ADVERTISEMENT

ಹೃದಯವಂತಿಕೆಯ ವೈದ್ಯಕೀಯ ಸೇವೆ

ಸುರೇಖಾ ಹೆಗಡೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರುವ ಸಹಾಯಕಿ
ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರುವ ಸಹಾಯಕಿ   

ವಯಸ್ಸಾಗಿದೆ, ದೇಹದಲ್ಲಿ ಕಸುವಿಲ್ಲ, ಹಾಸಿಗೆಯಲ್ಲೇ ಬದುಕು. ಕೆಲವೊಮ್ಮೆ ಉಸಿರುಗಟ್ಟಿದವರಿಗೆ ಕೃತಕ ಉಸಿರಾಟದ ವ್ಯವಸ್ಥೆಯೂ ಆಗಬೇಕು. ಬಿ.ಪಿ, ಶುಗರ್‌ ಸಮಸ್ಯೆಯಲ್ಲಿ ಪಥ್ಯಾಹಾರ ಕಡ್ಡಾಯ. ಸರ್ವ ಕಾರ್ಯಕ್ಕೂ ಇನ್ನೊಬ್ಬರನ್ನು ಅವಲಂಬಿಸಬೇಕು.

ಇನ್ನು ಕೆಲವರಿಗೆ ಪ್ರಪಂಚದ ಅರಿವೇ ಇಲ್ಲ, ಮತ್ತೆ ಕೆಲವರನ್ನು ಪೀಡಿಸುವ ಪಾರ್ಶ್ವವಾಯು, ನಿಶ್ಯಕ್ತಿ, ಮರೆವು... ಹೀಗೆ ಬದುಕು ಕಾಡಿಸುವ ನಾನಾ ದೈಹಿಕ ಸಮಸ್ಯೆಗಳಿಗೆ ತುತ್ತಾಗಿ ವೈದ್ಯಕೀಯ ನೆರವು ಬೇಕಿರುವ ಅನೇಕರಿಗೆ ಆಶಾಕಿರಣವಾಗಿ ಸಂದಿದೆ ವೈಷ್ಣವಿ ಮೆಡಿಕೇರ್‌ ಟ್ರಸ್ಟ್‌.

2008ರಲ್ಲಿ ಮಂಜುಳಾ ಶ್ರೀಧರ್‌ ಈ ಸಂಸ್ಥೆಯನ್ನು ಪ್ರಾರಂಭಿಸಿದರು.  ಮಲ್ಲೇಶ್ವರದ 17ನೇ ಅಡ್ಡರಸ್ತೆಯ ಕಟ್ಟಡವೊಂದರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇದೀಗ 37 ಜನರ ಯೋಗಕ್ಷೇಮ ನೋಡಿಕೊಳ್ಳುತ್ತಿದೆ. ಈ ಕೆಲಸಕ್ಕಾಗಿ ಎರಡು ಮನೆಯನ್ನು ಬಾಡಿಗೆ ಪಡೆಯಲಾಗಿದೆ.

ADVERTISEMENT

ಪ್ರತಿಯೊಬ್ಬರಿಗೂ ವೈದ್ಯರು ಸೂಚಿಸಿದ ಆಹಾರಗಳನ್ನೇ ನೀಡಲಾಗುತ್ತದೆ. ಅಲ್ಲಿರುವವರ ನೆರವಿಗಾಗಿ 16 ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ಕೋಣೆಗೆ ಒಬ್ಬ ಅಟೆಂಡರ್‌ ಇರುತ್ತಾರೆ. ಅವರೇ ಡೈಪರ್‌ ಬದಲಾಯಿಸುವುದು, ಸ್ನಾನ ಮಾಡಿಸುವುದು, ಕೂದಲು ಬಾಚುವುದು, ಆಹಾರ ನೀಡುವುದು, ಸ್ವಚ್ಛಗೊಳಿಸುವುದು, ಅಗತ್ಯ ಬಿದ್ದಾಗ ವೈದ್ಯರ ನೆರವು ಕೋರುವುದು ಸೇರಿದಂತೆ ರೋಗಿಯ ಅಗತ್ಯತೆಗಳನ್ನು ನಿಭಾಯಿಸುತ್ತಾರೆ. ಇಲ್ಲಿ 24X7 ವೈದ್ಯಕೀಯ ನೆರವು ನೀಡಲಾಗುತ್ತಿದೆ. ಡಾ.ಕೃಪಾ ಇಲ್ಲಿ ವೈದ್ಯರು.

ಕೋಮಾದಲ್ಲಿರುವವರು, ಅಲ್ಜೈಮರ್‌, ಡಿಮೆನ್ಶಿಯಾ,  ಟರ್ಮಿನಲ್‌ ಪೇಷೆಂಟ್‌, ಮಾನಸಿಕ ಸಮಸ್ಯೆ ಇರುವವರೂ ಇದ್ದಾರೆ. ಆರೇಳು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿರುವ 40 ವರ್ಷದ ಒಬ್ಬ ವ್ಯಕ್ತಿಯೂ ಇಲ್ಲಿದ್ದಾರೆ. ಅವರಿಗೆ ಮೂಗಿನ ಮೂಲಕವೇ ಆಹಾರ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಅಸಹಾಯಕರಿಗೆ ಸಹಾಯ ಮಾಡುವ ಉದ್ದೇಶವನ್ನಿಟ್ಟುಕೊಂಡ ಸಂಸ್ಥೆಯೇ ಆದರೂ ಉಚಿತ ಸೇವಾ ವ್ಯವಸ್ಥೆ ಇಲ್ಲಿಲ್ಲ. ‘ರೋಗಿಗಳ ದೈಹಿಕ ಸ್ಥಿತಿ ಹಾಗೂ ಕೌಟುಂಬಿಕ ಸ್ಥಿತಿಗಳಿಗನುಗುಣವಾಗಿ  ಶುಲ್ಕ ಪಡೆಯಲಾಗುತ್ತದೆ. ಇನ್ನು ಕೆಲವರು ಕೈಯಲ್ಲಿ ಬಿಡಿಗಾಸೂ ಇಲ್ಲದೆ, ಸಂಬಂಧಿಕರೂ ಇಲ್ಲದೆ ಬಂದು ಸೇರಿದ್ದೂ ಇದೆ. ಅಂಥವರಿಗೆ ಉಚಿತವಾಗಿ ಸೇವೆ, ನೀಡಿ, ಅಂತ್ಯ ಸಂಸ್ಕಾರವನ್ನೂ ಮಾಡಿದ್ದೇನೆ. ನಿತ್ಯ 100 ಊಟ, ರೋಗಿಗಳ ಶುಶ್ರೂಷೆ, ಖರ್ಚುವೆಚ್ಚ, ಬಾಡಿಗೆ, ಕೆಲಸ ಮಾಡುವವರಿಗೆ ಸಂಬಳ ನೀಡಬೇಕಿರುವುದರಿಂದ ಉಚಿತವಾಗಿ ಎಲ್ಲವನ್ನೂ ನಿಭಾಯಿಸುವುದು ಅಸಾಧ್ಯ’ ಎನ್ನುತ್ತಾರೆ ಮಂಜುಳಾ.

ಸಂಸ್ಥೆಯ ವತಿಯಿಂದ, ಕಡಿಮೆ ಓದಿರುವ ಹಳ್ಳಿಯ ಹುಡುಗ ಹುಡುಗಿಯರಿಗೆ ಎರಡು ತಿಂಗಳು ತರಬೇತಿ ನೀಡಿ ಅವರಿಗೆ ಹೋಂನರ್ಸ್‌ ಕೆಲಸ ಮಾಡುವ ಅವಕಾಶವನ್ನೂ ನೀಡಲಾಗುತ್ತಿದೆ. ಆಂಬ್ಯುಲೆನ್ಸ್‌ ಸೇವೆಯೂ ಇದೆ. 40ರಿಂದ ಸುಮಾರು 91 ವರ್ಷದವರೂ ಇಲ್ಲಿ ಶುಶ್ರೂಷೆ ಪಡೆಯುತ್ತಿದ್ದು, ಬೇಸರ ಕಳೆಯಲೆಂದು ಪ್ರತಿ ಕೋಣೆಗೂ ಟೀವಿ ವ್ಯವಸ್ಥೆ ಮಾಡಿಕೊಡಲಾಗಿದೆ.

ಸಂಸ್ಥೆ ಕಟ್ಟಲು ಪತಿ ಶ್ರೀಧರ್‌ ನೀಡಿದ ಪ್ರೋತ್ಸಾಹ, ಮಕ್ಕಳು, ಸೊಸೆಯರ ಬೆಂಬಲ ನೆನೆಯುತ್ತಾರೆ ಮಂಜುಳಾ.

ವಿಳಾಸ: ವೈಷ್ಣವಿ ಮೆಡಿಕೇರ್‌ ಟ್ರಸ್ಟ್‌, ನಂ 16, 13ನೇ ಮುಖ್ಯರಸ್ತೆ, ಮಲ್ಲೇಶ್ವರ. ಮಾಹಿತಿಗೆ– 98807 41419.

**

ಚೆನ್ನಾಗಿ ಓಡಾಡಿಕೊಂಡಿದ್ದೆ
12 ವರ್ಷದ ಹಿಂದೆ ಕಾಲಿನ ಆಪರೇಶನ್‌ ಆಗಿತ್ತು. ಓಡಾಡಿಕೊಂಡಿದ್ದೆ. ಆರು ತಿಂಗಳಿನ ಹಿಂದೆ ಕಾಲು ಸ್ವಾಧೀನವೇ ಇಲ್ಲದಂತಾಗಿದೆ. ಪಥ್ಯದ ಊಟ. ಕೆಲವೊಮ್ಮೆ ಮನೆಯಿಂದ ಊಟ ತಂದುಕೊಡುತ್ತಾರೆ. ಓಡಾಡಲಾರದ ಜೀವನ ಕಷ್ಟ ಎನಿಸುತ್ತದೆ.
-ಶಾಂತಮ್ಮ, 71  ವರ್ಷ.

ಇಲ್ಲಿರುವವರಲ್ಲಿ ನಾನೇ ಹೆಚ್ಚು ಓಡಾಡುವವಳು
ಮೂರು ತಿಂಗಳು ಹಿಂದೆ ಇಲ್ಲಿಗೆ ಬಂದೆ. ಕಾಲು ಒಡೆದು ಓಡಾಡಲು ಆಗುತ್ತಲೇ ಇರಲಿಲ್ಲ. ಈಗ ನಿಧಾನವಾಗಿ ಓಡಾಡುತ್ತೇನೆ. ಇಲ್ಲಿರುವ ಹೆಚ್ಚಿನವರು ಮಲಗಿದಲ್ಲೇ. ಹೀಗಾಗಿ ನಾನೇ ಸಾಧ್ಯವಾದಷ್ಟು ಓಡಾಡಿ ಎಲ್ಲರ ಬಳಿ ಮಾತಾಡಿಕೊಂಡು ಬರುತ್ತೇನೆ. ಇಲ್ಲಿ ಊಟ ತಿಂಡಿ ಎಲ್ಲವೂ ಚೆನ್ನಾಗಿದೆ.
-ಶಕುಂತಲಮ್ಮ, 81 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.