ADVERTISEMENT

ಸುಡು ಬೇಸಿಗೆಗೆ ಕೂಲ್ ಖಾದಿ

ಫ್ಯಾಷನ್‌

ಮಂಜುಶ್ರೀ ಎಂ.ಕಡಕೋಳ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಸುಡು ಬೇಸಿಗೆಗೆ ಕೂಲ್ ಖಾದಿ
ಸುಡು ಬೇಸಿಗೆಗೆ ಕೂಲ್ ಖಾದಿ   

ಬೇಸಿಗೆ ಶುರುವಾಗಿದೆ. ಬೆಳಿಗ್ಗೆ ಹತ್ತು ಗಂಟೆಯಾಗುವ ಮುನ್ನವೇ ಸೂರ್ಯನ ಸುಡುಕಿರಣಗಳ ಬಿಸಿ ಮೈತಾಕುವಂತಾಗಿದೆ. ಕಚೇರಿ, ಕಾಲೇಜು, ಸಭೆ,ಸಮಾರಂಭಗಳಿಗೆ ಹೋಗುವವರಿಗೆ ಎಂಥ ಉಡುಪು ತೊಡಲಿ ಎನ್ನುವುದೇ ದೊಡ್ಡ ಪ್ರಶ್ನೆ.

ಶ್ರೀಮಂತ ನೋಟದ, ತೊಡಲು ಸರಳವಾದ ಉಡುಪುಗಳಿದ್ದರೆ ಧರಿಸುವವರಿಗೂ ಆರಾಮ. ಅಂಥ  ಉಡುಪುಗಳಲ್ಲಿ ಅಗ್ರ ಪಂಕ್ತಿಯಲ್ಲಿರುವುದೇ ಖಾದಿ ಉಡುಪು.
ಕೆಲ ಬಟ್ಟೆಗಳಿಗೆ ಫ್ಯಾಷನ್‌ ಜಗತ್ತಿನಲ್ಲಿ ಯಾವತ್ತೂ ಕಾಯಂ ಸ್ಥಾನ ಇದ್ದೇ ಇರುತ್ತದೆ. ಅಂಥ ಬಟ್ಟೆಗಳಲ್ಲಿ ಒಂದು ರೇಷ್ಮೆಯಾದರೆ ಮತ್ತೊಂದು ಖಾದಿ. ರೇಷ್ಮೆ  ಸಿರಿವಂತರ ಬಟ್ಟೆ ಎಂದು ಹೆಸರು ಗಳಿಸಿದರೆ, ಖಾದಿ ಬಡವರಿಂದ ಹಿಡಿದು ಸಿರಿವಂತರ ತನಕ ಕೊಳ್ಳಬಹುದಾದ ಬಟ್ಟೆ. ಸ್ವಾತಂತ್ರ್ಯ ಪೂರ್ವದಿಂದಲೂ ಟ್ರೆಂಡಿ ಮತ್ತು ಜನಪ್ರಿಯವಾಗಿರುವ  ಖಾದಿ ಇಂದಿಗೂ ತನ್ನ ಖದರ್  ಉಳಿಸಿಕೊಂಡಿರುವುದೇ ಅದರ ಹೆಗ್ಗಳಿಕೆ.

ಖಾದಿ ಎಂದರೆ ಪುರುಷರು ಮಾತ್ರ ಧರಿಸಬಹುದಾದ ಕುರ್ತಾ, ಪೈಜಾಮ ಎನ್ನುವ ಭಾವವಿತ್ತು. ಆದರೆ, ಈಗ ಆ ಲೇಬಲ್ ಹೋಗಿ ಮಕ್ಕಳು, ಮಹಿಳೆ ಸೇರಿದಂತೆ ಇಡೀ ಕುಟುಂಬವೇ ಧರಿಸಬಹುದಾದ  ಬಟ್ಟೆಯಾಗಿದೆ.

ADVERTISEMENT

ಖಾದಿ ಬಟ್ಟೆ ಧರಿಸುವವರಿಗೆ ಗೌರವದ ನೋಟ ನೀಡುತ್ತದೆ. ಖಾದಿ ಸ್ವಾಭಿಮಾನದ ಪ್ರತೀಕವೂ ಹೌದು. ಫ್ಯಾಷನ್ ಲೋಕದಲ್ಲಿ ಕಾಲಿಟ್ಟ ಬಳಿಕ ಖಾದಿ ತನ್ನ ಮೂಲ ಸ್ವರೂಪದಲ್ಲಿ ಹಲವು ಬದಲಾವಣೆಗೆ ಒಳಪಟ್ಟಿದೆ. ಕಾಟನ್ ಖಾದಿ, ಸಿಲ್ಕ್ ಖಾದಿ ಹೀಗೆ ಇತರೆ ಬಟ್ಟೆಗಳ ಜತೆ ಮಿಶ್ರಣ ಹೊಂದಿರುವ ಖಾದಿ ಈಗ  ಮಾರುಕಟ್ಟೆಯಲ್ಲಿ ಲಭ್ಯ.

ಖಾದಿ ಬಟ್ಟೆಯಲ್ಲಿ ವೈವಿಧ್ಯ ಆಯ್ಕೆಗಳಿವೆ. ಸೀರೆ, ಶರ್ಟ್‌, ಜುಬ್ಬಾ, ಪೈಜಾಮ, ವೇಸ್‌ಕೋಟ್‌, ಪುಟ್ಟ ಮಕ್ಕಳ ಲಂಗ ಜಾಕೀಟು, ಕಾಲೇಜು ಹುಡುಗಿಯರಿಗಾಗಿ ಚೂಡಿದಾರ್, ಆಕರ್ಷಕ ಖಾದಿ ಪರ್ಸ್, ಬ್ಯಾಗ್, ಖಾದಿ ದುಪಟ್ಟಾ, ಟಾಪ್... ಹೀಗೆ ಎಲ್ಲಾ ವಯೋಮಾನದವರಿಗೂ ಬೇಕಾದ ಟ್ರೆಂಡಿ ಫ್ಯಾಷನಬಲ್ ಉಡುಪುಗಳ ವಿನ್ಯಾಸ ಖಾದಿ ಬಟ್ಟೆಯಲ್ಲೀಗ ದೊರೆಯುತ್ತವೆ.

ಖಾದಿ ಜುಬ್ಬಾಕ್ಕಂತೂ ಸದಾ ಕಾಲಕ್ಕೂ ಬೇಡಿಕೆ. ಹಬ್ಬ, ಶುಭ ಸಮಾರಂಭಗಳಲ್ಲಿ ಖಾದಿ ಜುಬ್ಬಾವನ್ನು ಇಷ್ಟಪಟ್ಟು ತೊಡುವವರಿದ್ದಾರೆ. ಟಿವಿ ಟಾಕ್‌ ಷೋಗಳು, ವಿಚಾರ ಸಂಕಿರಣ, ಸಾಹಿತ್ಯ ಸಮ್ಮೇಳನಗಳಲ್ಲಂತೂ ಖಾದಿ ಜುಬ್ಬಾ ಮತ್ತು ವೇಸ್ ಕೋಟ್ ಇದ್ದರೇನೆ ಕಳೆ ಎನ್ನುವಂತಹ ಟ್ರೆಂಡ್ ಸೃಷ್ಟಿಯಾಗಿದೆ.

ಕಾಟನ್ ಮಿಶ್ರಿತ ಖಾದಿ ಸೀರೆ ಉಟ್ಟರಂತೂ  ಅದು ಉಟ್ಟವರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಖಾದಿ ಸೀರೆ ಉಟ್ಟು ಹಣೆಗೆ ದೊಡ್ಡದೊಂದು ಬಿಂದಿ ಇಟ್ಟು, ಟೆರಕೋಟಾ ಆಭರಣ ಧರಿಸಿದ  ಹೆಣ್ಣನ್ನು ಕಣ್ಣರಳಿಸಿ ನೋಡದೇ ಇರಲಾಗದು.

ಅಪ್ಪಟ ಖಾದಿಸೀರೆ, ಕಾಟನ್ ಮಿಶ್ರಿತ ಖಾದಿ ಸೀರೆ, ರೇಷ್ಮೆ ಮಿಶ್ರಿತ ಖಾದಿ ಹೀಗೆ ಖಾದಿ ಸೀರೆಯಲ್ಲೂ ಹಲವು ವೈವಿಧ್ಯಗಳುಂಟು. 

ಈ ಹಿಂದೆ ಯುವತಿಯರಿಗಾಗಿ ರೂಪಿಸಲಾಗುತ್ತಿದ್ದ ಖಾದಿ ಚೂಡಿದಾರ್‌ಗಳು ಸಾಧಾರಣ ಡಿಸೈನ್ ಹೊಂದಿರುತ್ತಿದ್ದವು. ಆದರೆ, ಖಾದಿ ಚೂಡಿದಾರ್ ಮೇಲೆ ಸಣ್ಣ ಸಣ್ಣ ಕಸೂತಿ, ಪ್ರಿಂಟ್‌ಗಳ ವಿನ್ಯಾಸಗಳನ್ನು ರೂಪಿಸಲಾಗುತ್ತಿದೆ. ಕಾಲರ್ ನೆಕ್, ನೆಹರೂ ಕೋಟ್‌, ಶರ್ಟ್‌ ಮಾದರಿಯ ಖಾದಿ ಚೂಡಿದಾರ್‌ಗಳು ಯುವತಿಯರ ಮನಸೆಳೆಯುತ್ತಿವೆ.

ಕಚೇರಿ, ಕಾಲೇಜಿಗೂ ಹೊಂದುವಂತಹ ಪುರುಷರಿಗೂ ಖಾದಿ ಶರ್ಟ್‌ಗಳು ಇಷ್ಟವಾಗುತ್ತಿವೆ. ಬಣ್ಣ ಹೋಗದ, ಗಂಜಿ ಹಾಕಿದರೆ ಖಡಕ್ ಆಗಿ ಇಸ್ತ್ರೀ ಕೂರುವ ಈ ಶರ್ಟ್‌ಗಳು ಆರಾಮದಾಯಕ ಉಡುಪು ಎನಿಸಿವೆ.

ಸಾಮಾನ್ಯ ಕಾಟನ್ ಚೂಡಿದಾರ್‌ಗೂ ಶ್ರೀಮಂತ ನೋಟವಿರುವ ಖಾದಿ ದುಪಟ್ಟಾ ಧರಿಸಿದರೆ ಅದರ ಸೊಗಸೇ ಬೇರೆ. ಶುಭ ಕಾರ್ಯಗಳಿಗೆ ಸೀರೆ ಉಡಲು ಪುರುಸೊತ್ತಿಲ್ಲದವರು ಚೂಡಿದಾರ್ ಮೇಲೆ  ಖಾದಿ ದುಪಟ್ಟಾ ಧರಿಸಬಹುದು. ಜೀನ್ಸ್, ಟೀ ಶರ್ಟ್ ಮೇಲೂ ಖಾದಿ ದುಪಟ್ಟಾ  ಚೆನ್ನಾಗಿ ಒಪ್ಪುತ್ತದೆ.

ಹಾಲಿನ ಕೆನೆಬಣ್ಣದ ಖಾದಿ ದುಪಟ್ಟಾ ಗಾಢ ಬಣ್ಣದ ಚೂಡಿದಾರ್‌ಗಳ ಸೌಂದರ್ಯ ಇಮ್ಮಡಿಗೊಳಿಸುತ್ತದೆ. ಅಂತೆಯೇ ಸರಳವಾದ ಖಾದಿ ಟಾಪ್‌ ಮೇಲೂ ಖಾದಿ ದುಪಟ್ಟಾ ಚೆಂದವೆನಿಸುತ್ತದೆ. ಜೀನ್ಸ್ ಪ್ಯಾಂಟಿಗೆ ಸ್ಲೀವ್‌ಲೆಸ್‌ ಖಾದಿ ಟಾಪ್ ಧರಿಸುವುದು ಲೇಟೆಸ್ಟ್‌ ಟ್ರೆಂಡ್‌.

ಖಾದಿ ಬಟ್ಟೆಗಳಿಗೆ  ಆಕರ್ಷಕ ಖಾದಿ ಬ್ಯಾಗ್ ಇಲ್ಲವೇ ಪರ್ಸ್ ಪರ್ಫೆಕ್ಟ್ ಮ್ಯಾಚಿಂಗ್. ಬೇಸಿಗೆಯಲ್ಲಿ ಖಾದಿಯಂಥ ಆರಾಮದಾಯಕ ಉಡುಪು ಮತ್ತೊಂದಿಲ್ಲ ಎನ್ನುತ್ತಾರೆ ಖಾದಿ ಪ್ರಿಯರು.

**

ದೇಸಿ ಅಂಗಡಿ: ಕುರ್ತಾ ₹ 500ರಿಂದ ಆರಂಭ, ದುಪಟ್ಟಾ ₹ 350ರಿಂದ, ಬಾಂದಿನಿ ಪ್ರಿಂಟ್‌, ಕಸೂತಿ ದುಪಟ್ಟಾ ₹ 400, ಸೀರೆ ₹ 1,000, ಮಕ್ಕಳಫ್ರಾಕ್ ₹210, ಮಕ್ಕಳ ಜುಬ್ಬಾ ₹ 275ರಿಂದ ಆರಂಭ.
flipkart.com: ಶರ್ಟ್ ₹ 589
mintra.com: ಖಾದಿ ಲೇಡಿಸ್ ಬ್ಲೇಸರ್ ₹1319, ಹಾಫ್ ಶರ್ಟ್ ₹ 599

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.