ADVERTISEMENT

ಸ್ನೇಹದಲ್ಲಿ ರೂಪುಗೊಂಡ ‘ಸ್ಟೈಲ್ ರಾಜ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಆಡಿಯೊ ಬಿಡುಗಡೆ ಸಂಭ್ರಮದಲ್ಲಿ ‘ಸ್ಟೈಲ್ ರಾಜ’ ಚಿತ್ರತಂಡ
ಆಡಿಯೊ ಬಿಡುಗಡೆ ಸಂಭ್ರಮದಲ್ಲಿ ‘ಸ್ಟೈಲ್ ರಾಜ’ ಚಿತ್ರತಂಡ   

ಹೊಸಬರೇ ಹೆಚ್ಚಾಗಿ ಕೆಲಸ ಮಾಡಿರುವ ಚಿತ್ರ ‘ಸ್ಟೈಲ್ ರಾಜ’. ಸಿನಿಮಾದ ಕೆಲಸಗಳು ಬಹುತೇಕ ಮುಗಿದಿದ್ದು ಇದೀಗ ಹಾಡುಗಳ ಸೀಡಿ ಬಿಡುಗಡೆ ಮಾಡಿದೆ. ಸೀಡಿ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದ ಬುಲೆಟ್ ಪ್ರಕಾಶ್, ‘ರಾಜೇಶ್ ರಾಮನಾಥ್ ಹಾಡಿಸಿದರೆ ನಾನೂ ಒಂದು ಹಾಡು ಹಾಡುತ್ತೇನೆ’ ಎಂದು ಉತ್ಸಾಹ ತೋರಿದರು.

ಮಾಧ್ಯಮದ ಎದುರು ಕಾಣಿಸಿಕೊಂಡ ಅನುಭವ ಇಲ್ಲದ ತಂಡದ ಸದಸ್ಯರು ಕಡಿಮೆ ಮಾತುಗಳಲ್ಲಿ ಚಿತ್ರದ ಬಗೆಗೆ ಅಲ್ಪ ಸ್ವಲ್ಪ ಮಾಹಿತಿಯನ್ನಷ್ಟೇ ತೆರೆದಿಟ್ಟರು. ನಾಯಕ ಗಿರೀಶ್, ‘ಹಾಸ್ಯ, ಪ್ರೀತಿ, ತಾಯಿ ಸೆಂಟಿಮೆಂಟ್ ಹೀಗೆ ಎಲ್ಲ ಅಂಶಗಳೂ ಚಿತ್ರದಲ್ಲಿ ಇವೆ’ ಎಂದರು.

‘ಆಟೊ ಚಾಲಕನಾದ ನನ್ನನ್ನು ಕರೆತಂದು ನಾಯಕನನ್ನಾಗಿ ಮಾಡಿರುವ ನಿರ್ದೇಶಕ ಹರೀಶ್‌ಗೆ ನಾನು ಕೃತಜ್ಞ’ ಎಂದರು ಗಿರೀಶ್. ಕಥೆ ಸಿದ್ಧವಾದಾಗ ಇನ್ನೂ ನಾಯಕನ ಆಯ್ಕೆ ಆಗಿರಲಿಲ್ಲ. ಗಿರೀಶ್ ಅವರನ್ನು ನಿರ್ಮಾಪಕ ಆರ್. ರಮೇಶ್ ಆಯ್ಕೆ ಮಾಡಿಕೊಳ್ಳಲು ಕಾರಣ, ತಮ್ಮ ತಂಡದಲ್ಲೇ ಯಾರನ್ನಾದರೂ ಬೆಳೆಸಬೇಕು ಎಂಬ ಉದ್ದೇಶ.

‘ರಮೇಶ್, ಹರೀಶ್, ಗಿರೀಶ್ ಸ್ನೇಹಕ್ಕಾಗಿ ಸಿನಿಮಾ ಮಾಡಿದ್ದಾರೆ. ಮುಂದೆಯೂ ಈ ಸ್ನೇಹ ಹೀಗೆಯೇ ಉಳಿಯಲಿ’ ಎಂದು ಹಾರೈಸಿದರು ಸಂಗೀತ ಸಂಯೋಜಕ ರಾಜೇಶ್ ರಾಮನಾಥ್. ಚಿತ್ರದಲ್ಲಿ ಆರು ಹಾಡುಗಳಿದ್ದು ಎನ್.ಬಿ. ಲೋಕೇಶ್ ಸಾಹಿತ್ಯ ರಚಿಸಿದ್ದಾರೆ. ಚಿಕ್ಕಣ್ಣ, ರಾಜೇಶ್ ಕೃಷ್ಣನ್, ಅನುರಾಧಾ ಭಟ್, ರಾಜೇಶ್ ರಾಮನಾಥ್, ನವೀನ್ ಸಜ್ಜು, ಜೋಗಿ ಸುನೀತಾ, ಎಚ್.ಎಮ್. ಕೃಷ್ಣಮೂರ್ತಿ, ಕುಶಲಾ ಸಾಹಿತ್ಯ ಹಾಡಿಗೆ ದನಿ ನೀಡಿದ್ದಾರೆ.

ಹಾಡುಗಳು ಎಲ್ಲರನ್ನೂ ತಲುಪುವಷ್ಟು ಶಕ್ತವಾಗಿವೆ ಎಂಬ ಅಭಿಪ್ರಾಯ ನಿರ್ಮಾಪಕ ರಮೇಶ್ ಅವರದು. ‘ಪ್ರತಿ ದೃಶ್ಯವೂ ಅದ್ಭುತವಾಗಿ ಮೂಡಿಬಂದಿದೆ’ ಎಂದರು ಛಾಯಾಗ್ರಾಹಕ ಎಂ.ಬಿ. ಅರಳಿಕಟ್ಟಿ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿಕ್ಕಣ್ಣ ಮತ್ತು ನಾಯಕಿ ರನುಷ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.