ADVERTISEMENT

‘ತಿಂಗಳ ಚಿತ್ರ’ದಲ್ಲಿ ಯುವ ಕಲಾವಿದರು

ಕಲಾ ಕಲಾಪ

​ಯೋಗಿತಾ ಬಿ.ಆರ್‌.
Published 3 ಮಾರ್ಚ್ 2015, 19:30 IST
Last Updated 3 ಮಾರ್ಚ್ 2015, 19:30 IST
ಶಾಮಸ್ಕಂದ ಅವರು ರಚಿಸಿರುವ ಕಲಾಕೃತಿ
ಶಾಮಸ್ಕಂದ ಅವರು ರಚಿಸಿರುವ ಕಲಾಕೃತಿ   

ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಪ್ರತಿ ತಿಂಗಳು ‘ತಿಂಗಳ ಚಿತ್ರ’ ಎಂಬ ಕಲಾಕೃತಿಗಳ ಪ್ರದರ್ಶನವನ್ನು ಆಯೋಜಿಸಿ ಅದರಲ್ಲಿ ಉತ್ತಮ ಕಲಾವಿದರನ್ನು ಗುರುತಿಸಿ ಅವಕಾಶ ನೀಡುತ್ತಾ ಬಂದಿದೆ.

ಈ ತಿಂಗಳ ಕಲಾಪ್ರದರ್ಶನಕ್ಕೆ  ರಾಯಚೂರಿನ ಮಲ್ಲಿಕಾರ್ಜುನ ಎಂ. ಆಲೂರು, ಬಾಗಲಕೋಟೆಯ ವೀರೇಶ್‌ ಎಂ. ರುದ್ರಸ್ವಾಮಿ ತುಮಕೂರಿನವರಾದ ಶಾಮಸ್ಕಂದ  ಹಾಗೂ ಬೆಂಗಳೂರಿನ ಕೆ.ಎಸ್‌. ಶ್ರೀನಿವಾಸ ಎಂಬ ನಾಲ್ವರು ಯುವ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮಾರ್ಚ್‌ 4ರವರೆಗೆ ವರ್ಣ ಗ್ಯಾಲರಿಯಲ್ಲಿ ನಡೆಯಲಿದೆ.

ಮನಸ್ಸಿನ ಏರಿಳಿತಗಳು
ಬಾಗಲಕೋಟೆಯ ವೀರೇಶ್ ಎಂ ರುದ್ರಸ್ವಾಮಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಬೆಂಗಳೂನ ಹಾದಿ ಹಿಡಿದವರು. ವೀರೇಶ್‌ ಅವರ ವಿಭಿನ್ನ ಕಲಾಕೃತಿಗಳಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

‘ನಗರಕ್ಕೆ ಬಂದು ಆರು ವರ್ಷಗಳು ಕಳೆದವು. ಈ ಅನುಭವವನ್ನು ದೃಶ್ಯ ಮಾಧ್ಯಮದ ಮುಖಾಂತರ ನನ್ನ ಕಲಾಕೃತಿಯಲ್ಲಿ ಅಭಿವ್ಯಕ್ತಪಡಿಸಿದ್ದೇನೆ. ‘ಮೈಂಡ್‌ ಆಫ್‌ ಫ್ಲೋ’ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಆ್ಯಕ್ರೆಲಿಕ್‌ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿದ್ದೇನೆ. ನಮ್ಮ ಮನಸ್ಸಿನ ಏರಿಳಿತಗಳು ಹಾಗೂ ಆತ್ಮಸ್ಥೈರ್ಯವನ್ನು ಆಧಾರವಾಗಿರಿಸಿಕೊಂಡು ಈ ಕಲಾಕೃತಿಗಳನ್ನು ರಚಿಸಿದ್ದೇನೆ’ ಎಂದು ವೀರೇಶ್‌ ವಿವರಿಸುತ್ತಾರೆ.

ಕಲಾಧಾರಿತ ಛಾಯಾಚಿತ್ರಗಳು
2014ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಕೆ.ಎಸ್‌.ಶ್ರೀನಿವಾಸ ಅವರ ಛಾಯಾಚಿತ್ರಗಳೂ ಈ ಪ್ರದರ್ಶನದ ಅಂಗವಾಗಿವೆ. ಈಗಾಗಲೇ ದೇಶದೆಲ್ಲೆಡೆ ಹಾಗೂ ಹಾಲೆಂಡ್, ಆಸ್ಟ್ರಿಯಾ ಮತ್ತು ಕೆನಡಾದಂತಹ ಹೊರ ರಾಷ್ಟ್ರಗಳಲ್ಲಿ ತಮ್ಮ  ಛಾಯಾಚಿತ್ರಗಳ ಪ್ರದರ್ಶನ ನೀಡಿರುವ ಶ್ರೀನಿವಾಸ್‌ ಅವರು ‘ತಿಂಗಳ ಚಿತ್ರ’ ಕಲಾ ಪ್ರದರ್ಶನದಲ್ಲಿ ಕಲಾಧಾರಿತ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಪಾಳು ಬಿದ್ದ ಮನೆಯ ಕಿಟಕಿ, ನೀರಿನ ಪ್ರತಿಬಿಂಬಗಳ ವಿಶೇಷ ಚಿತ್ರಣಗಳು, ಪ್ರಕೃತಿಯ ಮಡಿಲಲ್ಲಿ ಬಂಡೆಯ ಮೇಲಿರುವ ಪುಟ್ಟ ಗುಡಿಸಲು ಹೀಗೆ ಇವರ ಹಲವಾರು ಛಾಯಾಚಿತ್ರಗಳು ನೋಡುಗರನ್ನು ಆಕರ್ಷಿಸುತ್ತಿದೆ. 

‘ಪ್ರತಿ ತಿಂಗಳು ರಾಜ್ಯದ ನಾಲ್ವರು ಉತ್ತಮ ಕಲಾವಿದರನ್ನು ಗುರುತಿಸಿ  ಉಚಿತವಾಗಿ ಅವರ ಕಲಾಕೃತಿಗಳನ್ನು ಪ್ರದರ್ಶಿಸಲು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅವಕಾಶ ಕಲ್ಪಿಸಿಕೊಡುತ್ತಿದೆ. ನನ್ನ ಅವಧಿಯ ನಾಲ್ಕನೇ ‘ತಿಂಗಳ ಚಿತ್ರ’ ಕಲಾ ಪ್ರದರ್ಶನ ಇದು. ಯುವ ಕಲಾವಿದರು, ಗ್ರಾಮೀಣ ಪ್ರತಿಭೆಗಳು ಹಾಗೂ ಅವಕಾಶ ವಂಚಿತರಿಗೆ ಒಂದು ವೇದಿಕೆ ಕಲ್ಪಿಸಿಕೊಡುವುದು ಈ ಪ್ರದರ್ಶನದ ಮುಖ್ಯ ಉದ್ದೇಶ. ಇದೇ ಉದ್ದೇಶದಿಂದ ನೂತನ ಗ್ಯಾಲರಿಯನ್ನೂ ಸಹ ನಿರ್ಮಿಸಿದ್ದೇವೆ’
–ಡಾ. ಎಂ.ಎಸ್‌ ಮೂರ್ತಿ, ಅಧ್ಯಕ್ಷರು, ಲಲಿತ ಕಲಾ ಅಕಾಡೆಮಿ.

ನಗರ ಬದುಕಿನ ರೇಖಾ ಚಿತ್ರ
ರಾಯಚೂರಿನವರಾದ ಮಲ್ಲಿಕಾರ್ಜುನ ಎಂ ಆಲೂರು ಗುಲ್ಬರ್ಗಾದ ಎಂ.ಎಂ.ಕೆ ಕಾಲೇಜ್‌ ಆಫ್‌ ಆರ್ಟ್ಸ್‌ನಿಂದ ಪದವಿ ಪಡೆದುಕೊಂಡಿದ್ದಾರೆ. ಕೇರಳದ ಬೈನಾಲೆ, ಇಂಡಿಯಾ ಆರ್ಟ್‌ ಫೇರ್‌, ಅಖಿಲ ಭಾರತ ಚಿತ್ರಕಲಾ ಪ್ರದರ್ಶನ ಹಾಗೂ ಇನ್ನೂ ಅನೇಕ ಮಹತ್ತರ ವೇದಿಕೆಗಳಲ್ಲಿ ತಮ್ಮ ಕಲೆಗಳನ್ನು ಪ್ರದರ್ಶಿಸಿರುವ ಇವರು ಲಲಿತ ಕಲಾ ಅಕಾಡೆಮಿಯ ‘ತಿಂಗಳ ಚಿತ್ರ’ಕ್ಕೆ ಆಯ್ಕೆಯಾಗಿರುವ ಮತ್ತೊಬ್ಬ ಕಲಾವಿದ.

‘ನಮ್ಮೂರಿನಲ್ಲಿ ಹಾಯಾಗಿ ಹಾರಾಡಿಕೊಂಡಿದ್ದವನು ನಾನು. ಬೆಂಗಳೂರಿನ ಕಟ್ಟಿಹಾಕಿದಂತಹ ವಾತಾವರಣವೇ ನನ್ನ ಕಲಾಕೃತಿಗಳಿಗೆ ಸ್ಫೂರ್ತಿ. ನಗರದ ಏರುಪೇರು ಜೀವನ, ಉಸಿರುಗಟ್ಟಿಸುವ ವಾತಾವರಣಗಳ ಜತೆ ನನ್ನ ಅನುಭವಗಳನ್ನು ರೇಖಾ ಚಿತ್ರಗಳ ಮೂಲಕ ತೋರಿಸಿದ್ದೇನೆ’ ಎಂದು ತಮ್ಮ ಕಲಾಕೃತಿಗಳ ಬಗ್ಗೆ ಹೇಳಿಕೊಳ್ಳುತ್ತಾರೆ ಮಲ್ಲಿಕಾರ್ಜುನ.

ಸಮಕಾಲೀನ ಸ್ಪಂದನೆ

ADVERTISEMENT

23ವರ್ಷದ ಶಾಮಸ್ಕಂದ ತುಮಕೂರು ಮೂಲದವರು. ಚಿತ್ರಕಲೆಯಲ್ಲೇ ಸ್ನಾತಕೋತ್ತರ ಪದವಿ ಮಾಡುತ್ತಿರುವ ಯುವ ಕಲಾವಿದ ಶಾಮಸ್ಕಂದ ಅವರ ಕಲಾಕೃತಿಗಳ ಪ್ರದರ್ಶನಕ್ಕೂ ‘ತಿಂಗಳ ಚಿತ್ರ’ ವೇದಿಕೆಯಾಗಿದೆ.

ಮುಂಬೈ ದಾಳಿ, ಪ್ರಸ್ತುತ ರಾಜಕೀಯದ ಕುರಿತ ಕಲಾಕೃತಿ, ಕೃಷ್ಣನ ಬಿಂಬ ಹೀಗೆ ಸಾಂಸ್ಕೃತಿಕ ಹಾಗೂ ಅಮೂರ್ತ ಪರಿಕಲ್ಪನೆಯಲ್ಲಿ ಶಾಮಸ್ಕಂದ ಅವರ ಕಲಾಕೃತಿಗಳು ರೂಪುತಳೆದಿವೆ.

ಇಂದು ಕೊನೆಗೊಳ್ಳಲಿದೆ. ಸ್ಥಳ: ವರ್ಣ ಗ್ಯಾಲರಿ, 2ನೇ ಮಹಡಿ, ಕನ್ನಡ ಭವನ. ಸಮಯ: ಬೆಳಿಗ್ಗೆ 11-6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.