ADVERTISEMENT

ಅಡ್ಡ ಮತದ ಸಾಧ್ಯತೆ ದಟ್ಟ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಅಡ್ಡ ಮತದ ಸಾಧ್ಯತೆ ದಟ್ಟ
ಅಡ್ಡ ಮತದ ಸಾಧ್ಯತೆ ದಟ್ಟ   

ಲಖನೌ: ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ಅಡ್ಡ ಮತದಾನದ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯಸಭೆ ಚುನಾವಣೆಯ ಕಾರ್ಯತಂತ್ರ ಚರ್ಚಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಬುಧವಾರ ಸಭೆ ಕರೆದಿದ್ದರು. ಈ ಸಭೆಗೆ ಏಳು  ಶಾಸಕರು ಬಂದಿರಲಿಲ್ಲ.

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಎಸ್‌ಪಿ 47 ಶಾಸಕರನ್ನು ಹೊಂದಿದೆ. 40 ಶಾಸಕರು ಮಾತ್ರ ಸಭೆಯಲ್ಲಿ ಹಾಜರಿದ್ದರು. ಅಖಿಲೇಶ್‌ ಚಿಕ್ಕಪ್ಪ ಶಿವಪಾಲ್‌ ಸಿಂಗ್‌ ಯಾದವ್‌, ಮಾಜಿ ಸಚಿವ ಅಜಂ ಖಾನ್‌, ಅವರ ಮಗ ಅಜಂ ಅಬ್ದುಲ್ಲಾ ಮತ್ತು ಎಸ್‌ಪಿಯಿಂದ ಇತ್ತೀಚೆಗೆ ಬಿಜೆಪಿ ಸೇರಿದ ನರೇಶ್‌ ಅಗರ್‌ವಾಲ್‌ ಮಗ ನಿತಿನ್‌ ಅಗರ್‌ವಾಲ್‌ ಗೈರಾದವರಲ್ಲಿ ಪ್ರಮುಖರು.

‘ಮಗ ನಿತಿನ್‌ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಲಿದ್ದಾನೆ’ ಎಂದು ನರೇಶ್‌ ಈಗಾಗಲೇ ಘೋಷಿಸಿದ್ದಾರೆ. ಶಿವಪಾಲ್‌ ಅವರು ಎಸ್‌ಪಿ ಶಾಸಕರ ಮೇಲೆ ಪ್ರಭಾವ ಹೊಂದಿದ್ದಾರೆ. ಹಾಗಾಗಿ ಅವರು ಸಭೆಯಿಂದ ದೂರ ಉಳಿದದ್ದು ಎಸ್‌ಪಿ ಮುಖಂಡರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ನಿತಿನ್‌ ಅವರೊಬ್ಬರನ್ನು ಬಿಟ್ಟರೆ ಎಸ್‌ಪಿಯ ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದಾರೆ. ಪಕ್ಷದ ಸೂಚನೆಯ ಪ್ರಕಾರವೇ ಇವರೆಲ್ಲರೂ ಮತ ಹಾಕಲಿದ್ದಾರೆ ಎಂದು ಪಕ್ಷದ ಮುಖಂಡ ರಾಜೇಂದ್ರ ಚೌಧರಿ ಹೇಳಿದ್ದಾರೆ. ಕಾಂಗ್ರೆಸ್‌ ಏಳು ಶಾಸಕರನ್ನು ಹೊಂದಿದೆ. ಇವರಲ್ಲಿ ಕನಿಷ್ಠ ಮೂವರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಉತ್ತರ ಪ್ರದೇಶ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಮತಗಣಿತ

ಉತ್ತರ ಪ್ರದೇಶದಿಂದ ರಾಜ್ಯಸಭೆಯ ಹತ್ತು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರತಿ ಅಭ್ಯರ್ಥಿಯ ಗೆಲುವಿಗೆ ಪ್ರಥಮ ಪ್ರಾಶಸ್ತ್ಯದ 37 ಮತಗಳು ಬೇಕು.

311 ಶಾಸಕರನ್ನು ಹೊಂದಿರುವ ಬಿಜೆಪಿ ಎಂಟು ಸ್ಥಾನಗಳನ್ನು ಗೆಲ್ಲುವುದು ಖಚಿತ. ಒಂದು ಸ್ಥಾನವನ್ನು ಎಸ್‌ಪಿ ಗೆಲ್ಲಲಿದೆ. ಉಳಿದ ಒಂದು ಸ್ಥಾನಕ್ಕೆ ಉದ್ಯಮಿ ಅನಿಲ್‌ ಅಗರ್‌ವಾಲ್‌ ಅವರನ್ನು ಬಿಜೆಪಿ ಬೆಂಬಲಿಸಲಿದೆ. ಇದೇ ಸ್ಥಾನಕ್ಕೆ ಬಿಎಸ್‌ಪಿಯೂ ಸ್ಪರ್ಧಿಸಲಿದೆ.

ತನ್ನಲ್ಲಿ ಉಳಿದ ಮತಗಳನ್ನು ಬಿಎಸ್‌ಪಿ ಅಭ್ಯರ್ಥಿಗೆ ನೀಡುವುದಾಗಿ ಎಸ್‌ಪಿ ಹೇಳಿದೆ. ಬಿಎಸ್‌ಪಿ ಶಾಸಕರ ಸಂಖ್ಯೆ 19 ಮಾತ್ರ. ಹಾಗಾಗಿ ಕಾಂಗ್ರೆಸ್‌ನ ಏಳು ಮತ್ತು ಅಜಿತ್‌ ಸಿಂಗ್‌ ಅವರ ಪಕ್ಷದ ಒಬ್ಬ ಶಾಸಕನ ಮತವನ್ನು ಬಿಎಸ್‌ಪಿ ನೆಚ್ಚಿಕೊಂಡಿದೆ. ಎಂಟು ಅಭ್ಯರ್ಥಿಗಳ ಗೆಲುವಿನ ಬಳಿಕ 28 ಹೆಚ್ಚುವರಿ ಮತಗಳನ್ನು ಬಿಜೆಪಿ ಮತ್ತು ಮಿತ್ರಪಕ್ಷಗಳು ಹೊಂದಿವೆ. ಹಾಗಾಗಿ ಅನಿಲ್‌ ಅವರಿಗೆ ಗೆಲ್ಲಲು ಒಂಬತ್ತು ಮತಗಳಷ್ಟೇ ಬೇಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.