ADVERTISEMENT

‘ಸ್ವರಸಿಂಧು’ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
-ಅಶ್ವಿನಿ ಅನೀಶ್‌
 
**
ಸಂಗೀತ ಕ್ಷೇತ್ರದ ದಿಗ್ಗಜರಾದ ಶ್ಯಾಮಾ ಶಾಸ್ತ್ರಿಗಳು, ಮುತ್ತುಸ್ವಾಮಿ ದೀಕ್ಷಿತರಂತಹ ವಿದ್ವಾಂಸರ ಕಚೇರಿಗಳನ್ನು ಕೇಳಿ ಸ್ವರ ಸಹಿತವಾಗಿ ಕೈಯಲ್ಲಿ ಬರೆದಿರುವ ಅಪರೂಪದ ಕೃತಿಗಳಿಗೆಂದೇ  ಒಂದು ಅಂತರ್ಜಾಲತಾಣ ರೂಪಿಸಬೇಕು ಎಂಬ ಮಹತ್ವಾಕಾಂಕ್ಷಿ ಯೋಜನೆಯೊಂದು ಈಗ ನನಸಾಗುತ್ತಿದೆ.
 
ವೀಣಾ ವಿದ್ವಾನ್‌ ನಾಗರತ್ನ ಸದಾಶಿವ  ಅವರು ತಮ್ಮ  ಶಿಷ್ಯ ಶ್ರೀಕರ್ ನೇತೃತ್ವದ ತಂಡದೊಂದಿಗೆ ಈ ಕೃತಿಗಳನ್ನು www.swarasindhu.inನಲ್ಲಿ ಅಳವಡಿಸಿದ್ದು ಜ. 21ರ (ಶನಿವಾರ) ಲೋಕಾರ್ಪಣೆಯಾಗಲಿದೆ.
 
ಬಾಶ್ ಕಂಪೆನಿಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಶ್ರೀಕರ್‌ ಅವರು ಒಂದು ವರ್ಷ ರಜೆ ಪಡೆದು ವೆಬ್‌ಸೈಟ್‌ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಉಲ್ಲೇಖನೀಯ.
 
‘ಸಂಗೀತ ಕ್ಷೇತ್ರದ ಮಹಾ ಕೃತಿಗಳ ಹಸ್ತಪ್ರತಿಗಳೆಂದೇ ಕರೆಯಬಹುದಾದ ಪ್ರತಿಗಳಿವೆ. ಇದರ ವೈಶಿಷ್ಟ್ಯವೆಂದರೆ ಈ ಕೃತಿಗಳು ನಮಗೆ ಆರು ಭಾಷೆಗಳಲ್ಲಿ ದೊರೆಯುತ್ತವೆ. ನಮ್ಮ ಗುರುಗಳಾದ ವಿದುಷಿ ನಾಗರತ್ನ ಸದಾಶಿವ ಅವರ ಕೈಬರಹದ ಕೃತಿಗಳನ್ನು ಡಿಜಿಟಲೀಕರಿಸಿದ್ದೇವೆ ಹಾಗೂ ರಾಗ ಮತ್ತು ತಾಳಗಳ ಪರಿಚಯವೂ ಇದೆ’ ಎನ್ನುತ್ತಾರೆ ಶ್ರೀಕರ್‌.
 
ವೆಬ್‌ಸೈಟ್‌ನಿಂದ ಕೃತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ರಾಗಗಳ ಪರಿಚಯ, ತಮಗೆ ಇಷ್ಟವಾದ ರಾಗಗಳ ಕಛೇರಿಗಳ ವಿಡಿಯೊಗಳನ್ನು ಯೂಟ್ಯೂಬ್  ಮೂಲಕ ಆಸಕ್ತರು ನೋಡಬಹುದು. ತಾಳಗಳನ್ನೂ ಕಲಿಯಬಹುದು. ಸಂಪೂರ್ಣ ಉಚಿತವಾದ ಜಾಲತಾಣವಿದು ಎಂಬುದು ಅವರ ವಿವರಣೆ.
 
ಶ್ರೀಕರ್‌ ಅವರು ‘ಗುರು, ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ ಹಾಗೂ ಪಿಟೀಲು ವಾದಕಿ ನಾಗರತ್ನ ಸದಾಶಿವ ಅವರ ಮಾರ್ಗದರ್ಶನದಲ್ಲಿ ವೆಬ್‌ಸೈಟ್‌ ರೂಪುಗೊಂಡಿದೆ. ಮೃದಂಗ ವಿದ್ವಾನ್ ಹಾಗೂ ಸುಸ್ವರಾಲಯ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರ ಮಾರ್ಗದರ್ಶನ, ಗೌತಮ್ ಹೆಗಡೆ ಮತ್ತು ಕೌಶಿಕ್ ಬೆಂಬಲದೊಂದಿಗೆ ವೆಬ್‌ಸೈಟ್‌ ರೂಪುಗೊಂಡಿದೆ’ ಎನ್ನುತ್ತಾರೆ ಶ್ರೀಕರ್‌.
 
**
ಇಂದು ಬಿಡುಗಡೆ
ವೆಬ್‌ಸೈಟ್‌ಗೆ ಜ.21ರಂದು  (ಶನಿವಾರ) ವಿದ್ವಾನ್‌ ಆರ್.ಕೆ.ಪದ್ಮನಾಭ ಅವರಿಂದ ಲೋಕಾರ್ಪಣೆ. ಅತಿಥಿ–  ಎಚ್‌.ಕೆ.ವೆಂಕಟರಾಂ, ಎಂ.ಸೂರ್ಯಪ್ರಸಾದ್‌.
 
ಉಪಸ್ಥಿತಿ: ವಿದುಷಿ ನಾಗರತ್ನ ಸದಾಶಿವ. ಆಯೋಜನೆ– ಸುಸ್ವರಾಲಯ ಕಾಲೇಜ್‌ ಆಫ್‌ ಮ್ಯೂಸಿಕ್‌. ಸ್ಥಳ: ಶ್ರೀರಾಮ ಲಲಿತಕಲಾ ಮಂದಿರ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 4.30. 
 
ಮಾಹಿತಿಗೆ: 99161 35143. ಈ ಮೇಲ್ ವಿಳಾಸ:  swarasindhu@gmail.com 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.