ADVERTISEMENT

75ರ ಸಂಭ್ರಮಕ್ಕೆ ವೀಣೆಯ ಸುನಾದ

ಹೇಮಾವತಿ ಎಂ.ಆರ್.
Published 23 ಏಪ್ರಿಲ್ 2013, 19:59 IST
Last Updated 23 ಏಪ್ರಿಲ್ 2013, 19:59 IST
ಡಾ. ಸುಮಾ ಸುಧೀಂದ್ರ ಮತ್ತು ಅನುರಾಧಾ ಮಧುಸೂದನ್
ಡಾ. ಸುಮಾ ಸುಧೀಂದ್ರ ಮತ್ತು ಅನುರಾಧಾ ಮಧುಸೂದನ್   

ಆಳರಸರಿಂದ ಹಿಡಿದು ಸಾಮಾನ್ಯನವರೆಗೆ ವೀಣೆಗೆ ಮರುಳಾಗಿ ತಲೆದೂಗುವವರೇ ಎಲ್ಲ. ರಾಜಪೋಷಣೆ ಪಡೆದ ವೀಣೆ ರಾಜರು ಅಳಿದರೂ ತನ್ನ ಗಾಂಭೀರ್ಯ ಉಳಿಸಿಕೊಂಡಿದೆ. ಇಷ್ಟೇ ಅಲ್ಲ, ನಮ್ಮ ವೀಣಾ ವಾದಕರು ವೀಣೆಯಲ್ಲಿ ತಮ್ಮದೇ ಆದ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ.

ಈ ವಿಷಯದಲ್ಲಿ ಸಂಪ್ರದಾಯವನ್ನು ಮುರಿದದ್ದೂ ಇದೆ. ಅದು ಮತ್ತೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇಂತಹದೊಂದು ನವಪಲ್ಲಟಕ್ಕೆ ಚಾಮರಾಜಪೇಟೆ ಶ್ರೀರಾಮ ಸೇವಾ ಮಂಡಳಿ ಆಯೋಜಿಸಿರುವ ಶ್ರೀರಾಮನವಮಿ ಸಂಗೀತೋತ್ಸವ ಸಾಕ್ಷಿಯಾಗಲಿದೆ.

ಇಂದು (ಏ.24) ಸಂಜೆ 6.30ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ವೀಣಾ ವಿದುಷಿ ಡಾ. ಸುಮಾ ಸುಧೀಂದ್ರ ಮತ್ತು ಹೆಸರಾಂತ ವಿದುಷಿ ಅನುರಾಧಾ ಮಧುಸೂದನ್ ಅವರ ಸಾರಥ್ಯದಲ್ಲಿ ಒಂದೇ ವೇದಿಕೆಯಲ್ಲಿ 75 ಮಂದಿ ಪರಿಣತ ವೀಣಾ ವಾದಕರು ಒಟ್ಟಾಗಿ ಸುಮಾರು ಎರಡೂವರೆ ಗಂಟೆ ವೀಣಾವಾದನ ಮಾಡಲಿದ್ದಾರೆ.

ಈಗಾಗಲೇ ಇದರ 70 ನಿಮಿಷದ ವಿಡಿಯೋ ಚಿತ್ರೀಕರಣ ನಡೆಸಿದ್ದು, ಆ ಸೀಡಿ ಕೂಡ ಇದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇಂತಹದೊಂದು ದೇಶದಲ್ಲೇ ಮೊದಲ ಪ್ರಯತ್ನ. ವಿದ್ವಾನ್ ವೀಣೆ ರಾಜಾರಾಯರು ಮತ್ತು ವಿದ್ವಾನ್ ಚಿಟ್ಟಿಬಾಬು ಅವರಲ್ಲಿ ಶಿಷ್ಯತ್ವ ಮಾಡಿರುವ ಡಾ. ಸುಮಾ ಸುಧೀಂದ್ರ ಸುಮಾರು 35 ವರ್ಷಗಳಿಂದ ವೀಣೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ. ಈಗಲೂ ವರ್ಷದಲ್ಲಿ ಎರಡರಿಂದ ಮೂರು ಬಾರಿ ವಿದೇಶಗಳಲ್ಲಿ ಅವರ ಸಂಗೀತ ಸಂಚಾರಗಳು ಇರುತ್ತವೆ. ವೀಣೆ ಗಾತ್ರದಲ್ಲಿ ದೊಡ್ಡದಾದ, ಸೂಕ್ಷ್ಮವಾದ ವಾದ್ಯ. ಎಲ್ಲಿ ಬೇಕಾದರೂ ಕೊಂಡೊಯ್ಯ ಬಹುದಾದ ಸುಧಾರಿತ `ತರಂಗಿಣಿ' ವೀಣೆಯ ಆವಿಷ್ಕಾರ ಸುಮಾ ಅವರ ಬಹುದೊಡ್ಡ ಕೊಡುಗೆ.

ಈ ಬಾರಿ ಸುಮಾ ಅವರು ರಾಗಮಾಲಿಕಾ ಮತ್ತು ತಾಳಮಾಲಿಕಾದಲ್ಲಿ `ಪ್ರಿಯ ತರಂಗಿಣಿ' ಎಂಬ ಹೊಸ ಪ್ರಯೋಗವನ್ನು ಮಾಡಿದ್ದಾರೆ. ರಾಮನನ್ನು ಕುರಿತು ಎರಡು ಹಾಡುಗಳಿವೆ.

ಸಂಗೀತ ಮನೋಧರ್ಮ ಪ್ರಧಾನವಾದ ಕಲೆ. ಅದರಲ್ಲಿ ವೈಯಕ್ತಿಕ ಪ್ರತಿಭೆ ಮತ್ತು ಚಾತುರ್ಯ ಅತ್ಯಂತ ಅವಶ್ಯಕ. ಈ ಹಿನ್ನೆಲೆಯಲ್ಲಿ 75 ಕಲಾವಿದರನ್ನು ಮೇಳೈಸಿಕೊಂಡು ಇಂತಹದೊಂದು ಪ್ರಯೋಗ ಮಾಡಬೇಕಾದರೆ ಎದುರಾಗುವ ಸವಾಲುಗಳು ಅನೇಕ. ಇದರ ಬಗ್ಗೆ ವಿದುಷಿ ಸುಮಾ ಅವರು ಹೇಳಿದ್ದಿಷ್ಟು...

`ನಿಜಕ್ಕೂ ಇದು ಸವಾಲಿನ ಕೆಲಸವೇ. ಅದೂ ಬೇರೆ ಬೇರೆ ಜಾಯಮಾನದ, ವೃತ್ತಿಯಲ್ಲಿರುವ ಕಲಾವಿದರನ್ನು ಒಂದೇ ಕಡೆ ಅಭ್ಯಾಸಕ್ಕೆ ಸೇರಿಸುವುದು ಸಣ್ಣ ಮಾತೇನಲ್ಲ. ಆದರೆ ಎಲ್ಲರೂ ಸಮಯ ಹೊಂದಾಣಿಕೆ ಮಾಡಿಕೊಂಡು ತುಂಬ ಉತ್ಸಾಹದಿಂದ ಅಭ್ಯಾಸ ಮಾಡಿದ್ದಾರೆ. ಮೊದಲು ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡು ನಂತರ ಸಣ್ಣ ಸಣ್ಣ ತಂಡಗಳನ್ನಾಗಿ ಮಾಡಿಕೊಂಡು ಅಭ್ಯಾಸ ನಡೆಸಿದ್ದೇವೆ.

ಈ ಒಂದು ಕಚೇರಿಯ ಹಿಂದೆ ಹದಿನೈದು ಸೋಲೋ ಕಚೇರಿ ನಡೆಸಿದ ಶ್ರಮವಿದೆ. ಇದರ ಪರಿಣಾಮ ದೊಡ್ಡದು. ಯಾವಾಗಲೂ ಸ್ವತಂತ್ರವಾಗಿ ಕಚೇರಿ ನೀಡುತ್ತಿದ್ದ ಕಲಾವಿದರಿಗೂ ಇದೊಂದು ದೊಡ್ಡ ಸವಾಲಾಗಿದೆ. ವೀಣೆಯ ವಿಷಯಕ್ಕೆ ಬಂದಾಗ ಎಲ್ಲರಿಗೂ ವೇದಿಕೆ ಸಿಗುವುದಿಲ್ಲ. ಅನೇಕರಿಗೆ ಈ ಕಾರ್ಯಕ್ರಮ ಅಂತಹ ಕೊರತೆಯನ್ನು ನೀಗಿಸಿದೆ. ಈ ಕಾರ್ಯಕ್ರಮದಿಂದ ವೀಣೆ, ವೀಣಾವಾದನ ಮತ್ತು ವೃಂದವಾದನಕ್ಕೆ ಬೇರೆಯದೇ ಆಯಾಮ ಸಿಗಲಿದೆ'.

ಇಷ್ಟೊಂದು ಕಲಾವಿದರು ಒಟ್ಟು ಸೇರುವಲ್ಲಿ ಕಲಾವಿದರಿಗೆ ಸಹಜವೆನಿಸುವ `ಈಗೋ' (ಪ್ರತಿಷ್ಠೆ) ಅಡ್ಡ ಬರಲಿಲ್ಲವೇ ಎಂಬ ಪ್ರಶ್ನೆಗೆ ಸುಮಾ ನಕ್ಕರು. “ಇಲ್ಲಿ ತಮ್ಮ `ಈಗೋ' ಗಳ ಬಗ್ಗೆ ಯೋಚಿಸಲೂ ಕಲಾವಿದರಿಗೆ ಅವಕಾಶವಿಲ್ಲದಂತಾಗಿದೆ. ಅದೇ ವೀಣೆಯ ಶಕ್ತಿ” ಎಂದರು.

ಈ ಕಾರ್ಯಕ್ರಮ ರೂಪಿಸುವಲ್ಲಿ ಸುಮಾ ಸುಧೀಂದ್ರ ಅವರಿಗೆ ಬೆನ್ನೆಲುಬಾಗಿ ನಿಂತವರು ಮತ್ತೊಬ್ಬ ವೀಣಾ ವಿದುಷಿ ಅನುರಾಧಾ ಮಧುಸೂದನ್. `ಇದೊಂದು ವಿನೂತನ ಅನುಭವ. ಎಲ್ಲರೂ ವೇದಿಕೆ ಏರುವ ಕ್ಷಣಕ್ಕೆ ಕಾತುರರಾಗಿದ್ದಾರೆ. ಸುಮಾ ಅವರೊಂದಿಗೆ ಜವಾಬ್ದಾರಿ ಹಂಚಿಕೊಂಡದ್ದು ನನಗೂ ಹೆಮ್ಮೆ ಎನಿಸಿದೆ.

ಶ್ರೀ ರಾಮನವಮಿ ಸಂಗೀತೋತ್ಸವ ಹತ್ತಿರ ಬರುತ್ತಿದ್ದಂತೆ, `ಏನಾದರೊಂದು ಹೊಸ ಪ್ರಯೋಗ ಮಾಡು' ಎಂದು ಸಂಗೀತಪ್ರಿಯರಾದ ನನ್ನ ತಂದೆ-ತಾಯಿ ಹೇಳುತ್ತಲೇ ಇದ್ದರು. ಈಗ ಅವರ ಆಸೆ ಈಡೇರಿಸಿದ ಸಾರ್ಥಕ ಭಾವ ನನ್ನಲ್ಲಿದೆ' ಎಂಬ ನಮ್ರತಾ ಭಾವ ಅನುರಾಧಾ ಅವರದು.

ಚಾಮರಾಜಪೇಟೆಯಲ್ಲಿ ಶ್ರೀರಾಮ ಸೇವಾ ಮಂಡಳಿಯನ್ನು ಸ್ಥಾಪಿಸಿ, ಅದರ ಶ್ರೀರಾಮನವಮಿ ಸಂಗೀತೋತ್ಸವಕ್ಕೆ ರಾಷ್ಟ್ರೀಯ ಮೌಲ್ಯ ತಂದುಕೊಟ್ಟ ಎಸ್.ವಿ. ನಾರಾಯಣಸ್ವಾಮಿ ರಾವ್ ಅವರ ಸತತ ಪ್ರೋತ್ಸಾಹವೇ ಮಗಳಾದ ಅನುರಾಧಾ ಅವರ ಸಂಗೀತಾಸಕ್ತಿಯನ್ನು ರೂಪಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.