ADVERTISEMENT

ಕಲಿತ ಅಡುಗೆಯೇ ಬದುಕು ನೀಡಿತು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 19:30 IST
Last Updated 31 ಡಿಸೆಂಬರ್ 2017, 19:30 IST
ಕಲಿತ ಅಡುಗೆಯೇ ಬದುಕು ನೀಡಿತು
ಕಲಿತ ಅಡುಗೆಯೇ ಬದುಕು ನೀಡಿತು   

ಪ್ರತಿದಿನ ಮುಂಜಾನೆ ವಾಕಿಂಗ್ ಮುಗಿಸಿ ಮಾಮೂಲಿ ದಾರಿಯಲ್ಲಿ ಬರುವ ದಾರಿಯಲ್ಲಿ ಬರದೆ ಪಾರ್ಕಿನ ಮತ್ತೊಂದು ಬಾಗಿಲಿನಿಂದ ಬಂದೆ.

ಆಗ ಅಲ್ಲಿ ಮುಚ್ಚಿದ ತರಕಾರಿ ಅಂಗಡಿಯ ಪಕ್ಕದಲ್ಲಿ ಒಂದು ಮಡಚುವ ಟೇಬಲ್ ಇರಿಸಿಕೊಂಡು ಕುರ್ಚಿಯಲ್ಲಿ ಸುಮಾರು 45ರ ಆಸುಪಾಸಿನಲ್ಲಿದ್ದ ಮಹಿಳೆ ಕಂಡರು. ಟೇಬಲ್ಲಿನ ಮೇಲೆ ಸ್ಟೀಲಿನ ಕಂಟೈನರ್ ಮತ್ತು ಹಾಟ್ ಬಾಕ್ಸ್‌ಗಳಿದ್ದವು.

ಹತ್ತಿರ ಹೋಗಿ ವಿಚಾರಿಸಿದೆ. ಸುಮಾರು 6 ತಿಂಗಳಿನಿಂದ ಬೆಳಗಿನ ವೇಳೆ ಮನೆಯಿಂದ ತಿಂಡಿ ಮಾಡಿಕೊಂಡು ಬಂದು ಇಲ್ಲಿಟ್ಟುಕೊಳ್ಳುತ್ತೇನೆ ಹತ್ತಿರವೇ ಶಾಲೆ ಮತ್ತು ಆಟೊಸ್ಟ್ಯಾಂಡ್ ಇರುವುದರಿಂದ ತಂದಿದ್ದೆಲ್ಲ ಖರ್ಚಾಗುತ್ತದೆ ಎಂದರು.

ADVERTISEMENT

ಇಡ್ಲಿ, ದೋಸೆ, ಚಟ್ನಿ ಮತ್ತು ಚಿತ್ರಾನ್ನಗಳ ಮುಚ್ಚಳ ತೆಗೆದು ತೋರಿಸಿದರು. ಘಮಘಮಿಸುತ್ತಿದ್ದ ಉಪಹಾರಗಳು ಶುಚಿಯಾಗಿ ಬಿಸಿಯಾಗಿ ಹಬೆಯಾಡುತ್ತಿದ್ದವು. ಮನೆಯಲ್ಲಿಯೇ ಮಾಡಿಕೊಂಡು ಬಂದಿದ್ದ ತಿಂಡಿಗಳವು.

ನನ್ನ ಕುತೂಹಲದ ನೋಟ ಕಂಡ ಅವರು, ‘ನನ್ನ ಹೆಸರು ಲಕ್ಷ್ಮಿ’ ಎಂದು ಪರಿಚಯಿಸಿಕೊಂಡರು. ‘ಬೆಳಿಗ್ಗೆ ತಂದ ತಿಂಡಿ ಐಟಂಗಳು ಖಾಲಿಯಾದ ಮೇಲೆ ಮನೆಗೆ ಹೋಗಿ ಅನ್ನ, ಸಾಂಬಾರ್, ಮಜ್ಜಿಗೆ, ಬೋಂಡಾ ಅಥವಾ ಹಪ್ಪಳ ತಯಾರಿಸಿಕೊಂಡು ಮತ್ತೆ ಇಲ್ಲಿಗೆ ಬರುತ್ತೇನೆ ಎನ್ನುತ್ತಾ ಗಿರಾಕಿಗಳಿಗೆ ತಿಂಡಿಕೊಡುತ್ತಿದ್ದರು.

ಮತ್ತೊಂದು ಮಧ್ಯಾಹ್ನ ಹೋದಾಗ ಊಟದ ಪಾತ್ರೆಗಳೆಲ್ಲ ಖಾಲಿಯಾಗಿ ಆಟೋದಲ್ಲಿ ಜೋಡಿಸುತ್ತಿದ್ದರು. ನನ್ನನ್ನು ನೋಡಿ ಪರಿಚಯದ ನಗೆ ಬೀರಿದವರೆ ಆಟೋವನ್ನು ಮನೆಕಡೆ ಕಳುಹಿಸಿ ನನ್ನೊಡನೆ ಮಾತಿಗೆ ನಿಂತರು.

‘ನೀವು ಎಲ್ಲಿಯವರು’ ಎಂದೆ. ಅವರು ಉತ್ಸಾಹದಿಂದ ತಮ್ಮ ಬದುಕಿನ ಕಥೆ ಬಿಚ್ಚಿಟ್ಟರು...

‘ನಮ್ಮದು ಸಕಲೇಶಪುರ ಬಳಿಯ ಹಳ್ಳಿ. ಅಲ್ಲಿಯೇ ಹುಟ್ಟಿ ಬೆಳೆದು ಮದುವೆ ಆಗಿ ಒಂದು ಹೆಣ್ಣು ಮಗುವೂ ಆಯಿತು. ಗಂಡ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅಲ್ಲೇ ಇದ್ದ ಡಾಕ್ಟರ್ ಶಾಪಿನಲ್ಲಿ ಸಹಾಯಕಳಾಗಿ ಕೆಲಸ ಮಾಡುತ್ತಿದ್ದೆ. ಮಗಳ ಹೈಸ್ಕೂಲ್ ಮುಗಿದಾಗ ಕಾಲೇಜಿಗಾಗಿ ಬೇರೆ ಊರಿಗೆ ಹೋಗಬೇಕಾಗಿತ್ತು. ಊರು ಬಿಟ್ಟು ಬೆಂಗಳೂರಿಗೆ ಬಂದಾಗ ಕೂಡಿಟ್ಟಿದ್ದ ಹಣದಲ್ಲಿ ಸಣ್ಣ ಬಾಡಿಗೆ ಮನೆಯೊಂದನ್ನು ಮಾಡಿ ಮಗಳನ್ನು ಕಾಲೇಜಿಗೆ ಸೇರಿಸಿದೆ. ಕೈಲಿದ್ದ ದುಡ್ಡು ಮುಗಿದು ಮತ್ತೇನು ಎನ್ನುವ ಪ್ರಶ್ನೆ ಎದುರಾಗಿತ್ತು. ತಿಂಡಿ ಮಾತ್ರ ತಯಾರಿಸಿ ವ್ಯಾಪಾರಕ್ಕೆ ತೊಡಗಿದಾಗ ಸ್ವಲ್ಪ ಧೈರ್ಯ ಬಂತು. ಆದರೆ ಮೈ ಮುರಿಯುವ ಕೆಲಸ. ಯಜಮಾನರೂ ಹೊಸ ಜಾಗ ಎಂದು ಎಲ್ಲೂ ಕೆಲಸಕ್ಕೆ ಸೇರದೆ ಅಡಿಗೆ ಕೆಲಸದಲ್ಲಿ ನನಗೆ ಸಹಾಯ ಮಾಡುತ್ತಾರೆ.

ಕುಡಿಯಲು ಫಿಲ್ಟರ್ ನೀರನ್ನು ಮನೆಯಿಂದಲೇ ತರುತ್ತೇನೆ. ಈಗ ನೆಮ್ಮದಿಯ ದಿನಗಳು ಬಂದಿವೆ. ಮಗಳೂ ಚೆನ್ನಾಗಿ ಓದುತ್ತಿದ್ದಾಳೆ. ದೊಡ್ಡ ಮನೆಯೊಂದನ್ನು ಬಾಡಿಗೆಗೆ ಪಡೆದು ಹತ್ತು ಹೆಣ್ಣುಮಕ್ಕಳಿಗೆ ಪಿ.ಜಿ. ಮಾಡುವ ಯೋಚನೆ ಇದೆ. ಆ ಅನ್ನಪೂರ್ಣೇಶ್ವರಿ ದೇವಿ ನಮ್ಮನ್ನು ಕೈಬಿಡಲಿಲ್ಲ’ ಎಂದು ಕೈ ಮುಗಿದರು.

ಊರು ಬಿಟ್ಟು ಬಂದು, ಹೊಸ ಊರಿನಲ್ಲಿ ಧೃತಿಗೆಡದೆ ಬದುಕನ್ನು ಆತ್ಮವಿಶ್ವಾಸದಿಂದ ಮುನ್ನಡೆಸುತ್ತಿರುವ ಲಕ್ಷ್ಮಿ ಅವರ ಬಗ್ಗೆ ಅಭಿಮಾನವೆನಿಸಿತು.

–– ಎಸ್. ವಿಜಯಗುರುರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.