗಿನಲ್ಲಿ ಬದುಕನ್ನೇ ಹಾಳು ಮಾಡಿಕೊಂಡವರ ಸಂಖ್ಯೆಯೇನೂ  ಕಡಿಮೆ ಇಲ್ಲ. ಪ್ರೇಮ ವೈಫಲ್ಯದಿಂದ ಕೊರಗುತ್ತಿರುವ ಹುಡುಗನೊಬ್ಬನ ಕಥೆ ಇಟ್ಟುಕೊಂಡು ಈ ಕಿರುಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಗುರುದತ್‌ ಶ್ರೀಕಾಂತ್.

ದೀಪದ ಕೆಳಗೆ ನಿಂತರೆ ನಮ್ಮ ನೆರಳು ಕುಬ್ಜವಾಗಿ ಕಾಣುತ್ತದೆ. ಸ್ವಲ್ಪ ದೂರ ಹೋದರೆ ಉದ್ದ ಬೆಳೆಯುತ್ತದೆ. ಕಷ್ಟಗಳು ಹಾಗೇ ಹತ್ತಿರವಾದಷ್ಟು ನಾವು ಕುಬ್ಜರಾಗುತ್ತಾ ಹೋಗುತ್ತೇವೆ. ನೋವಿಗೆಂದು ಕುಗ್ಗಬಾರದು ಎಂಬ ಸಂದೇಶವನ್ನು ಕಿರುಚಿತ್ರ ಹೇಳುತ್ತದೆ.

‘ಇಂದಿನ ಯುವಕರನ್ನು ಗಮನಿಸಿದರೆ ಪ್ರೇಮದಲ್ಲಿ ಬಿದ್ದು ನೋವು ಅನುಭವಿಸುತ್ತಿರುವವರೇ ಹೆಚ್ಚು. ಇಂಥ ಯುವಕರನ್ನು ಖಿನ್ನತೆಯಿಂದ ಹೊರಬರುವಂತೆ ಪ್ರೇರಿಪಿಸಲು ಈ ಕಿರುಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಗುರುದತ್‌ ಶ್ರೀಕಾಂತ್.

ಕಿರುಚಿತ್ರದ ಚಿತ್ರೀಕರಣ ಸ್ಥಳಗಳು ಅದ್ಭುತವಾಗಿದ್ದು, ಪ್ರತಿ ದೃಶ್ಯಗಳಿಗೂ ಹೊಸ ಸ್ಥಳಗಳನ್ನು ಬಳಸಿಕೊಂಡಿರುವುದು ಪ್ರಶಂಸಾರ್ಹ. ಸಾಮಾನ್ಯ ಕಿರುಚಿತ್ರಗಳಿಗೆ ಬಜೆಟ್ ಕೊರತೆ, ಆಯ್ಕೆ ಅವಕಾಶವಿಲ್ಲ ಎನ್ನುತ್ತಾ ಒಂದೆರಡು ಸ್ಥಳಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸುತ್ತಾರೆ. ಇಲ್ಲಿ ನಿರ್ದೇಶಕನ ಕಿರುಚಿತ್ರದ ಮೇಲಿನ ಆಸ್ಥೆಯನ್ನು ಮೆಚ್ಚುವಂಥದ್ದು.

ತ್ಯಾಗರಾಜನಗರ ಸುತ್ತಮುತ್ತ, ಯಡಿಯೂರು ಕೆರೆ, ತುರುವೆಕೆರೆ ಕಾಡು, ಬಿಂಬ ಆರ್ಟ್‌ ಆಶ್ರಮ, ಬ್ಯೂಗಲ್ ರಾಕ್‌ ಸುತ್ತಮುತ್ತ ಒಟ್ಟಾರೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಹಾಗೇ ಕಿರುಚಿತ್ರದಲ್ಲಿ ಪೃಥ್ವಿರಾಜ್, ಶ್ರೀಕಾಂತ್ ಡಿ.  ಅವರ ಛಾಯಾಗ್ರಹಣ ಕೂಡ ಉತ್ತಮವಾಗಿ ಬಂದಿದೆ. ಹಳೆಯ ನೆನಪುಗಳನ್ನು ಕಪ್ಪುಬಿಳುಪಿನಲ್ಲಿ ತೋರಿಸಿರುವುದು, ಕತ್ತಲಿನಲ್ಲಿ ಪಂಜಿನ ಬೆಳನಲ್ಲಿ ಚಿತ್ರೀಕರಣ ಮಾಡಿರುವುದು ಉತ್ತಮವಾಗಿ ಮೂಡಿ ಬಂದಿದೆ.

ತಮ್ಮ ಸಿನಿಮಾ ಪ್ರೀತಿಯನ್ನು ನಿರ್ದೇಶಕ ಗುರುದತ್‌ ಶ್ರೀಕಾಂತ್ ಹೇಳಿಕೊಳ್ಳುವುದು ಹೀಗೆ ‘ಸಣ್ಣ ವಯಸ್ಸಿನಿಂದಲ್ಲೂ ನಾಟಕಗಳಲ್ಲಿ ತೊಡಗಿಕೊಂಡಿದ್ದೆ. ಹಲವು ಕಿರುಚಿತ್ರಗಳಿಗೆ ಕಥೆ ಬರೆಯಲು ಹೋದೆ ಆದರೆ ಹಲವು ಕಾರಣಗಳಿಂದ ಅರ್ಧಕ್ಕೆ ಕಿರುಚಿತ್ರ ನಿಂತು ಹೋಗುತ್ತಿತ್ತು. ಈ ನಡುವೆ ನಾನೇ ಒಂದು ಕಿರುಚಿತ್ರ ಮಾಡಬೇಕು ಎಂದು ತಂದೆ ಬಳಿ ಹಣ ಪಡೆದು ಈ ಕಿರುಚಿತ್ರ ಮಾಡಿದೆ’ ಎನ್ನುತ್ತಾರೆ.

ಈ ಕಿರುಚಿತ್ರ ಮಾಡಿದ ಅನುಭವದಿಂದ ಟಿ.ಪಿ. ಕೈಲಾಸಂ ಅವರ ನಾಟಕವನ್ನು ಆಧಾರವಾಗಿ ಇಟ್ಟುಕೊಂಡು ‘ಮೂಕ ವಿಸ್ಮಿತ’ ಎಂಬ ಸಿನಿಮಾವನ್ನೂ ನಿರ್ದೇಶಿಸುತ್ತಿದ್ದಾರೆ ಗುರುದತ್‌ ಶ್ರೀಕಾಂತ್. ಹೊಸ ಬಗೆಯ ಚಿಂತನೆ, ಶ್ರದ್ಧೆ ಹೊಂದಿರುವ ಗುರುದತ್‌ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರೆ ಅಚ್ಚರಿಯೇನಿಲ್ಲ.

**

ಕಿರುದಾರಿ

ಕಿರುಚಿತ್ರ: ‘ಗೇಮ್‌ ಆಫ್‌ ಶ್ಯಾಡೊ’
ಅವಧಿ: 30 ನಿಮಿಷ 11 ಸೆಕೆಂಡ್‌
ಕತೆ, ಚಿತ್ರಕತೆ, ನಿರ್ದೇಶನ: ಗುರುದತ್‌ ಶ್ರೀಕಾಂತ್
ಸಂಗೀತ: ಪುನೀತ್ ಎಂ.ಆರ್.
ಸಂಕಲನ:  ಶ್ರೀಕಾಂತ್ ಪಿ.
ಛಾಯಾಗ್ರಹಣ: ಪೃಥ್ವಿರಾಜ್, ಶ್ರೀಕಾಂತ್ ಡಿ. 
ಕಲಾವಿದರು: ಪ್ರಕೃತಿ ವಿ.ಕೆ,, ಪೃಥ್ವಿ ವಿ.ಕೆ., ಜಯಂತ್ ಕಶ್ಯಪ್, ಗುರುದತ್, ಡಿ. ಶ್ರೀಕಾಂತ್, ನರಹರಿ ಆಚಾರ್ಯ, ಪೃಥ್ವಿರಾಜ್, ಸೂರಜ್ ಪಂಡಿತ್, ಸುಮಾ, ನಾರಾಯಣ

ಇ–ಮೇಲ್: gurudutt.sreekanth@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.