ADVERTISEMENT

‘ಸ್ಮರ್ಫ್ಸ್‌: ದಿ ಲಾಸ್ಟ್‌ ವಿಲೇಜ್‌’ ಇಂದು ತೆರೆಗೆ

ಹರವು ಸ್ಫೂರ್ತಿ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
‘ಸ್ಮರ್ಫ್ಸ್‌: ದಿ ಲಾಸ್ಟ್‌ ವಿಲೇಜ್‌’ ಇಂದು ತೆರೆಗೆ
‘ಸ್ಮರ್ಫ್ಸ್‌: ದಿ ಲಾಸ್ಟ್‌ ವಿಲೇಜ್‌’ ಇಂದು ತೆರೆಗೆ   

ಹಸಿರು ತುಂಬಿದ ಕಾಡು, ಅಣಬೆಯೇ ಮನೆ, ಪ್ರತಿ ದಿನವೂ ಸಂತೋಷ ನೆಮ್ಮದಿಯಲ್ಲಿ ಬದುಕುವ ಸ್ಮರ್ಫ್‌ಗಳು,  ಎಲ್ಲರನ್ನು ಕಾಳಜಿ ಮಾಡುವ ಅಪ್ಪ ಸ್ಮರ್ಫ್. ಇದು ‘ಸ್ಮರ್ಫ್ಸ್‌: ದಿ ಲಾಸ್ಟ್‌ ವಿಲೇಜ್‌’.

ಈಗಾಗಲೇ ಬಂದಿರುವ ಸ್ಮರ್ಫ್‌ ಕಾರ್ಟೂನ್ ಧಾರಾವಾಹಿ, ಸಿನಿಮಾ ಸರಣಿಗೆ ಹೋಲಿಸಿದರೆ ಈ ಸಿನಿಮಾದಲ್ಲಿ ಹೆಚ್ಚೇನೂ ಬದಲಾವಣೆ ಇಲ್ಲ. ತ್ರೀಡಿ ಅನಿಮೇಷನ್‌ ಈ ಸಿನಿಮಾದ ವಿಶೇಷ.

ಕೆಲ್ಲಿ ಆಸ್ಬರಿ ನಿರ್ದೇಶಿಸಿರುವ ಈ ಸಿನಿಮಾವನ್ನು ಸೋನಿ ಪಿಕ್ಚರ್ಸ್‌ ಅನಿಮೇಷನ್ ನಿರ್ಮಾಣ ಮಾಡಿದೆ. ಭಾರತದಲ್ಲಿ ಈ ಸಿನಿಮಾ ಏ. 21ರಂದು ಬಿಡುಗಡೆಯಾಗಲಿದೆ.

ADVERTISEMENT

ಪುಟ್ಟಪುಟ್ಟ ನೀಲಿ ಬಣ್ಣದ ಈ ಸ್ಪರ್ಫ್‌ಗಳು ಕಾಡಿನೊಳಗೆ ತಮ್ಮದೇ ಒಂದು ಹಳ್ಳಿ ನಿರ್ಮಿಸಿಕೊಂಡು ಬದುಕುತ್ತಿರುತ್ತವೆ. ತನ್ನ ವಿಶೇಷ ಜಾದೂ ಶಕ್ತಿಯಿಂದ ಸ್ಮರ್ಫ್‌ ಪುಟಾಣಿಗಳನ್ನು ಕಾಪಾಡುತ್ತಿರುತ್ತಾರೆ ಅಪ್ಪ ಸ್ಮರ್ಫ್. ಹುಡುಗರೇ ಇರುವ ಈ ಗುಂಪಿನಲ್ಲಿ ಒಬ್ಬಳೇ ಹುಡುಗಿ ಸ್ಮರ್ಫೆಟ್‌. ಸುಂದರಿ, ಬುದ್ಧಿವಂತೆ.

ಈ ಸ್ಮರ್ಫೆಟ್‌ ಸೃಷ್ಟಿಸಿದವನು ಖಳನಾಯಕ ಮಂತ್ರವಾದಿ ಗಾರ್ಗಮೆಲ್. ಸ್ಮರ್ಫ್‌ಗಳನ್ನು ಬಳಸಿಕೊಂಡು ತನ್ನ ಮಾಯಾಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರ ಈ ಮಂತ್ರವಾದಿಯದ್ದು. ಅದಕ್ಕಾಗಿ ಸ್ಮರ್ಫ್‌ಗಳು ಇರುವ ಸ್ಥಳವನ್ನು ಹುಡುಕಲು ಸ್ಮರ್ಫೆಟ್‌ ಎಂಬ ಈ ಹುಡುಗಿಯನ್ನು ಸೃಷ್ಟಿಸಿರುತ್ತಾನೆ. ಆದರೆ ಅಪ್ಪ ಸ್ಮರ್ಫ್‌ ಈ ಹುಡುಗಿಯನ್ನು ತನ್ನ ಜಾದೂ ಬಳಸಿ ಒಳ್ಳೆಯ ಹುಡುಗಿಯನ್ನಾಗಿ ಮಾಡುತ್ತಾನೆ.
ಸ್ಮರ್ಫೆಟ್‌ ಇತರೆ ಸ್ಪರ್ಫ್‌ಗಳ ಜೊತೆ ಆಟವಾಡಿಕೊಂಡು ಆ ಹಳ್ಳಿಯಲ್ಲೇ ಅಪ್ಪ  ಸ್ಮರ್ಫ್‌ನೊಂದಿಗೆ ಬದುಕುತ್ತಾಳೆ. ಈ ನುಡುವೆ ಇವರು ಬದುಕುತ್ತಿರುವ ಹಳ್ಳಿಯ ಪಕ್ಕದಲ್ಲೇ ಮತ್ತೊಂದು ಕಾಡು ಇರುತ್ತದೆ. ಆದರೆ ಅಲ್ಲಿಗೆ ಯಾರೂ ಹೋಗಬಾರದು ಎಂದು ಅಪ್ಪ ಸ್ಮರ್ಫ್‌ ಆಜ್ಞೆ ಮಾಡಿ ನಡುವಲ್ಲಿ ಒಂದು ದೊಡ್ಡ ಗೋಡೆ ನಿರ್ಮಿಸಿರುತ್ತಾರೆ.

ಸ್ಮರ್ಫೆಟ್‌ನೊಂದಿಗೆ ಕ್ಲಂಜಿ ಸ್ಮರ್ಫ್, ಬ್ರೈನಿ ಸ್ಮರ್ಫ್, ಹೆಫ್ಟಿ ಸ್ಮರ್ಫ್‌ ಎಂಬ ಮೂವರು ಗೆಳೆಯರು ಆಟವಾಡುವಾಗ ನಿಷೇಧಿತ ಅರಣ್ಯ ಪ್ರದೇಶದ ಬಳಿ ಹೋಗುತ್ತಾರೆ. ಆ ದೊಡ್ಡ ಗೋಡೆಯ ಕಿಂಡಿಯಲ್ಲಿ ಒಂದು ಪುಟಾಣಿ ನೀಲಿ ವ್ಯಕ್ತಿಯನ್ನು ನೋಡುತ್ತಾಳೆ ಸ್ಮರ್ಫೆಟ್‌. ಎಲ್ಲರೂ ಕುತೂಹಲಕ್ಕೆ ಒಳಗಾಗುತ್ತಾರೆ.

ಅಷ್ಟರಲ್ಲಿ ಮಂತ್ರವಾದಿಯ ಹದ್ದು ಬಂದು ಸ್ಮರ್ಫೆಟ್‌ಳನ್ನು ಎತ್ತಿಕೊಂಡು ಹೋಗುತ್ತದೆ. ಸ್ಮರ್ಫೆಟ್‌ಳನ್ನು ಕಾಪಾಡಲು ಮೂವರು ಗೆಳೆಯರು ಮಂತ್ರವಾದಿಯ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಮಂತ್ರವಾದಿ ಸ್ಮರ್ಫ್‌ಗಳು ಈ ಕಾಡಿನಲ್ಲಿ ಎಲ್ಲಿದ್ದಾರೆ ಎಂಬ ನಕ್ಷೆ ಬರೆದಿರುತ್ತಾನೆ. ಆ ನಕ್ಷೆ ನಿಷೇಧಿತ ಕಾಡು ಪ್ರದೇಶ.

ಸ್ಮರ್ಫೆಟ್‌ಳನ್ನು ಈ ಮೂರು ಸ್ಮರ್ಫ್‌ಗಳು ಕಾಪಾಡಿ ಆ ನಿಷೇಧಿತ ಕಾಡಿಗೆ ಪ್ರಯಾಣ ಮಾಡುತ್ತಾರೆ. ಸಾಹಸಮಯ ಪ್ರಯಾಣದಲ್ಲಿ ಡ್ರ್ಯಾಗನ್‌ ಚಿಟ್ಟೆ, ರೇಡಿಯಂ ಮೊಲ ಹೀಗೆ ಕಾಡಿನ ಪ್ರಾಣಿಗಳೆಲ್ಲಾ ಇವರ ಗೆಳೆಯರಾಗುತ್ತಾರೆ. ಕಾಡಿನೊಳಕ್ಕೆ ಹೋದಂತೆ ಅಲ್ಲಿ ಮತ್ತೊಂದು ಸ್ಮರ್ಫ್‌ ಗ್ರಾಮ ಇವರಿಗೆ ಎದುರಾಗುತ್ತದೆ. ಆದರೆ ಅದು ಬರಿ ಹೆಣ್ಣುಮಕ್ಕಳಿರುವ ಗ್ರಾಮ.

ಈ ನಿಷೇಧಿತ ಕಾಡಿಗೆ ಮಂತ್ರವಾದಿ ಕೂಡ ಬಂದಿರುತ್ತಾನೆ. ಎಲ್ಲಾ ಸ್ಮರ್ಫ್‌ಗಳನ್ನು ಅಪಹರಿಸಿಕೊಂಡು ಹೋಗುತ್ತಾನೆ. ಕೊನೆಗೆ ಸ್ಮರ್ಫೆಟ್‌ ಎಲ್ಲರನ್ನು ಕಾಪಾಡುತ್ತಾಳೆ.

ಮುದ್ದಾದ ಸ್ಮರ್ಫ್‌ಗಳ ಸಾಹಸ ದೃಶ್ಯಗಳು ತ್ರೀಡಿ ಅನಿಮೇಷನ್‌ನಲ್ಲಿ ಉತ್ತಮವಾಗಿ ಮೂಡಿಬಂದಿವೆ.  ಸೂರ್ಯೋದಯವಾಗುತ್ತಿದ್ದಂತೆ ಹೂಗಳು ಅರಳಿ ಹೊಳೆಯುವುದು, ಕಾಡಿನೊಳಗಿನ ನದಿ, ಮಿಂಚುವ ಡ್ರ್ಯಾಗನ್ ಚಿಟ್ಟೆ, ಸ್ಮರ್ಫ್‌ಗಳ ಅಣಬೆ ಮನೆ ಇವು ತ್ರೀಡಿಯಲ್ಲಿ ಮನಮೋಹಕವಾಗಿ ಕಾಣುತ್ತವೆ. 

ಪ್ರದರ್ಶನ ಎಲ್ಲೆಲ್ಲಿ..
ಬೆಂಗಳೂರಿನಲ್ಲಿ ಗರುಡ ಮಾಲ್, ಲಿಡೊ, ರೆಕ್ಸ್‌,  ಕಾವೇರಿ, ಗೋಪಾಲನ್ ಸಿನಿಮಾಸ್‌, ಸಿನೆಪೊಲಿಸ್‌, ಪಿವಿಆರ್ ಫೋರಂ, ಎಂಎಸ್‌ಆರ್ ಎಲಿಮೆಂಟ್ಸ್‌ ಮಾಲ್, ಸೋಲ್ ಸ್ಪಿರಿಟ್, ಪಿವಿಆರ್ ಅರೆನಾ, ಇನ್ನೊವೇಟಿವ್ ಮಲ್ಟಿಫ್ಲೆಕ್ಸ್‌, ಐನಾಕ್ಸ್‌ ವ್ಯಾಲುಮಾಲ್‌.

ಟಿಕೇಟ್‌ನ ವಿವರ: bookmyshow.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.