ADVERTISEMENT

ಹರಿದು ಬಾ ಅರ್ಕಾವತಿ...

ಮಂಜುಶ್ರೀ ಎಂ.ಕಡಕೋಳ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ನಂದಿ ಬೆಟ್ಟದಲ್ಲಿ ಅರ್ಕಾವತಿಯ ಉಗಮ ಸ್ಥಳ.    	ಸಂಗ್ರಹ ಚಿತ್ರ
ನಂದಿ ಬೆಟ್ಟದಲ್ಲಿ ಅರ್ಕಾವತಿಯ ಉಗಮ ಸ್ಥಳ. ಸಂಗ್ರಹ ಚಿತ್ರ   

ರಾಜಸ್ತಾನದಲ್ಲಿ ಜಲತಜ್ಞ ರಾಜೇಂದ್ರಸಿಂಗ್ ನೇತೃತ್ವದಲ್ಲಿ ನಡೆದ ಜಲ ಆಂದೋಲನ ಆ ರಾಜ್ಯದ ರೂಪುರೇಷೆಯನ್ನೇ ಬದಲಿಸಿತ್ತು. ಅಲ್ಲಿನ ಅರವಾರಿ ನದಿ ಮತ್ತೆ ಹರಿಯುವ ಮೂಲಕ ದೇಶದ ಮೂಲೆಮೂಲೆಗಳ ಸಾವಿರಾರು ನದಿಪಾತ್ರಗಳ ಆಸುಪಾಸಿನ ಜನರಲ್ಲಿ ನಿರೀಕ್ಷೆ ಹುಟ್ಟಿಸಿತ್ತು.

ಇಂಥದ್ದೇ ಜನಾಂದೋಲನ ರೂಪುಗೊಂಡರೆ, ನಂದಿಬೆಟ್ಟದಲ್ಲಿ ಹುಟ್ಟಿ ಸಂಗಮದಲ್ಲಿ ಕಾವೇರಿ ಸೇರುವ ಅರ್ಕಾವತಿಯೂ ಮತ್ತೆ ಹರಿದಾಳು ಎಂಬ ಕನಸು ಕಟ್ಟಿಕೊಂಡ ಒಂದಿಷ್ಟು ಯುವಕರು ಸಕ್ರಿಯರಾದರು. ನದಿ ಪಾತ್ರ ಸ್ವಚ್ಛಗೊಳಿಸುವ, ಕೆರೆಗಳಿಗೆ ನೀರು ಹರಿಸುವ ಕಾಲುವೆಗಳನ್ನು ಗುರುತಿಸುವ, ಗುಡ್ಡಗಳಲ್ಲಿ ನೀರು ಇಂಗಿಸುವ, ಕೆರೆಗಳ ಒತ್ತುವರಿ ತೆರವುಗೊಳಿಸುವ ಕೆಲಸಗಳು ಆರಂಭವಾದವು.

ಯಲಹಂಕದಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ‘ಅರ್ಕಾವತಿ’ ಕ್ಷೇತ್ರದಲ್ಲಿ 2014ರಲ್ಲಿ ನದಿ ಮೈದುಂಬಿತ್ತು. ಇದು ಹೋರಾಟದಲ್ಲಿ ತೊಡಗಿಸಿಕೊಂಡಿದ್ದವರಿಗೆ ಮಾತ್ರವಲ್ಲ, ಸಾವಿರಾರು ಜನರಿಗೆ ನೆಮ್ಮದಿ ತಂದಿತ್ತು. ಮುಂದಿನ ದಿನಗಳಲ್ಲಿ ನದಿ ಮತ್ತೆ ಹರಿದೀತು. ಬೆಂಗಳೂರಿನ ಕಾವೇರಿ ಅವಲಂಬನೆಗೆ ಸ್ವಲ್ಪವಾದರೂ ಕಡಿವಾಣ ಬಿದ್ದೀತು ಎಂಬ ನಿರೀಕ್ಷೆ ಮೂಡಿಸಿತ್ತು. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ.

ADVERTISEMENT

ಈಗ ಮತ್ತೆ ಕಾಲದ ಚಕ್ರ ಉರುಳಿದೆ. ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ  ಸಾಲುಸಾಲು ಕೆರೆಗಳ ಮಾಲೆಯಂತಿದ್ದ ನದಿಪಾತ್ರ ಬರಿದಾಗಿದೆ. ನದಿಪಾತ್ರದಲ್ಲಿಯೂ ನೀಲಗಿರಿ, ಅಕೇಶಿಯಾ, ಕ್ಯಾಸುರಿನಾ ಮರಗಳು ಎದ್ದುಕಾಣುತ್ತಿವೆ. ಅರ್ಕಾವತಿ ಎನ್ನುವ ನದಿ ಹರಿದ ಕುರುಹೂ ಇಲ್ಲಿ ಕಾಣಿಸುತ್ತಿಲ್ಲ.

ಒಂದು ಕಾಲಕ್ಕೆ ಬೆಂಗಳೂರು ಮಹಾನಗರದ ಜನತೆಗೆ  ನೀರು ಉಣಿಸುತ್ತಿದ್ದ ಅರ್ಕಾವತಿ ಇಂದು ಭೂಪಟದಲ್ಲಷ್ಟೇ ಉಳಿದಿದೆ. ನದಿಪಾತ್ರದ ಆಸುಪಾಸಿನ ಜನರನ್ನು ಮಾತನಾಡಿಸಿದರೆ ಇದೇ ನೋವು ಎದ್ದು ಕಾಣುತ್ತದೆ.

ಅರ್ಕಾವತಿ ದಿಢೀರ್ ಎಂದು ಕಳೆದುಹೋಗಲಿಲ್ಲ. ನದಿ ಬತ್ತಿಸುವಲ್ಲಿ ನದಿಪಾತ್ರದಲ್ಲಿದ್ದ ದೊಡ್ಡಬಳ್ಳಾಪುರದಂಥ ನಗರಗಳ ಬೆಳವಣಿಗೆ, ಕಲ್ಲು, ಮರಳು ಗಣಿಗಾರಿಕೆ, ವಾಣಿಜ್ಯ ಬೆಳೆಗಳ ವಿಸ್ತರಣೆ, ನದಿಯ ಪಾತ್ರದಲ್ಲಿಯೇ ನೆಲೆ ಕಂಡುಕೊಂಡ ಕೊಳವೆಬಾವಿಗಳ ಕೊಡುಗೆಯೂ ದೊಡ್ಡದು. ನದಿಪಾತ್ರದ ಶೇ 90ರಷ್ಟು ಕೆರೆಗಳು ಕಳೆದ 20 ವರ್ಷಗಳಿಂದ ತುಂಬಿಲ್ಲ.

ಇದೇ ಅವಧಿಯಲ್ಲಿ ಬಾಶೆಟ್ಟಿಹಳ್ಳಿ ಸೇರಿದಂತೆ ವಿವಿಧೆಡೆ ಕೈಗಾರಿಕೆ ವಸಾಹತುಗಳು ಅಗಾಧ ಪ್ರಮಾಣದಲ್ಲಿ ಬೆಳೆದವು. ಕೈಗಾರಿಕೆಗಳ ತ್ಯಾಜ್ಯ ವಿಲೇವಾರಿಗೆ ಬತ್ತಿ ಹೋದ ನದಿಪಾತ್ರಕ್ಕಿಂತ ಬೇರೆ ಪರ್ಯಾಯ ಉಂಟೆ? ನದಿಪಾತ್ರದಲ್ಲಿ ಏನೇನು ತುಂಬಿದೆ ಎಂಬುದನ್ನು ವಿವರಿಸಿ ಹೇಳಬೇಕೆ?

90ರ ದಶಕದಲ್ಲಿ ಆರಂಭವಾದ ಅರ್ಕಾವತಿ ಪುನಶ್ಚೇತನ ಹೋರಾಟ ಈಗಲೂ ನಡೆಯುತ್ತಿದೆ. ‘ಸ್ಥಳೀಯ ರಾಜಕಾರಣ ಮತ್ತು ಕೆಲವರ ಸ್ವಹಿತಾಸಕ್ತಿ ಈ ಚಳವಳಿಯ ತೀವ್ರತೆಯನ್ನೂ ಕಡಿಮೆ ಮಾಡಿದೆ’ ಎಂಬ ವಿಷಾದ ನದಿ ಆಸುಪಾಸಿನ ಜನರ ಮಾತಿನಲ್ಲಿ ಇಣುಕುತ್ತದೆ.

‘ನದಿ ಹರಿಯುತ್ತೆ, ನಮ್ಮೂರು ಹಸಿರಾಗುತ್ತೆ. ಬೆಂಗಳೂರಿನ ಜನರು ಅರ್ಕಾವತಿಯ ಪ್ರಾಮುಖ್ಯತೆ ಅರಿತರೆ ಎಲ್ಲವೂ ಬದಲಾಗುತ್ತೆ’ ಎಂಬ ಹೊಸಹಳ್ಳಿ ಗೌರಮ್ಮ ಅವರ ಮಾತು ಸಾಕಷ್ಟು ಅರ್ಥಗಳನ್ನು ಧ್ವನಿಸುತ್ತದೆ.

*

ನದಿ ಬಗ್ಗೆ ಒಂದಿಷ್ಟು

ಹುಟ್ಟು: ನಂದಿ ಬೆಟ್ಟ

190 ಕಿ.ಮೀ. ನದಿಯ ಉದ್ದ

4,253 ಚದರ ಕಿ.ಮೀ. 

1,775 ಜಲಾನಯನ ಪ್ರದೇಶದಲ್ಲಿರುವ ಒಟ್ಟು ಕೆರೆಗಳುಒಟ್ಟು ಜಲಾನಯನ ಪ್ರದೇಶ

**

ಪುನಶ್ಚೇತನ ಹೇಗೆ?

* ಜಲಾನಯನ ಪ್ರದೇಶದಲ್ಲಿರುವ ಕುಂಟೆ, ಕಲ್ಯಾಣಿ, ಕೆರೆ, ಕಾಲುವೆಗಳ ಪುನರುಜ್ಜೀವನ.

* ಜಲಾನಯನದ ಎಲ್ಲಾ ಕಟ್ಟಡಗಳಿಗೆ ಮಳೆ ನೀರು ಸಂಗ್ರಹ  ಕಡ್ಡಾಯ.

* ನದಿ ವಲಯವನ್ನು ಸ್ಪಷ್ಟವಾಗಿ ಗುರುತಿಸಿ, ಕೃಷಿ ವಲಯದ ಗಡಿ ಘೋಷಿಸಬೇಕು. ಸಹಜ-ಸಾವಯವ, ಜಲಸ್ನೇಹಿ ಕೃಷಿಗೆ ಮತ್ತು ಕೃಷಿ ಅರಣ್ಯಕ್ಕೆ ಒತ್ತು.

* ಜಲಾನಯನ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ, ಚರಂಡಿ ನೀರು ಸಂಸ್ಕರಣೆಗೆ ಒತ್ತು ನೀಡುವುದು.

* ನೀಲಗಿರಿ ಮತ್ತು ಅಕೇಶಿಯಾ ತೆರವುಗೊಳಿಸಿ ಸ್ಥಳೀಯ ಜಾತಿಯ ಮರ ಗಿಡಗಳನ್ನು ಬೆಳೆಸಬೇಕು.

* ಜಲಾನಯನ ಪ್ರದೇಶದ ನಿರ್ವಹಣೆಗೆ ಪ್ರಾಧಿಕಾರ ರಚನೆ

* ನದಿಪಾತ್ರದಲ್ಲಿ ಮಾಲಿನ್ಯ ಮಾಡುವಂತಹ ಯಾವುದೇ ಹೊಸ ಕಾರ್ಖಾನೆಗಳಿಗೆ ಅನುಮತಿ ನೀಡಬಾರದು.

**

ಹೆಸರಘಟ್ಟ ಕೆರೆ ರಕ್ಷಿಸಿ

‘ಅರ್ಕಾವತಿ ಜಲಾನಯನ ವ್ಯಾಪ್ತಿಯ ಹೆಸರಘಟ್ಟ ಕೆರೆ ಪ್ರದೇಶದಲ್ಲಿ ರಾತ್ರೋರಾತ್ರಿ ಬಿಬಿಎಂಪಿಯ ಕಸದ ವಾಹನಗಳು ನಗರದ ತ್ಯಾಜ್ಯವನ್ನು ಸುರಿದು ಹೋಗುತ್ತಿವೆ. ಮಳೆಗಾಲದಲ್ಲಿ ನಗರದ ತ್ಯಾಜ್ಯ ಹೆಸರಘಟ್ಟ ಕೆರೆಯೊಂದಿಗೆ ಮಿಳಿತವಾಗಿ ಗ್ರಾಮಸ್ಥರು ಈ ನೀರು ಬಳಸದಂತೆ ಆಗಿದೆ. ಈ ಬಗ್ಗೆ ಬೆಂಗಳೂರು ನಗರ  ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಚಿತ್ರ ಸಮೇತ ಮನವಿ ಸಲ್ಲಿಸಿದ್ದೇವೆ. ಇದುವರೆಗೂ ಪ್ರಯೋಜನವಾಗಿಲ್ಲ’

-ಬಸವರಾಜಯ್ಯ, ಹೆಸರಘಟ್ಟ ನಿವಾಸಿ

**

ಜಲಾನಯನ ಪ್ರದೇಶದ ವ್ಯವಸ್ಥಿತ ನಿರ್ವಹಣೆ

ನದಿಯು ಮತ್ತೆ ಹರಿಯುವಂತೆ ಆಗಬೇಕು ಎನ್ನುವುದು ಅರ್ಕಾವತಿ ಪುನಶ್ಚೇತನ ಕನಸಿನ ಒಂದು ಭಾಗ ಮಾತ್ರ. ಜಲಾನಯನ ಪ್ರದೇಶದಲ್ಲಿ ಸುಸ್ಥಿರ ಹೊಸ ಕೃಷಿ ಪದ್ಧತಿ ರೂಪಿಸುವುದು, ನದಿಪಾತ್ರದತ್ತ ನಗರ ಪ್ರದೇಶಗಳ ವಿಸ್ತರಣೆ ತಡೆಯುವುದು, ಮತ್ತೆ ಬರ ಕಾಡದಂತೆ, ನೀರು ಕೊಳಕು ಆಗದಂತೆ ಎಚ್ಚರವಹಿಸುವುದು ಮತ್ತು ಒಟ್ಟಾರೆ ಅರ್ಕಾವತಿ ಜಲಾನಯನ ಪ್ರದೇಶದ ವ್ಯವಸ್ಥಿತ ನಿರ್ವಹಣೆ ಈ ಯೋಜನೆಯ ಆಶಯದಲ್ಲಿ ಸೇರಿವೆ.

-ಜನಾರ್ದನ ಕೆಸರಗದ್ದೆ, ಅರ್ಕಾವತಿ–ಕುಮದ್ವತಿ ನದಿ ಪುನಶ್ಚೇತನ ಸಮಿತಿಯ ಹೋರಾಟಗಾರ

**

ಜನರ ಸಹಭಾಗಿತ್ವ ಬೇಕು

ನದಿ ಉಳಿಸಿಕೊಳ್ಳುವ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಜೊತೆಗೆ ಜನರ ಸಹಭಾಗಿತ್ವವೂ ಅತ್ಯಗತ್ಯ. ನದಿಯಲ್ಲಿ ನೀರು ಕಾಣದಿರಬಹುದು. ಆದರೆ, ಜನಮಾನಸದಲ್ಲಿ ಅರ್ಕಾವತಿ ಇಂದಿಗೂ ಜೀವನದಿ. ನದಿ ವರ್ಷಪೂರ್ತಿ ಹರಿಯದಿದ್ದರೂ ಮಳೆಗಾಲದಲ್ಲಿ ತನ್ನ ಕುರುಹು ತೋರುತ್ತಾಳೆ. ಆ ಕುರುಹನ್ನು ಜತನವಾಗಿ ಕಾಪಾಡಬೇಕಿದೆ. ಅರ್ಕಾವತಿ ಪುನಶ್ಚೇತನಗೊಂಡರೆ ಕೇವಲ ನದಿಪಾತ್ರದ ಜನರಷ್ಟೇ ಅಲ್ಲ, ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಜನರ ಬದುಕೂ ಬೆಳಗುತ್ತದೆ.

-ಜಿ.ಮಂಜುನಾಥ, ಅರ್ಕಾವತಿ ಮತ್ತು ಕುಮುದ್ವತಿ ನದಿ ಪುನಶ್ಚೇತನ ಸಮಿತಿ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.