ADVERTISEMENT

ಅಡ್ವಾಣಿ ಕೊಠಡಿ ನಾಮಫಲಕ ನಾಪತ್ತೆ!

​ಪ್ರಜಾವಾಣಿ ವಾರ್ತೆ
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ಗುರುವಾರ ಸಂಸತ್‌ಭವನಕ್ಕೆ ಬಂದಾಗ ಅಚ್ಚರಿ ಹಾಗೂ ಆಘಾತ ಕಾದಿತ್ತು. ಎನ್‌ಡಿಎ ಸಚಿವರ ಕಚೇರಿಯ ಹೊರಗೆ ನಾಮಫಲಕಗಳು ಹೊಳೆಯುತ್ತಿದ್ದರೆ, ಅಡ್ವಾಣಿ ಅವರ ಕೊಠಡಿಯ ಹೊರಗೆ ಮಾತ್ರ  ನಾಮಫಲಕ ಇರಲಿಲ್ಲ. ಇದನ್ನು ನೋಡಿ ಅವರು ವಿಚಲಿತರಾದಂತೆ ಕಂಡುಬಂತು.

ಎನ್‌ಡಿಎ ಕಾರ್ಯಾಧ್ಯಕ್ಷ ಅಡ್ವಾಣಿ ಅವರಿಗೆ ಯುಪಿಎ ಎರಡನೇ ಅವಧಿ ಆರಂಭವಾದಾಗಿನಿಂದ ಸಂಸತ್‌ಭವನದಲ್ಲಿ ಮೀಸಲಾಗಿದ್ದ ಈ ಕೊಠಡಿಯ ಮುಂಭಾಗದಲ್ಲಿದ್ದ ನಾಮಫಲಕ ಯಾವ ಸುಳಿವೂ ಇಲ್ಲದೆ ನಾಪತ್ತೆಯಾಗಿತ್ತು.

ವಿರಾಮದ ನಂತರ, ಸಂಸತ್‌ ಭವನದ ನೆಲ ಮಹಡಿಯಿಂದ ತಮ್ಮ ಕೊಠಡಿಗೆ ವಾಪಸಾದಾಗ ಅಡ್ವಾಣಿ ಅವರಿಗೆ ಈ ಆಘಾತ ಕಾದಿತ್ತು. ಅಲ್ಲಿದ್ದ ನಾಮಫಲಕ ಕಾಣದಿದ್ದರಿಂದ ಅನಿವಾರ್ಯ­ವಾಗಿ ಅವರು ಬಿಜೆಪಿ ಸಂಸದೀಯ ಪಕ್ಷದ  ಕಚೇರಿಗೆ ಹೊಂದಿ­ಕೊಂಡಿರುವ ಕೊಠಡಿಯಲ್ಲಿ ಕೂರಬೇಕಾ­ಯಿತು. ನಾಮಫಲಕದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳ ಸುರಿಮಳೆಗೆ ಅಡ್ವಾಣಿ ಪ್ರತಿ­ಕ್ರಿಯೆ ನೀಡಲಿಲ್ಲ. 

ಪ್ರಧಾನಿ ಮೋದಿ ಜತೆ ಅಷ್ಟೇನೂ ಉತ್ತಮ ಸಂಬಂಧ ಹೊಂದಿರದ ಅಡ್ವಾಣಿ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದೂ ಹೇಳಲಾ­ಗುತ್ತಿದೆ. ಆದರೆ ಬಿಜೆಪಿ ನಾಯಕರು, ಅಡ್ವಾಣಿ ಅವರನ್ನು ಅವಮಾನಿ­ಸಲೆಂದೇ ಹೀಗೆ ಮಾಡಲಾಗಿದೆ ಎಂಬುದನ್ನು ಒಪ್ಪಿಲ್ಲ. ‘ಎನ್‌ಡಿಎ ಈಗ ಆಡಳಿತ ಪಕ್ಷವಾಗಿರುವುದರಿಂದ ಅವರಿಗೆ ಬೇರೆ ಕೊಠಡಿ­ಯನ್ನು ನೀಡಬಹುದೇನೋ. ಹೀಗಾಗಿ ಈ ಗೊಂದಲವಾಗಿ­ರಬಹುದು’ ಎಂದಿದ್ದಾರೆ.

ಮೋದಿ ಪಕ್ಕದಿಂದ ದೂರ ಸರಿದರು
ನವದೆಹಲಿ (ಪಿಟಿಐ): 16ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಗುರುವಾರ ಬಿಜೆಪಿಯ ಹಿರಿಯ ಮುಖಂಡ ಎಲ್‌. ಕೆ  ಅಡ್ವಾಣಿ  ಅವರು ಪ್ರಧಾನಿ ನರೇಂದ್ರ ಮೋದಿ­ಯವರ ಪಕ್ಕದಲ್ಲಿ ಕುಳಿತು­ಕೊಳ್ಳದೇ ಕೇಂದ್ರದ ಹಿರಿಯ ಸಚಿವ­ರಾದ ಸುಷ್ಮಾ ಸ್ವರಾಜ್‌, ರಾಜ್‌ನಾಥ್‌ ಸಿಂಗ್‌ ಹಾಗೂ ರಾಮ್‌ ವಿಲಾಸ್‌ ಪಾಸ್ವಾನ್‌ ಅವರೊಂದಿಗೆ ಕುಳಿತುಕೊಂಡರು. ಅಧಿವೇಶನದ ಮೊದಲನೇ ದಿನ ಮೋದಿ ಅವರ ಪಕ್ಕದಲ್ಲೇ ಅಡ್ವಾಣಿ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.