ADVERTISEMENT

ಹಳೆ ಕಾರುಗಳ ಭಲೆ ಕ್ಲಬ್

ಅನಿತಾ ಈ.
Published 26 ನವೆಂಬರ್ 2015, 19:30 IST
Last Updated 26 ನವೆಂಬರ್ 2015, 19:30 IST

ಕೇವಲ ರಾಜಮನೆತನ ಹಾಗೂ ಶ್ರೀಮಂತರ ಸ್ವತ್ತಾಗಿದ್ದ ಐಷಾರಾಮಿ ಹಳೇ ಕಾರುಗಳು ಈಗ ಸಾಮಾನ್ಯ ಜನರ ಬಳಿಯೂ ಕಾಣಿಸಿಕೊಳ್ಳುತ್ತಿವೆ. ಹಳೇ ಐಷಾರಾಮಿ ಕಾರುಗಳನ್ನು ಇಷ್ಟಪಡುವವರು ಅವುಗಳ ಸಂಗ್ರಹಕ್ಕೂ ಮುಂದಾಗಿದ್ದಾರೆ. ಹೀಗಾಗಿಯೇ ವಿಂಟೇಜ್‌ ಹಾಗೂ ಕ್ಲಾಸಿಕ್‌ಗಳ ಕಾರುಗಳ ಸಂಗ್ರಹಕಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಹೀಗೆ ವಿಂಟೇಜ್‌ ಹಾಗೂ ಕ್ಲಾಸಿಕ್‌ ಕಾರುಗಳ ಕುರಿತು ಅರಿವು ಮೂಡಿಸುವ ಸಲುವಾಗಿ 1979ರಲ್ಲಿ ಹಳೇ ಕಾರುಗಳ ಸಂಗ್ರಹಕಾರರ ಗುಂಪೊಂದು ಕರ್ನಾಟಕ ವಿಂಟೇಜ್‌ ಮತ್ತು ಕ್ಲಾಸಿಕ್‌ ಕಾರ್‌ ಕ್ಲಬ್‌ ಅನ್ನು ನಗರದಲ್ಲಿ ಪ್ರಾರಂಭಿಸಿತು. ಆಗ ರವಿಕುಮಾರ್‌, ಬಲರಾಮ್‌ ಕಂಡಿಗೆ, ಪೃಥ್ವಿನಾಥ್‌, ಅಶ್ವತ್ಥ್‌ ಸೇರಿದಂತೆ ಐದಾರು ಮಂದಿ ಸೇರಿ ಪ್ರಾರಂಭಿಸಿದ್ದ ಕ್ಲಬ್‌ನಲ್ಲಿ ಈಗ 270 ಮಂದಿ ಸದ್ಯರಿದ್ದಾರೆ.

ಬೆಂಗಳೂರಿಗರು ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿನ ಹಾಗೂ ವಿದೇಶಗಳಲ್ಲಿನ ಹವ್ಯಾಸಿ ವಿಂಟೇಜ್‌ ಕಾರು ಸಂಗ್ರಹಕಾರರು ಈ ಕ್ಲಬ್‌ನ ಸದಸ್ಯತ್ವ ಪಡೆದಿದ್ದಾರೆ. ಉದ್ಯಮಿ ವಿಜಯ್‌ ಮಲ್ಯ ಹಾಗೂ ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹೆಗ್ಡೆ ಅವರು ಸಹ ಈ ಕ್ಲಬ್‌ನ ಸದಸ್ಯರು. ಇಲ್ಲಿ ಯಾರು ಬೇಕಾದರೂ ಸದಸ್ಯತ್ವ ಪಡೆಯಬಹುದು. ಅದಕ್ಕಾಗಿ ಅವರ ಬಳಿ ಹಳೇ ಐಷಾರಾಮಿಗಳು ಕಾರುಗಳು ಇರಲೇಬೇಕು ಎಂಬ ನಿಯಮವಿಲ್ಲ.

ವಿಂಟೇಜ್‌ ಕಾರುಗಳ ಬಗ್ಗೆ ಆಸಕ್ತಿ ಹೊಂದಿರುವವರು, ಇಂತಹ ಕಾರುಗಳನ್ನು ರಿಪೇರಿ ಮಾಡಲು ಬರುವವರು ಹಾಗೂ ಇಂತಹ ಹಳೇ ಕಾರುಗಳ ಬಗ್ಗೆ ಮಾಹಿತಿ ಹೊಂದಿರುವವರು ಈ ಕ್ಲಬ್‌ನ ಸದಸ್ಯತ್ವ ಪಡೆಯಬಹುದು. ಸದಸ್ಯತ್ವ ಪಡೆಯಲು ₹25 ಸಾವಿರ ಶುಲ್ಕ ನೀಡಬೇಕು. ಇದು ಆಜೀವ ಸದಸ್ಯತ್ವಕ್ಕಾಗಿ ಪಡೆಯುವ ಶುಲ್ಕ.

ಈ ಕ್ಲಬ್‌ನಲ್ಲಿ ಸದಸ್ಯತ್ವ ಹೊಂದಿರುವವರು ವಿವಿಧ ದೇಶಗಳಲ್ಲಿರುವ ಹಳೇ ಕಾರು ಸಂಗ್ರಹಕಾರರ ಇತರೆ ಕ್ಲಬ್‌ಗಳಲ್ಲೂ ಸದಸ್ಯತ್ವ ಹೊಂದಿದ್ದಾರೆ. ಹೀಗಾಗಿ ಈ ಕಾರುಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದರೂ ಸುಲಭವಾಗಿ ದೊರೆಯುತ್ತದೆ. ಇನ್ನು ಕಾರುಗಳ ನಿರ್ವಹಣೆ ವಿಷಯಕ್ಕೆ ಬಂದರೆ, ಅದು ತುಂಬಾ ದುಬಾರಿ.   

‘ವೆಟರನ್‌, ಎಡ್ವರ್ಡಿಯನ್‌, ವಿಂಟೇಜ್‌ ಹಾಗೂ ಕ್ಲಾಸಿಕ್ ಕಾರುಗಳ ಬಿಡಿಭಾಗಗಳು ದೊರೆಯುವುದು ತುಂಬಾ ವಿರಳ. ಅವುಗಳಿಗಾಗಿ ಈ ವಿದೇಶಿ ಕ್ಲಬ್‌ಗಳನ್ನು ಅವಲಂಬಿಸುತ್ತೇವೆ. ಯಾವುದೇ ಕಾರುಗಳ ಬಿಡಿಭಾಗಗಳು ಹಾಗೂ ಅವುಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪರಿಹಾರಕ್ಕೆ ವಿದೇಶಿ ಕ್ಲಬ್‌ಗಳನ್ನು ಸಂಪರ್ಕಿಸುವುದರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಅಲ್ಲದೆ ವಿಶ್ವದ ಯಾವುದೇ ಭಾಗದಲ್ಲಿ ಇಂತಹ ಕಾರುಗಳನ್ನು ರಿಪೇರಿ ಮಾಡುವವರು ಇದ್ದಾರೆಯೇ ಎಂದು ಸದಾ ಹುಡುಕಾಟ ನಡೆಸುತ್ತಲೇ ಇರುತ್ತೇವೆ’ ಎನ್ನುತ್ತಾರೆ ಕರ್ನಾಟಕ ವಿಂಟೇಜ್‌ ಮತ್ತು ಕ್ಲಾಸಿಕ್‌ ಕಾರ್‌ ಕ್ಲಬ್‌ನ ಕಾರ್ಯದರ್ಶಿ ಡಾ. ರವಿಪ್ರಕಾಶ್‌.

ಈ ಕ್ಲಬ್‌ನಲ್ಲಿ ಹಳೇ ಮರ್ಸಿಡಿಸ್‌, ಜಾಗ್ವಾರ್‌, ರೋಲ್ಸ್‌ರಾಯ್‌, ಅಂಬಾಸಿಡರ್‌ ಸೇರಿದಂತೆ ರಾಜ ಮನೆತನದವರು ಬಳಸಿದ ಹಲವಾರು ಐಷಾರಾಮಿಗಳು ಕಾರುಗಳನ್ನು ಹೊಂದಿರುವವರು ಇದ್ದಾರೆ. ಜತೆಗೆ ಹಳೇ ಸೈಕಲ್‌, ಮೋಟಾರ್‌ ಸೈಕಲ್‌, ನಾನಾ ರೀತಿಯ ಪಲ್ಲಕ್ಕಿಗಳನ್ನು ಹೊಂದಿರುವವರು ಹಾಗೂ ಕಾರುಗಳನ್ನು ರಿಪೇರಿ ಮಾಡುವ ಮೆಕ್ಯಾನಿಕ್‌ಗಳು ಸಹ ಸದಸ್ಯತ್ವ ಪಡೆದಿದ್ದಾರೆ. ಒಟ್ಟಾರೆ 800ಕ್ಕೂ ಹೆಚ್ಚು ಹಳೇ ಐಷಾರಾಮಿಗಳು ಕಾರುಗಳು ಹಾಗೂ 200ಕ್ಕೂ ಹೆಚ್ಚು ಮೋಟಾರ್‌ ಸೈಕಲ್‌ಗಳು ಈ ಕ್ಲಬ್‌ನಲ್ಲಿವೆ.

ಕ್ಲಬ್‌ ವತಿಯಿಂದ ಆಗಾಗ ಹಲವಾರು ರ‍್ಯಾಲಿಗಳು ಹಾಗೂ ಷೋಗಳನ್ನು ಆಯೋಜಿಸಲಾಗುತ್ತದೆ. ಅದರಲ್ಲೂ ವಿಂಟೇಜ್‌ ಕಾರುಗಳ ಬಗ್ಗೆ ಅರಿವು ಮೂಡಿಸಲು, ಸಂಚಾರಿ ನಿಯಮಗಳ ಪಾಲನೆ, ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಹಾಗೂ ಹೆಣ್ಣು ಮಕ್ಕಳ ಸುರಕ್ಷೆ ಕುರಿತ ಅಭಿಯಾನ ನಡೆಸಲು ವಿಂಟೇಜ್‌ ಕಾರುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಜತೆಗೆ ವಿಶ್ವದ ಯಾವುದೇ ಭಾಗದಲ್ಲಿರುವ ವಿಂಟೇಲ್‌ ಕಾರು ಸಂಗ್ರಹಕಾರರ ಕ್ಲಬ್‌ಗಳಿಂದ ಯಾರೇ ಬೆಂಗಳೂರಿಗೆ ಭೇಟಿ ನೀಡಿದರೂ ಅವರನ್ನು ಇಲ್ಲಿನ ಕ್ಲಬ್‌ಗೆ ಕರೆದು ಕಾರುಗಳ ಕುರಿತಂತೆ ಇರುವ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

***
ಕ್ಲಬ್‌ನಲ್ಲಿ 1909ರಿಂದ 1979ರವರೆಗಿನ ಕಾಲದ ಕಾರುಗಳು ಇವೆ. 1909ರ ಕಾಲದ ಕಾರುಗಳನ್ನು ವೆಟರನ್‌ ಕಾರುಗಳು, 1910–1919ರವರೆಗಿನ ಕಾರುಗಳನ್ನು ಎಡ್ವರ್ಡಿಯನ್‌, 1920–1939ರವರೆಗಿನ ಕಾರುಗಳನ್ನು ವಿಂಟೇಜ್‌ ಹಾಗೂ 1940–1979ರವರೆಗಿನ ಕಾರುಗಳನ್ನು ಕ್ಲಾಸಿಕ್‌ ಕಾರುಗಳು ಎಂದು ಕರೆಯಲಾಗುತ್ತದೆ.
-ಡಾ. ರವಿಪ್ರಕಾಶ್‌

ಸ್ಥಳ: ಕರ್ನಾಟಕ ವಿಂಟೇಜ್‌ ಮತ್ತು ಕ್ಲಾಸಿಕ್‌ ಕಾರ್‌ ಕ್ಲಬ್‌, ಕಲಾ ಫಾರ್ಮ್ಸ್‌, ರಾಜರಾಜೇಶ್ವರಿ ನಗರ.
ದೂರವಾಣಿ ಸಂಖ್ಯೆ: 080– 28611909.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.