ADVERTISEMENT

ಸುದರ್ಶನ್‌ ನೆನಪಿನ ಸ್ಮರಣಾಂಜಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಸುದರ್ಶನ್‌ ನೆನಪಿನ ಸ್ಮರಣಾಂಜಲಿ
ಸುದರ್ಶನ್‌ ನೆನಪಿನ ಸ್ಮರಣಾಂಜಲಿ   

ಕಪ್ಪುಬಿಳುಪು ಚಿತ್ರಗಳಿಂದ ಹಿಡಿದು ಬಣ್ಣದ ಚಿತ್ರಗಳವರೆಗೆ ದೀರ್ಘಕಾಲ ಕನ್ನಡ ಚಿತ್ರರಂಗದ ನಂಟು ಹೊಂದಿದ್ದ ನಟ ಆರ್.ಎನ್. ಸುದರ್ಶನ್‌ ಅವರ ಸ್ಮರಣಾರ್ಥವಾಗಿ ಶನಿವಾರ ಮಲ್ಲೇಶ್ವರದ ಸೇವಾಸದನದಲ್ಲಿ ‘ಅಪಾರ ಕೀರ್ತಿಗಳಿಸಿ ಮೆರೆದ ಆರ್‌.ಎನ್. ಸುದರ್ಶನ್– ಭಾವಪೂರ್ಣ ಸ್ಮರಣಾಂಜಲಿ’ ಕಾರ್ಯಕ್ರಮವನ್ನು ಕಲಾದೇಗುಲ ಸಂಸ್ಥೆಯು ಆಯೋಜಿಸಿದೆ.

ಸುದರ್ಶನ್ ಅವರು ಮಲ್ಲೇಶ್ವರದ ಜತೆಗೆ ಭಾವನಾತ್ಮಕ ಸಂಪರ್ಕ ಹೊಂದಿದ್ದರು. ಅದಕ್ಕಾಗಿಯೇ ಸ್ಮರಣಾಂಜಲಿ ಕಾರ್ಯಕ್ರಮವನ್ನು ಮಲ್ಲೇಶ್ವರದಲ್ಲಿ ಆಯೋಜಿಸಲಾಗಿದೆ ಎನ್ನುತ್ತಾರೆ ಕಲಾದೇಗುಲದ ಸಂಘಟಕ ಶ್ರೀನಿವಾಸ್.

ಸುದರ್ಶನ್ ಅವರು ಬರೀ ನಟರಷ್ಟೇ ಅಲ್ಲ ಒಳ್ಳೆಯ ಹಾಡುಗಾರರೂ ಆಗಿದ್ದರು. ‘ಶುಭಮಂಗಳ’ ಸಿನಿಮಾದಲ್ಲಿ ‘ಹೂವೊಂದು ಬಳಿ ಬಂದು’ ಹಾಗೂ ರೈತರಿಗಾಗಿ ‘ನಾಡಿನ ಭಾಗ್ಯವೇ’ ಎನ್ನುವ ಹಾಡುಗಳನ್ನು ಹಾಡಿದ್ದರು. ಗಾಯನ ಮೇಲಿನ ಅವರ ಪ್ರೀತಿಯನ್ನು ಮನಗಂಡು ಪತ್ನಿ ಶೈಲಶ್ರೀ ಸುದರ್ಶನ್ ಅವರೂ ಅನೇಕ ಸಿನಿಮಾ ವೇದಿಕೆಗಳಲ್ಲಿ ಸುದರ್ಶನ್ ಜತೆಗೆ ಹಾಡುತ್ತಿದ್ದರು. ‘ನೀ ನಡೆವ ಹಾದಿಯಲ್ಲಿ’ ಹಾಡಂತೂ ಸುದರ್ಶನ್ ಅವರಿಗೆ ತುಂಬಾ ಇಷ್ಟವಾದ ಹಾಡು. ಈ ನೆನಪಿಗಾಗಿ ಕಾರ್ಯಕ್ರಮದಲ್ಲಿ ಶೈಲಶ್ರೀ ಅವರು ಈ ಹಾಡನ್ನು ಹಾಡಲಿದ್ದಾರೆ. ರಮಾ ಅರವಿಂದ್, ಮಾನಸ ಹೊಳ್ಳ, ಉದಯ್ ಅಂಕೋಲಾ, ಆಕಾಂಕ್ಷ ಬದಾಮಿ, ರಾಜೀವ್ ಗಾಯನ ಕಾರ್ಯಕ್ರಮ ನಡೆಸಿಕೊಡುವರು. ಪದ್ಮಿನಿ ಅಚ್ಚಿ ಅವರ ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರದ ತಂಡ ನೃತ್ಯ ನಮನ ಸಲ್ಲಿಸಲಿದೆ.

ADVERTISEMENT

‘ವಿಜಯನಗರದ ವೀರಪುತ್ರರು’ ಸುದರ್ಶನ್ ಅವರು ನಾಯಕನಾಗಿ ನಟಿಸಿದ ಮೊದಲ ಚಿತ್ರ. ಈ ಚಿತ್ರದಲ್ಲಿ ಅವರಿಗೆ ನಟಿ ಬಿ. ಸರೋಜಾ ದೇವಿ ಅವರು ನಾಯಕಿಯಾಗಿದ್ದರು. ಸುದರ್ಶನ್ ಅವರು ಸರೋಜಾ ದೇವಿ ಅವರಿಗೆ ‘ಇವರು ನನ್ನ ಮೊದಲ ನಾಯಕಿ’ ಅಂತ ತಮಾಷೆ ಮಾಡುತ್ತಿದ್ದರಂತೆ.

ಸುದರ್ಶನ್ ಜತೆಗೆ ಸಿನಿಮಾಗಳಲ್ಲಿ ನಟಿಸಿದ್ದ ಸರೋಜಾದೇವಿ, ಆರ್.ಟಿ.ರಮಾ, ಸುಮಿತ್ರಾ, ಹೇಮಾ ಚೌಧರಿ ಹಾಗೂ ಸುದರ್ಶನ್ ಅವರ ನಟಿಸಿದ್ದ ಕಿರುತತೆರೆಯ ಕೊನೆಯ ಧಾರಾವಾಹಿ ‘ಅಗ್ನಿಸಾಕ್ಷಿ’ಯ ನಿರ್ದೇಶಕ ಮೈಸೂರು ಮಂಜು, ನಟ ವಿಜಯ್ ಸೂರ್ಯ ಸುದರ್ಶನ್ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್.ಶಿವರಾಂ, ರಾಘವೇಂದ್ರ ರಾಜ್‌ಕುಮಾರ್, ಡಾ.ಎಸ್.ಕೃಷ್ಣಮೂರ್ತಿ, ಚಕ್ರಪಾಣಿ ಭಾಗವಹಿಸುವರು.

ಸ್ಥಳ– ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ, ಶನಿವಾರ ಸಂಜೆ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.