ADVERTISEMENT

ಅಕಾಡೆಮಿ ಪ್ರಶಸ್ತಿ ಮರಳಿಸಿದ ಅಶೋಕ್‌ ವಾಜಪೇಯಿ

ವಿಚಾರವಾದಿಗಳ ಹತ್ಯೆ, ದಾದ್ರಿ ಘಟನೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:54 IST
Last Updated 7 ಅಕ್ಟೋಬರ್ 2015, 19:54 IST

ನವದೆಹಲಿ (ಪಿಟಿಐ): ದೇಶದಲ್ಲಿ ವಿಚಾರವಾದಿಗಳ ಹತ್ಯೆ ಹಾಗೂ ದಾದ್ರಿ ಘಟನೆಯನ್ನು ಖಂಡಿಸಿ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ, ಹಿಂದಿ ಕವಿ ಅಶೋಕ್‌ ವಾಜಪೇಯಿ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್‌ ಮಾಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿ ನೆಹರೂ ಅವರು ಸಹೋದರಿ ಪುತ್ರಿ ನಯನತಾರಾ ಸೆಹೆಗಲ್‌ ಮಂಗಳವಾರ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ್ದರು. ಈ ಎಲ್ಲ ಘಟನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ತಾಳಿರುವುದನ್ನು ವಾಜಪೇಯಿ ಅವರು ಪ್ರಶ್ನಿಸಿದ್ದಾರೆ.

‘ಸೆಹೆಗಲ್‌ ಸರಿಯಾಗಿಯೇ ಹೇಳಿದ್ದಾರೆ. ಪ್ರಧಾನಿ ಕೇವಲ ಬಡಾಯಿ ಕೊಚ್ಚುತ್ತಾರೆ. ಏನೇ ಆಗಲೀ ದೇಶದ ಬಹುಸಂಸ್ಕೃತಿಗೆ ಅಪಾಯ ಉಂಟಾಗಲು ಅವಕಾಶ ಮಾಡಿಕೊಡುವುದಿಲ್ಲ ಎಂದು  ಅವರು ಈ ದೇಶಕ್ಕೆ ಯಾಕೆ ಹೇಳುತ್ತಿಲ್ಲ’ ಎಂದು ವಾಜಪೇಯಿ ಪ್ರಶ್ನಿಸಿದ್ದಾರೆ. 74 ವರ್ಷ ವಾಜಪೇಯಿ ಅವರು ಹಿಂದಿ ಕವಿ, ಪ್ರಬಂಧಕಾರ. ವಿಮರ್ಶಕ ಕೂಡ ಹೌದು. 

‘ವಿವಿಧ ಧರ್ಮಗಳು ಹಾಗೂ ಬಹುಸಂಸ್ಕೃತಿಯ ದೇಶವನ್ನು ಕಡೆಗಣಿಸಲಾಗಿದೆ. ಬರಹಗಾರರು ಏನು ಮಾಡಲು ಸಾಧ್ಯ. ಆದರೆ ಪ್ರತಿಭಟಿಸಬಹುದು’ ಎಂದಿದ್ದಾರೆ. ಸಾಹಿತ್ಯ ಅಕಾಡೆಮಿಯು  ಬರಹಗಾರರ ಸ್ವಾಯತ್ತತೆಗೆ ಧಕ್ಕೆ ಬಂದಾಗ ಎದ್ದು ನಿಂತು ಪ್ರತಿಭಟಿಸುವಲ್ಲಿ ಸೋತಿದೆ ಎಂದೂ ಅವರು ಅಸಮಾಧಾನ ಹೊರಹಾಕಿದ್ದಾರೆ.

ಬೆಂಬಲ: ನಯನತಾರಾ ಸೆಹೆಗಲ್‌ ಹಾಗೂ ಅಶೋಕ್‌ ವಾಜಪೇಯಿ ಅವರ ನಡೆಯನ್ನು ವಿರೋಧಪಕ್ಷಗಳು ಬೆಂಬಲಿಸಿವೆ. ಇದು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ಧ ಎದ್ದ ಕೂಗು ಎಂದು ಕಾಂಗ್ರೆಸ್‌ ಮುಖಂಡರಾದ ಅಭಿಷೇಕ್‌ ಮನು ಸಂಘ್ವಿ, ಮನೀಷ್‌ ತಿವಾರಿ, ಸಿಪಿಐನ ಡಿ.ರಾಜಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.