ADVERTISEMENT

16 ನಿಮಿಷದಲ್ಲಿ ಹೆಗ್ಗನಹಳ್ಳಿ ಟು ಮೋದಿ ಆಸ್ಪತ್ರೆ

ಶಾರ್ಟ್‌ ಕಟ್‌ -5

ಜಯಸಿಂಹ ಆರ್.
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST
16 ನಿಮಿಷದಲ್ಲಿ ಹೆಗ್ಗನಹಳ್ಳಿ ಟು ಮೋದಿ ಆಸ್ಪತ್ರೆ
16 ನಿಮಿಷದಲ್ಲಿ ಹೆಗ್ಗನಹಳ್ಳಿ ಟು ಮೋದಿ ಆಸ್ಪತ್ರೆ   

ವರ್ಷದ ಹಿಂದಿನ ಮಾತು. ದೀಪಾವಳಿ ಮುಗಿದು ಒಂದೆರಡು ದಿನಗಳಷ್ಟೇ ಆಗಿತ್ತು. ಅಕ್ಟೋಬರ್‌ನಲ್ಲಿ ಸೈಕ್ಲಿಂಗ್ ಹೊರಡಬೇಕಾಗಿದ್ದರಿಂದ ಹೊಸ ಸೈಕಲ್ ಕೊಂಡಿದ್ದೆವು. ಗಂಟೆಗಟ್ಟಲೆ ಸೈಕಲ್ ತುಳಿಯಬೇಕಾದರೆ ಸಿದ್ಧತೆ ಬೇಕಲ್ಲ. ದೀಪಾವಳಿಯಿಂದಲೇ ದಿನಕ್ಕೆರಡು ಗಂಟೆ ನಮ್ಮ ಪೆಡಲ್ ವ್ಯಾಯಾಮ ನಡೆಯುತ್ತಿತ್ತು.

ಅಂದೂ ಸಿದ್ಧತೆಗಾಗಿ ನಾನು ಮತ್ತು ನನ್ನ ಗೆಳೆಯ ಹೆಗ್ಗನಹಳ್ಳಿಯಿಂದ ತಾವರೆಕೆರೆಗೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದೆವು. ನಮ್ಮ ಮನೆಯ ಬೀದಿಯಲ್ಲೇ ಇದ್ದೆವು. ಇನ್ನು ಹತ್ತಾರು ಸೆಕೆಂಡ್ ಅಷ್ಟೆ. ಸೈಕಲ್ ನಿಲ್ಲಿಸಿ ಮನೆಯ ಹಜಾರದಲ್ಲಿ ಕೂರಲಿದ್ದೆವು. ಅಷ್ಟರಲ್ಲೇ ಬೀದಿಯ ಬದಿಯಲ್ಲಿದ್ದ ಮರದ ಬುಡದಿಂದ ಪಟಾಕಿಯೊಂದು ಸಿಡಿಯಿತು. ಅದರ ಶಬ್ದ ಕಿವಿಗೆ ಮುಟ್ಟುವ ಮುನ್ನ ಮೊಣಕಾಲಿಗೊಂದು ಕಲ್ಲು  ಬಡಿಯಿತು. ಅನಿರೀಕ್ಷಿತವಾಗಿ ಇದು ಘಟಿಸಿದ್ದರಿಂದ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಮೊಣಕಾಲು ಉಜ್ಜಿಕೊಂಡು ಮುಂದೆ ನೋಡಿದರೆ ನನ್ನಿಂದ ಒಂದು ಮಾರು ಮುಂದಿದ್ದ ಗೆಳೆಯ ಸೈಕಲನ್ನು ನೆಲಕ್ಕೆ ಬಿಟ್ಟು, ಕಣ್ಣಿಗೆ ಎರಡೂ ಕೈಗಳನ್ನು ಒತ್ತಿಕೊಂಡು ಕುಳಿತುಕೊಂಡಿದ್ದ. ಏನಾಗಿದೆ ಎಂದು ನೋಡೋಣವೆಂದರೂ ಆತ ಕಣ್ಣು ಬಿಡುತ್ತಲೇ ಇಲ್ಲ. ಕಣ್ಣಿನಿಂದ ಸೋರಿದ್ದ ನೀರು ಆತನ ಮುಖದ ಮೇಲೆಲ್ಲಾ ಹರಿದು, ಗಲ್ಲದಿಂದ ತೊಟ್ಟಿಕ್ಕುತ್ತಿತ್ತು.

ಆಗ ಸಂಜೆ 5ರ ಸಮಯ. ಹುಡುಕಿದರೂ ಇಡೀ ಹೆಗ್ಗನಹಳ್ಳಿಯಲ್ಲಿ ಒಂದು ಕ್ಲಿನಿಕ್ ಸಹ ತೆಗೆದಿರುವುದಿಲ್ಲ. ಸುತ್ತಮುತ್ತಲಿನಲ್ಲಿ ಒಂದೂ ಕಣ್ಣಿನ ಕ್ಲಿನಿಕ್ ಇಲ್ಲ. ಮನೆಯ ಬಳಿಯೇ ಆದ್ದರಿಂದ ನೆರೆಮನೆಯವರು ಹತ್ತಿ, ನೀರು ತಂದುಕೊಟ್ಟರು. ಆತ ಮುಖಕ್ಕೊಂದಿಷ್ಟು ನೀರು ಹಾಕಿಕೊಂಡು ಕಣ್ಣನ್ನು ತೋರಿಸಿದ. ಬಲಗಣ್ಣು ತೊಂಡೆಕಾಯಿಯಂತೆ ಊದಿಕೊಂಡಿತ್ತು. ಅಷ್ಟರಲ್ಲೇ ಪರಿಚಿತ ಆಟೊ ಡ್ರೈವರ್ ಒಬ್ಬರು ಬಂದರು. ಹತ್ತಿರ ಯಾವುದಾದರೂ ಕಣ್ಣಿನ ಆಸ್ಪತ್ರೆ ಇದೆಯೇ ಅಂತ ಕೇಳಿದೆ. ಅವರು ‘ಇಲ್ಲ್ಯಾವುದೂ ಇಲ್ಲ. ಮೋದಿ ಆಸ್ಪತ್ರೆಗೇ ಹೋಗೋಣ’ ಎಂದರು.

ಹೆಗ್ಗನಹಳ್ಳಿಯಿಂದ ಮೋದಿ ಆಸ್ಪತ್ರೆಗೆ ಹೋಗಲು ಕನಿಷ್ಠ ಅರ್ಧ ತಾಸಾದರೂ ಬೇಕಿತ್ತು. ನಮಗೆ ಎರಡು ಆಯ್ಕೆಗಳಿದ್ದವು. ಸುಂಕದಕಟ್ಟೆ, ಸುಮ್ಮನಹಳ್ಳಿ, ಹೌಸಿಂಗ್‌ಬೋರ್ಡ್, ಶಂಕರಮಠ ಮಾರ್ಗವಾಗಿ ಮೋದಿ ಆಸ್ಪತ್ರೆಗೆ ಹೋಗುವುದು ಮೊದಲ ಆಯ್ಕೆ. ಎರಡನೆಯದ್ದು, ಪೀಣ್ಯ 2ನೇ ಹಂತ, ಟಿವಿಎಸ್‍ ಕ್ರಾಸ್, ಕಂಠೀರವ ಸ್ಟುಡಿಯೊ, ಮಹಾಲಕ್ಷ್ಮೀ ಬಡಾವಣೆ, ನವರಂಗ್ ಮಾರ್ಗದ್ದು. ಆಟೊ ಹತ್ತಿ ಆಗಿತ್ತು. ಎರಡೂ ರಸ್ತೆಗಳಲ್ಲಿ ಕನಿಷ್ಠ ಆರರಿಂದ ಏಳು ಸಿಗ್ನಲ್‌ಗಳನ್ನು ದಾಟಬೇಕಿತ್ತು. ಆಸ್ಪತ್ರೆ ತಲುಪಿದರೆ ಸಾಕು ಎಂಬಂತಿತ್ತು
ನಮ್ಮ ಸ್ಥಿತಿ.

ಆದರೆ ಆ ಆಟೊ ಡ್ರೈವರ್ ಬೇರೊಂದು ದಾರಿಯಲ್ಲಿ ಕೇವಲ 16 ನಿಮಿಷದಲ್ಲಿ ನಮ್ಮನ್ನು ಮೋದಿ ಆಸ್ಪತ್ರೆಗೆ ಕರೆದೊಯ್ದಿದ್ದ. ಪಟಾಕಿ ಅವಘಡಗಳಿಗೆಂದೇ ವಿಶೇಷ ಡ್ಯೂಟಿಯಲ್ಲಿದ್ದ ಡಾಕ್ಟರ್ ಗೆಳೆಯನ ಕಣ್ಣನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಿದ್ದರು. ಆತನ ಕಣ್ಣಿಗೆ ಹೊಕ್ಕಿದ್ದ ಪಟಾಕಿಯ ಕಾಗದ ಮತ್ತು ಮಣ್ಣಿನ ಕಣವನ್ನು ಹೊರತೆಗೆದು ತೋರಿಸಿ ಹೆಚ್ಚೇನು ಆಪಾಯವಿಲ್ಲ ಎಂದರು.

ಹದಿನಾರು ನಿಮಷದಲ್ಲಿ ಹೆಗ್ಗನಹಳ್ಳಿಯಿಂದ ಮೋದಿ ಆಸ್ಪತ್ರೆಗೆ ಕರೆದುಕೊಂಡು ಬಂದ ಆಟೊ ಡ್ರೈವರ್‌ಗೆ ಕೃತಜ್ಞತೆ ಸಲ್ಲಿಸಿದೆವು. ಹೋಗುವಾಗ ಆ ದಾರಿಯೆಡೆಗೆ ಗಮನ ಕೊಟ್ಟಿಲ್ಲದಿದ್ದರೂ ವಾಪಸ್ ಬರುವಾಗ ಆತನಿಂದ ಮಾಹಿತಿ ಪಡೆದೆ.

ಹೆಗ್ಗನಹಳ್ಳಿಯಿಂದ ಹೊರಟ ಅವರು, ಹಾಲಿನ ಡೈರಿ ಬಸ್‌ಸ್ಟಾಪ್‌ಗೂ ಮುನ್ನ ಬಲ ತಿರುವು ಪಡೆದು ದೊಡ್ಡಣ್ಣ ಎಸ್ಟೇಟ್ ರಸ್ತೆಯಲ್ಲಿ ಸಾಗಿದರು. ಆ ರಸ್ತೆಯಲ್ಲಿ 13ನೇ ಅಡ್ಡರಸ್ತೆಯಲ್ಲಿ ಎಡಕ್ಕೆ ಹೊರಳಿ, ಮೊದಲ ತಿರುವಿನಲ್ಲೇ ಆಟೊವನ್ನು ಬಲಕ್ಕೆ ತಿರುಗಿಸಿ ಮುಂದೆ ಸಾಗಿದರು. ಆ ರಸ್ತೆಯ ಅಂಚಿನಲ್ಲಿದ್ದ  ರಾಜಕಾಲುವೆ ದಾಟಿದೊಡನೆ ಲಗ್ಗೆರೆಯಲ್ಲಿದ್ದೆವು. ಆ ರಸ್ತೆಯಲ್ಲೇ ನೇರವಾಗಿ ಸಾಗಿ 3ನೇ ತಿರುವಿನಲ್ಲಿ ಎಡಕ್ಕೆ ಹೊರಳಿ ಮತ್ತೆ 3ನೇ ತಿರುವಿನಲ್ಲಿ ಬಲಕ್ಕೆ ಆಟೊ ತಿರುಗಿಸಿದರು. ಈ ಅಡ್ಡರಸ್ತೆ ಮುಗಿಯವಲ್ಲಿ ಲಗ್ಗೆರೆ ಮುಖ್ಯರಸ್ತೆ ನಮ್ಮ ಮುಂದಿತ್ತು. ಅಲ್ಲಿಗೆ ತಲುಪಲು ಒಂಬತ್ತು ನಿಮಿಷವಷ್ಟೇ ಆಗಿತ್ತು.

ಲಗ್ಗೆರೆ ಮುಖ್ಯರಸ್ತೆಯಲ್ಲಿ ಎಡಕ್ಕೆ ಸಾಗಿ, ಅಲ್ಲಿಂದ 2ನೇ ತಿರುವಿನಲ್ಲಿ ಮತ್ತೆ ಬಲಕ್ಕೆ ಹೊರಳಿದರು. ಮತ್ತೂ ಮೊದಲ ತಿರುವಿನಲ್ಲೇ ಬಲಕ್ಕೆ ನೇರವಾಗಿ ಆಟೊ ಓಡಿಸಿದರು. ನಮ್ಮ ಮುಂದೆ ರಿಂಗ್ ರಸ್ತೆಯಿತ್ತು. ಸರ್ವಿಸ್ ರಸ್ತೆಯಲ್ಲಿ ಸಾಗಿ ಲಗ್ಗೆರೆ ಬ್ರಿಡ್ಜ್ ದಾಟಿ, ಅಲ್ಲಿಂದ ನೇರವಾಗಿ ಕುರುಬರಹಳ್ಳಿ ಪೈಪ್‌ಲೈನ್ ರಸ್ತೆಗೆ ಕೊಂಡೊಯ್ಯುವ ಕುರುಬರಹಳ್ಳಿ 17ನೇ ಮುಖ್ಯರಸ್ತೆಯಲ್ಲಿ ಸಾಗಿದರು. ಅದು ಭಾರಿ ತಗ್ಗಿನ ಮತ್ತು ಏರುದಾರಿಯ ರಸ್ತೆ. ಆ ಏರಿಯನ್ನು ಹತ್ತಲು ಆಟೊ ಕೊಸರಾಡಿದರೂ ಮುಂದಿನ  ಎರಡು ನಿಮಿಷದಲ್ಲಿ ಕುರುಬರಹಳ್ಳಿ ಬಸ್‍ ಸ್ಟಾಪ್ನಲ್ಲಿ ನಾವಿದ್ದ ಆಟೊ ಓಡುತ್ತಿತ್ತು.

ಅಲ್ಲಿಂದ ಕುರುಬರಹಳ್ಳಿ ಮುಖ್ಯರಸ್ತೆಯಲ್ಲಿ ಸಾಗಿ, ಶಂಕರಮಠ ಸಿಗ್ನಲ್‍ ದಾಟಿ ಮೋದಿ ಆಸ್ಪತ್ರೆಯ ಆವರಣದಲ್ಲಿ ನಮ್ಮ ಆಟೊ ನಿಂತಾಗ ಮತ್ತೆ 5 ನಿಮಿಷವಷ್ಟೇ ಕಳೆದಿತ್ತು. ಮನೆಯಿಂದ ಹೊರಟು ಒಟ್ಟು 16 ನಿಮಿಷಗಳಲ್ಲಿ ಗೆಳೆಯನಿಗೆ ಡಾಕ್ಟರ್ ಚಿಕಿತ್ಸೆ ನೀಡುತ್ತಿದ್ದರು.
ಇದೇ ಶಾರ್ಟ್‌ಕಟ್ ಬಳಸಿ ನವರಂಗ್, ರಾಜಾಜಿನಗರ ಮತ್ತು ಮಲ್ಲೇಶ್ವರ ತಲುಪಬಹುದು. ಆ ಘಟನೆ ನಡೆದ ನಂತರವಂತೂ ಮಲ್ಲೇಶ್ವರ, ರಾಜಾಜಿನಗರಕ್ಕೆ ಹೋಗಲು  ಬೈಕ್‌ನಲ್ಲಿ ಇದೇ ಶಾರ್ಟ್‌ಕಟ್ ಬಳಸಿ 10 –12 ನಿಮಿಷದಲ್ಲಿ ನವರಂಗ್ ತಲುಪುತ್ತೇನೆ. ಅದೂ ಕೇವಲ ಒಂದೇ ಸಿಗ್ನಲ್‌ ಹಾದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.