ADVERTISEMENT

ಸಂಸ್ಕೃತಿ ಮಹೋತ್ಸವ

ಅಭಿಲಾಷ ಬಿ.ಸಿ.
Published 17 ಜನವರಿ 2018, 19:30 IST
Last Updated 17 ಜನವರಿ 2018, 19:30 IST
ಕೊರಟಕೆರೆ ತಾಲ್ಲೂಕು ಲಿಂಗವೀರನಹಳ್ಳಿಯ ವೀರಭದ್ರ ಸ್ವಾಮಿ ತಂಡದ ಕಲಾವಿದರ ಗಾರುಡಿ ಗೊಂಬೆ ನೃತ್ಯ
ಕೊರಟಕೆರೆ ತಾಲ್ಲೂಕು ಲಿಂಗವೀರನಹಳ್ಳಿಯ ವೀರಭದ್ರ ಸ್ವಾಮಿ ತಂಡದ ಕಲಾವಿದರ ಗಾರುಡಿ ಗೊಂಬೆ ನೃತ್ಯ   

ಸಭಾಂಗಣದ ಹೊರಭಾಗದಲ್ಲಿ ಡೊಳ್ಳು, ಕಂಸಾಳೆ, ಕರಗ, ಭಾಂಗ್ರಾ, ಬೋಡೂ ಸೇರಿದಂತೆ ವಿವಿಧ ಜನಪದ ವಾದ್ಯಗಳ ಅಬ್ಬರ ಮೇಳೈಸಿದ್ದರೆ, ಸಭಾಂಗಣದ ಒಳಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮೊಳಗುತ್ತಿತ್ತು. ಹೊರಭಾಗದಲ್ಲಿ ಜನಪದ ವಾದ್ಯಗಳ ಲಯಕ್ಕೆ ತಕ್ಕಂತೆ ಕಲಾವಿದರೊಂದಿಗೆ ಕಲಾರಸಿಕರು ಹೆಜ್ಜೆಹಾಕುತ್ತಾ ಸಂಭ್ರಮಿಸುತ್ತಿದ್ದರೆ, ಸಭಾಂಗಣದ ಒಳಗಿನ ಸಂಗೀತದ ನಿನಾದಕ್ಕೆ ಸಂಗೀತ ಪ್ರಿಯರು ತಲೆದೂಗುತ್ತಿದ್ದರು.

ಹೀಗೆ ಜನಪದ ನೃತ್ಯ, ಹಾಗೂ ಶಾಸ್ತ್ರೀಯ ಸಂಗೀತಗಳ ಸಂಗಮಕ್ಕೆ ಸಾಕ್ಷಿಯಾಗಿದ್ದು ಕೇಂದ್ರ ಸಂಸ್ಕೃತಿ ಇಲಾಖೆ, ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ’. ದೇಶದ 21 ರಾಜ್ಯಗಳಿಂದ ಬಂದಿದ್ದ 26 ಕಲಾತಂಡಗಳು 26 ಭಿನ್ನ ಜನಪದ ನೃತ್ಯಗಳಿಗೆ ಇಲ್ಲಿ ಹೆಜ್ಜೆಹಾಕಿದವು.

ಎಂತಹ ಅರಸಿಕರೂ ಎದ್ದು ಎರಡು ಹೆಜ್ಜೆ ಹಾಕುವ ಉಮೇದನ್ನು ಹುಟ್ಟಿಸುವ ಶಕ್ತಿ ಜನಪದ ನೃತ್ಯದ್ದು. ಅದರಲ್ಲೂ ಎಲ್ಲರೂ ಕುಣಿಯುವಂತೆ ಪ್ರೇರೇಪಿಸುತ್ತಾ ನೃತ್ಯದಲ್ಲಿ ತಲ್ಲೀನರಾಗಿದ್ದ ಕಲಾವಿದರ ರಭಸದ ಕುಣಿತಗಳು ಸಭಾಂಗಣದ ತುಂಬೆಲ್ಲಾ ಹರ್ಷದ ಉದ್ಗಾರವನ್ನೇ ಹೊಮ್ಮಿಸಿತ್ತು.

ADVERTISEMENT

ಪಕ್ಷಿಗಳ ಸೌಂದರ್ಯ ಮತ್ತು ಕುರೂಪವನ್ನು ಜನಪದ ಕಲೆಗಳ ಮೂಲಕ ಹೇಳುವ ಅರುಣಾಚಲಪ್ರದೇಶದ ನೃತ್ಯ ಪ್ರಕಾರ ‘ಪಕು ಇಟು’, ‍ಸೊಂಪಾಗಿ ಬೆಳೆದಿರುವ ಫಸಲನ್ನು ಸಂಭ್ರಮಿಸುತ್ತ, ಭೂಮಿ ತಾಯಿಯನ್ನು ಸ್ಮರಿಸುವ ಪಂಜಾಬಿನ ‘ಭಾಂಗ್ರಾ’ ನೃತ್ಯ, ದಸರಾ ಸಂದರ್ಭದಲ್ಲಿ ದುರ್ಗಾದೇವಿಯನ್ನು ಆರಾಧಿಸುವ ‘ಚುಟ್ಕಿ ಚುವಾ’, ತಮಿಳುನಾಡಿನ ‘ಕರಗ’, ಆದಿವಾಸಿ ನೃತ್ಯ ಪ್ರಕಾರವಾದ ‘ಸಿದ್ದಿದಮಾಲ್’, ಒರಿಸ್ಸಾದ ಸಂಬಲ್‌ಪುರಿ, ಮಂಟೆಸ್ವಾಮಿ ಕತೆಯನ್ನು ನಿರೂಪಿಸುವ ಕರ್ನಾಟಕದ ಕಂಸಾಳೆ, ಮಿಜೊರಾಂನ ‘ಚೆರೊವ್’ ನೃತ್ಯ, ಛತ್ತೀಸ್‌ಘಡದ ‘ಕಸ್ಕರ್’ ನೃತ್ಯ... ಹೀಗೆ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ನೃತ್ಯಗಳ ಮುಖೇನ ಬಿಂಬಿಸುವಲ್ಲಿ ಈ ವೇದಿಕೆ ಯಶಸ್ವಿಯಾಯಿತು.

ಜನಪದ ನೃತ್ಯ, ಹಾಡು, ಕುಣಿತಗಳು ಮಾತ್ರವಲ್ಲದೆ, ವಿವಿಧ ರಾಜ್ಯಗಳ ಜನಪದ ಕಲಾಕೃತಿಗಳನ್ನು ಕಣ್ತುಂಬಿ ಕೊಳ್ಳುವ ಹಾಗೂ ಸಾಂ‍ಪ್ರದಾಯಿಕ ಆಹಾರವನ್ನು ಆಸ್ವಾದಿಸುವ ಅವಕಾಶವೂ ಅಲ್ಲಿತ್ತು. ಮರದಿಂದ ತಯಾರಿಸಿದ ಕರಕುಶಲ ವಸ್ತುಗಳು, ಉತ್ತರಖಂಡ ರಾಜ್ಯದ ಸಾಂಪ್ರದಾಯಿಕ ಗೃಹೋಪಯೋಗಿ ವಸ್ತುಗಳು, ಗುಜರಾತಿನ ಕರಕುಶಲ ಆಭರಣಗಳು, ಝಾರ್ಖಂಡ ರಾಜ್ಯದ ತರಹೇವಾರಿ ಸೀರೆಗಳು, ನಾಗಪುರದ ಸುಂದರ ವಿನ್ಯಾಸ ಹಾಗೂ ವಿವಿಧ ಬಗೆಯ ಮಣಿಗಳಿಂದ ತಯಾರಾದ ಆಭರಣಗಳು, ಬಿದಿರು ಹಾಗೂ ಮರದ ಮೇಲೆ ಚಿತ್ರಿಸಲಾದ ಚಿತ್ತಾಕರ್ಷಕ ಚಿತ್ತಾರಗಳು ಕಣ್ಮನಸೆಳೆಯುತ್ತಿದ್ದವು.

ಸಂಸ್ಕೃತಿ ಉತ್ಸವ ಕಣ್ಣು ಮತ್ತು ಕಿವಿಗಳಿಗೆ ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ತಿಳಿಸುವಲ್ಲಿ ಸೀಮಿತವಾಗಿರಲಿಲ್ಲ. ನಾಲಿಗೆಗೂ ವಿವಿಧ ರಾಜ್ಯಗಳ ಸಾಂಪ್ರದಾಯಿಕ ತಿನಿಸುಗಳ ರುಚಿ ಆಸ್ವಾದಿಸುವ, ಸಾಂಪ್ರದಾಯಿಕ ತಿನಿಸುಗಳ ಘಮ ಆಘ್ರಾಣಸುವ ಅವಕಾಶ ನೀಡಿತ್ತು.

ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್‌, ಉತ್ತರಖಂಡ ಹಾಗೂ ಬಿಹಾರ ರಾಜ್ಯಗಳ ಆಹಾರ ವೈವಿಧ್ಯದ ಅನಾವರಣ ಇಲ್ಲಿತ್ತು. ಬಿಹಾರದ ‘ಲಿಟ್ಟಿ’ ಸವಿಯಲು ನೆರೆದವರು ಹೆಚ್ಚು ಉತ್ಸಾಹ ತೋರಿಸುತ್ತಿದ್ದರು. ಗೋಧಿ ಹಿಟ್ಟು ಹಾಗೂ ಕಡಲೆಹಿಟ್ಟಿನ ಪುಡಿಗೆ ವಿವಿಧ ಮಸಾಲೆಗಳನ್ನು ಬೆರಸಿ ಕಟ್ಲೇಟ್‌ ಆಕಾರ ನೀಡಲಾಗುತ್ತಿತ್ತು. ನಂತರ ಅದನ್ನು ಕಲ್ಲಿದ್ದಿಲಿನ ಹಬೆಯಲ್ಲಿ ಬೇಯಿಸಿ ಬದನೆಕಾಯಿ ಗೊಜ್ಜಿನೊಂದಿಗೆ ಗ್ರಾಹಕರಿಗೆ ನೀಡಲಾಗುತ್ತಿತ್ತು.

‘ಗಯಾ ಅನಾರೆಸ್ಟ್‌’ ಬಿಹಾರದ ಮತ್ತೊಂದು ಸಾಂಪ್ರದಾಯಿಕ ಸಿಹಿ ತಿನಿಸು.

ಬುದ್ಧನ ಜ್ಞಾನೋದಯದ ಸಂಕೇತವಾಗಿ ಈ ತಿನಿಸಿಗೆ ಗಯಾ ಅನಾರೆಸ್ಟ್ ಎಂಬ ಹೆಸರು ಬಂದಿದೆ. ಅಕ್ಕಿಹಿಟ್ಟಿನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ಅದಕ್ಕೆ ಸಿಹಿ ಕೋವಾವನ್ನು ತುಂಬಲಾಗುತ್ತದೆ.

ಎಣ್ಣೆಯಲ್ಲಿ ಕರಿದು ನಂತರ ಬಿಳಿಎಳ್ಳಿನಲ್ಲಿ ಹೊರಳಿಸಿ ತವದ ಮೇಲೆ ಸ್ವಲ್ಪವೇ ಎಣ್ಣೆ ಹಾಕಿ, ತುಸು ಹುರಿದರೆ ಬಿಸಿಬಿಸಿ ಗಯಾ ಅನಾರೆಸ್ಟ್ ಸವಿಯಲು ಸಿದ್ಧ. ಎಳ್ಳು ಹಾಗೂ ತುಪ್ಪದ ಘಮ ಈ ತಿನಿಸಿಗೆ ವಿಶೇಷ ರುಚಿ ನೀಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.