ADVERTISEMENT

ಹೊಸತುಗಳ ಲುಂಬಿನಿ

ರಮೇಶ ಕೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಮಯವದು. ಅಂಗಿ, ಪ್ಯಾಂಟ್‌ ಬಿಚ್ಚಿ, ಅಮ್ಮನ ಕೈಗೆ ಕೊಟ್ಟ ಆ ಬಾಲಕ, ಈಜುಡುಗೆ ಧರಿಸಿ ಓಡಿ ಹೋಗಿ ಈಜು ಕೊಳದೊಳಗೆ ನೆಗೆದ. ಭಾನುವಾರ ರಜೆಯ ದಿನವಾದ್ದರಿಂದ ಬಹಳಷ್ಟು ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಮತ್ತೊಂದೆಡೆ ಜಾಯಿಂಟ್ ವ್ಹೀಲ್‌ ರೀತಿಯ ‘ಸನ್‌ಮೂನ್‌’ ಆಡುತ್ತಿದ್ದ ಮಕ್ಕಳು ಓ...ಎಂದು ಕೂಗುತ್ತಾ ಹರ್ಷ ವ್ಯಕ್ತಪಡಿಸುತ್ತಿದ್ದರು.

ಹೆಬ್ಬಾಳ ಸಮೀಪದ ನಾಗವಾರ ಕೆರೆ ಬದಿಯಲ್ಲಿರುವ ಲುಂಬಿನಿ ಗಾರ್ಡನ್‌ನಲ್ಲೀಗ ಮಕ್ಕಳದ್ದೇ ಕಾರುಬಾರು. ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ಲುಂಬಿನಿ ಗಾರ್ಡನ್ಸ್‌ ಲಿಮಿಟೆಡ್‌ನವರು ಮನರಂಜನಾ ಉದ್ಯಾನದಲ್ಲಿ ಹೊಸದಾಗಿ ಹಲವು ಆಟಗಳನ್ನು ಪರಿಚಯಿಸಿದ್ದಾರೆ. ಎರಡು ವರ್ಷದ ಮಕ್ಕಳಿಂದ ದೊಡ್ಡವರೂ ಆಡಬಹುದಾದ ‘ಸನ್‌ಮೂನ್‌’ ಮತ್ತು ‘ಸ್ಮಾಲ್‌ ಬ್ರೇಕ್ ಡಾನ್ಸ್‌’, ‘ಸ್ಟಾರ್‌ ವಾರ್‌’ ಮತ್ತು ಚುಕುಬುಕು ಪುಟಾಣಿ ರೈಲು, ‘ಸ್ಮಾಲ್‌ ವಾಟರ್‌ ಬೋಟ್‌’ ಹೊಸದಾಗಿ ಸೇರ್ಪಡೆ ಮಾಡಿದ್ದಾರೆ.

ಮುಂಚೆ ಇದ್ದ ‘ಕ್ಯಾಟರ್‌ ಪಿಲ್ಲರ್‌’, ‘ವಾಟರ್‌ ವೀವ್‌ಪೂಲ್‌’, ‘ಕೊಲಂಬಸ್‌’, ‘ಡ್ಯಾಷಿಂಗ್‌ ಕಾರ್‌’ ಆಟಗಳೂ ಮಕ್ಕಳನ್ನು ಆಕರ್ಷಿಸುತ್ತಿವೆ. ದೋಣಿ ವಿಹಾರ ಮಾಡುವವರಿಗೆಂದು ಮೂರು ಬಗೆಯ ದೋಣಿ ವಿಹಾರಗಳಿವೆ. ಇಬ್ಬರು ಆಡುವ ‘ಪೆಡಲ್‌ ಬೋಟಿಂಗ್‌’, ಕಾಫಿ ಕುಡಿಯುತ್ತಾ ವಿಹರಿಸಲು ‘ಕಾಫಿ ಬೋಟಿಂಗ್‌’ ಹಾಗೂ ಬಹಳಷ್ಟು ಮಂದಿ ಕುಳಿತು ವಿಹರಿಸಲು ‘ಸಾಮಾನ್ಯ ಬೋಟಿಂಗ್‌’ ವ್ಯವಸ್ಥೆ ಇಲ್ಲಿದೆ.
2006ರಲ್ಲಿ ಆರಂಭವಾದ ಲುಂಬಿನಿ ಗಾರ್ಡನ್‌ನಲ್ಲಿ ಪ್ರತಿವರ್ಷ ಹೊಸ ಹೊಸ ಆಟಗಳನ್ನು ಪರಿಚಯಿಸಲಾಗುತ್ತಿದೆ. ಈ ವರ್ಷ ಕೆಲವು ಆಟಗಳನ್ನು ಪರಿಚಯಿಸಿದ್ದಾರೆ.

ಸುರಕ್ಷೆಗೆ ಹೆಚ್ಚು ಗಮನ
ಮಕ್ಕಳು ಹೆಚ್ಚು ತರಲೆ ಮಾಡುತ್ತಿರುತ್ತಾರೆ. ಬೋಟಿಂಗ್‌ ಸಮಯವಾಗಲಿ ಅಥವಾ ಇನ್ನಿತರೆ ಕ್ರೀಡೆಗಳನ್ನು ಆಡುವಾಗ ಆಗಲೀ ಕೆಲವೊಮ್ಮೆ  ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಅನೇಕ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲೈಫ್‌ ಜಾಕೆಟ್‌್ ಸೇರಿದಂತೆ ವಿವಿಧ ಆಟಗಳಿಗೆ ಸುರಕ್ಷಾ ಪರಿಕರಗಳಿವೆ. ಮಕ್ಕಳಿಗೆ 30ಕ್ಕೂ ಹೆಚ್ಚಿನ ನುರಿತ ತರಬೇತಿದಾರರು ನೆರವು ನೀಡಲಿದ್ದಾರೆ.

‘ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದು, ದಿನವೂ ಸರಾಸರಿ 500 ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಾದರೆ ಸಾವಿರದಿಂದ 1500ಮಂದಿ ಭೇಟಿ ನೀಡುತ್ತಾರೆ. ಬೆಂಗಳೂರಷ್ಟೇ ಅಲ್ಲದೇ ವಿವಿಧ ಜಿಲ್ಲೆಗಳಿಂದಲೂ ಪ್ರವಾಸಿಗರು ಬರುತ್ತಾರೆ. ಅಲ್ಲದೇ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಕ್ಕಳನ್ನೇ ಕೇಂದ್ರವಾಗಿಸಿಕೊಂಡು ಹೊಸ ಆಟಗಳನ್ನು ಪರಿಚಯಿಸಲಾಗಿದೆ. ಛಾಯಾಚಿತ್ರ ತೆಗೆಸಿಕೊಳ್ಳಲು ಅನುಕೂಲವಾಗುವಂತೆ ಚಿತ್ರಗಳನ್ನು ಬಿಡಿಸಲಾಗಿದೆ. ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಒಂದೊಂದು ಆಟಕ್ಕೂ ₹ 20ರಿಂದ ₹ 60ರವರೆಗೆ ಪ್ರವೇಶ ಶುಲ್ಕ ನಿಗದಿ ಮಾಡಿದ್ದೇವೆ’ಎನ್ನುತ್ತಾರೆ ಲುಂಬಿನಿ ಗಾರ್ಡನ್ಸ್‌ ಲಿಮಿಟೆಡ್‌ನ ಕಾರ್ಯನಿರ್ವಹಣಾಧಿಕಾರಿ ಎನ್‌.ವಿ. ಪ್ರಸಾದ್‌ ರಾಜು.

‘ಪ್ರವಾಸಿಗರನ್ನು ಆಕರ್ಷಿಸಲು ಮೇ ತಿಂಗಳಿಂದ ಇನ್ನಷ್ಟು ಆಟಗಳನ್ನು ಪರಿಚಯಿಸುತ್ತೇವೆ. ಮನರಂಜನೆ ನೀಡುವ ನಗರದ ಕೆಲವು ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿ ಹೆಚ್ಚಿನ ಪ್ರವೇಶ ಶುಲ್ಕ ನಿಗದಿ ಮಾಡಿರುತ್ತಾರೆ. ಆದರೆ ಇಲ್ಲಿ ಕಡಿಮೆ ಶುಲ್ಕದೊಂದಿಗೆ ಹೆಚ್ಚಿನ ಮನರಂಜನೆ ನೀಡುವ ಉದ್ದೇಶ ಹೊಂದಿದ್ದೇವೆ. ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ಉದ್ಯಾನ ತೆರೆದಿರುತ್ತದೆ’ ಎನ್ನುತ್ತಾರೆ ಲುಂಬಿನಿ ಗಾರ್ಡನ್ಸ್‌ ಲಿಮಿಟೆಡ್‌ನ ತಾಂತ್ರಿಕ ಮೇಲ್ವಿಚಾರಕ ಗೋಪಿ.

ಕೆರೆಯ ಬದಿಯಲ್ಲೇ ಉದ್ಯಾನ ಇರುವುದರಿಂದ ಮಕ್ಕಳಿಗೆ ಇಷ್ಟವಾಗುವ ತಾಣ ಇದಾಗಿದೆ. ಮಾಹಿತಿಗಾಗಿ 9343444646 ಸಂಪರ್ಕಿಸಬಹುದು.

ಆಹಾರಪ್ರಿಯರಿಗೆ ಫುಡ್‌ ಕೋರ್ಟ್
ಆಟವಾಡಿ ಸುಸ್ತಾದ ಮಕ್ಕಳಿಗೆ ಉದ್ಯಾನದ ಒಳಗಡೆಯೇ ಫುಡ್‌ ಕೋರ್ಟ್‌ ಸಹ ಇದೆ. ಚೈನೀಸ್‌, ಉತ್ತರ ಭಾರತೀಯ ತಿನಿಸು ಇಲ್ಲಿ ದೊರೆಯುತ್ತದೆ. ಕೈಗೆಟುಕುವ ದರದಲ್ಲಿ ಇಲ್ಲಿನ ಆಹಾರ ದರ ನಿಗದಿಪಡಿಸಿದ್ದಾರೆ.
*
ಮಕ್ಕಳು ಹೀಗೆನ್ನುತ್ತಾರೆ...

‘ಬೇಸಿಗೆ ರಜೆ ಕಳೆಯಲು ಬೀದರ್‌ನಿಂದ ಬಂದಿದ್ದೇವೆ. ಇಲ್ಲಿ ನಮ್ಮ ಚಿಕ್ಕಮ್ಮನ ಮನೆಯಿದೆ. ‘ಬೌನ್ಸಿ ರೈಡ್‌’, ‘ಪೆಡಲ್ ಬೋಟ್‌’ನಲ್ಲಿ ಆಟವಾಡಿದೆ. ಇಲ್ಲಿನ ಎಲ್ಲಾ ಆಟಗಳು ಚೆನ್ನಾಗಿವೆ’ ಎನ್ನುತ್ತಾರೆ 6ನೇ ತರಗತಿಯ ಮೀನಾಕ್ಷಿ.


‘ನಾವು ಆರ್‌.ಟಿ.ನಗರದಿಂದ ಬಂದಿದ್ದೇವೆ. ಅಮ್ಮ, ಅಜ್ಜಿ, ಅಕ್ಕನ ಜೊತೆಯಲ್ಲಿ ಉದ್ಯಾನ ನೋಡಿದೆ, ಪುಟಾಣಿ ರೈಲಿನಲ್ಲಿ ಕುಳಿತೆ,

ಮಕ್ಕಳೆಲ್ಲಾ ಇದ್ದರು ಪರಿಚಯ ಮಾಡಿಕೊಂಡೆ. ಸಣ್ಣ ದೋಣಿಯಲ್ಲಿ ಆಡಿದೆ. ಇಲ್ಲಿನ ಕೆಲವು ಆಟಗಳನ್ನಷ್ಟೇ ಆಡಲು ಸಾಧ್ಯವಾಯಿತು’ ಎನ್ನುತ್ತಾಳೆ ಶ್ರೀಜಾ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.