ADVERTISEMENT

ಅಂಗಳಕ್ಕೆ ಸಮುದ್ರದ ನೀರು ನುಗ್ಗಿದಾಗ ಮನೆಯಿಂದ ಹೊರಬರಲಾಗದೆ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಪೊಲೀಸ್ !

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 13:47 IST
Last Updated 2 ಡಿಸೆಂಬರ್ 2017, 13:47 IST
ಕೃಪೆ: ಫೇಸ್‍ಬುಕ್
ಕೃಪೆ: ಫೇಸ್‍ಬುಕ್   

ಕೊಚ್ಚಿ: ಒಖಿ ಚಂಡಮಾರುತದ ಪ್ರಭಾವದಿಂದ ದಿನವಿಡೀ ಸುರಿಯುತ್ತಿರುವ ಮಳೆ. ಮನೆಯಂಗಳಕ್ಕೆ ಸಮುದ್ರದ ನೀರು ನುಗ್ಗಿ ಹೊರಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ. ಕಾಲಿಗೆ ಗಾಯವಾಗಿ ಸ್ಟೀಲ್ ಹಾಕಿದ್ದರಿಂದ ನೀರಲ್ಲಿ ಕಾಲಿಡಲಾಗದೆ, ಹೊರಗಡೆ ಹೋಗಲಾರದೆ ಸಂಕಷ್ಟದಲ್ಲಿದ್ದ ಹಿರಿಯರೊಬ್ಬರನ್ನು ತನ್ನ ಬೆನ್ನ ಮೇಲೆ ಹೊತ್ತು ಮನೆಯಿಂದ ಹೊರಗೆ ತಂದು ರಕ್ಷಿಸಿದ್ದಾರೆ ಆಂಡ್ರೂಸ್ ಎಂಬ ಪೊಲೀಸ್.

ಎರ್ನಾಕುಳಂ ಚೆಲ್ಲಾನತ್ತ್ ಎಂಬಲ್ಲಿ ಸಮುದ್ರದ ನೀರು ಮನೆಯಂಗಳಕ್ಕೆ ನುಗ್ಗಿದಾಗ ಮನೆಯಿಂದ ಹೊರಬರಲು ಹೆದರಿ ನಿಂತಿದ್ದರು ಆ್ಯಂಟನಿ ಎಂಬ ವ್ಯಕ್ತಿ. ಅವರನ್ನು ಅಲ್ಲಿಂದ ಹೊರಗೆ ಕರೆದೊಯ್ಯಬೇಕು. ನನ್ನೊಂದಿಗೆ ಬನ್ನಿ ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು ಆಂಡ್ರೂಸ್ ಹೇಳಿದಾಗ ಆ ಹಿರಿಯ ವ್ಯಕ್ತಿ ಒಪ್ಪಲಿಲ್ಲ. ಭಯದಿಂದ ಹಿಂದೇಟು ಹಾಕುತ್ತಿದ್ದ ಅವರಿಗೆ, ನೀವು ಹೆದರಬೇಡಿ ನಾನೇ ನಿಮ್ಮನ್ನು ಹೆಗಲ ಮೇಲೆ ಹೊತ್ತು ಕೊಂಡು ಹೋಗುತ್ತೇನೆ ಎಂದು ಆ್ಯಂಟನಿ ಉಟ್ಟಿದ್ದ ಲುಂಗಿಯನ್ನು ಬಿಗಿಯಾಗಿ ಕಟ್ಟಿ ಆಂಡ್ರೂಸ್ ಎಂಬ ಪೊಲೀಸ್ ಹೆಗಲ ಮೇಲೆ ಹೊತ್ತು ನಡೆವ ವಿಡಿಯೊ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಶುಕ್ರವಾರ ರಾತ್ರಿ ಪಾಳಿಯಲ್ಲಿದ್ದರು ಆಂಡ್ರೂಸ್, ಚೆಲ್ಲಾನತ್ತ್ ಎಂಬಲ್ಲಿ ಕಡಲು ಅಬ್ಬರ ಜಾಸ್ತಿಯಾಗಿದೆ ಎಂಬುದನ್ನು ಅರಿತು ಶುಕ್ರವಾರ ಬೆಳ್ಳಂಬೆಳಗ್ಗೆಯೇ ಪೊಲೀಸರು ಈ ಗ್ರಾಮದಲ್ಲಿ ಠಿಕಾಣಿ ಹೂಡಿದ್ದರು. ಸಮುದ್ರದ ನೀರು ಗ್ರಾಮಕ್ಕೆ ನುಗ್ಗಿದ್ದರಿಂದ ಅಲ್ಲಿದ್ದ ಮಹಿಳೆಯರನ್ನು ಮತ್ತು ಮಕ್ಕಳನ್ನು ಮೊದಲು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಪರಿಸ್ಥಿತಿ ನಿಯಂತ್ರಣ ಮೀರುತ್ತದೆ ಎಂಬ ಸೂಚನೆ ಸಿಕ್ಕಿದ ಕೂಡಲೇ ಅಲ್ಲಿಂದ ಗಂಡಸರನ್ನೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯಗಳು ಭರದಿಂದ ನಡೆದವು. ಆ ವೇಳೆ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗದೆ ಹೆದರಿ ನಿಂತುಕೊಂಡಿದ್ದರು ಆ್ಯಂಟನಿ.
ಕಾಲಿಗೆ ಸ್ಟೀಲ್ ಹಾಕಿದ್ದ ಕಾರಣ ನೀರಿಗೆ ಇಳಿದು ನಡೆಯುವಂತಿಲ್ಲ. ಹೊರಗೆ ಕಾಲಿಡಲು ಭಯ. ಹಾಗಾಗಿಯೇ  ನಾನು ಅವರನ್ನು ಹೆಗಲ ಮೇಲೆ ಹೊತ್ತು ನಡೆದೆ ಅಂತಾರೆ ಆಂಡ್ರೂಸ್.  ಆಂಡ್ರೂಸ್ ಅವರ ಈ ರಕ್ಷಣಾ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.