ADVERTISEMENT

ಅಡ್ವಾಣಿ ಪದತ್ಯಾಗ

ಮನವೊಲಿಕೆಗೆ ರಾಜನಾಥ್ ಯತ್ನ, ಎನ್‌ಡಿಎ ಭವಿಷ್ಯ ಅತಂತ್ರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

  ಆತ್ಮೀಯ ಶ್ರೀ ರಾಜನಾಥ್ ಸಿಂಗ್‌ಜೀ,

ನನ್ನ ಜೀವಮಾನಪೂರ್ತಿ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಕೆಲಸ ಮಾಡಿದ್ದೇನೆ. ಇದು ನನ್ನ ಪಾಲಿಗೆ  ಅತ್ಯಂತ ಹೆಮ್ಮೆ ಮತ್ತು ಸಂತೋಷದಾಯಕವಾದ ವಿಷಯ.

ಕಳೆದ ಕೆಲವು ದಿನಗಳಿಂದ ಪಕ್ಷದೊಳಗೆ ನಡೆಯುತ್ತಿರುವ ಕೆಲ ಅಹಿತಕರ ವಿದ್ಯಮಾನಗಳನ್ನು ಅರಗಿಸಿಕೊಳ್ಳಲು ನನಗೆ ಕಷ್ಟವಾಗುತ್ತದೆ. ಪಕ್ಷ ಹೊರಟಿರುವ ದಿಕ್ಕು ಮತ್ತು ಅದರ ಕಾರ್ಯವೈಖರಿಯನ್ನು ಸಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಶ್ಯಾಂಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ನಾನಾಜಿ ದೇಶಮುಖ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಕಟ್ಟಿ ಬೆಳೆಸಿದ ಪಕ್ಷವೇ ಇದು ಎಂಬ ಸಂಶಯವೂ ಮೂಡುತ್ತಿದೆ. ಅವರಿಗೆ ದೇಶ ಮತ್ತು ದೇಶಬಾಂಧವರ ಕಾಳಜಿಯೇ ಮುಖ್ಯವಾಗಿತ್ತು. ಆದರೆ, ಇಂದು ನಮ್ಮ ಪಕ್ಷದ ಬಹುತೇಕ ನಾಯಕರಿಗೆ ತಮ್ಮ ವೈಯಕ್ತಿಕ ಕಾರ್ಯಸೂಚಿಗಳೇ ಮುಖ್ಯವಾಗಿವೆ. 

ಹೀಗಾಗಿ ನಾನು ಪಕ್ಷದ ಮೂರು ಪ್ರಮುಖ ವೇದಿಕೆಗಳಾದ ರಾಷ್ಟ್ರೀಯ ಕಾರ್ಯಕಾರಿಣಿ, ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ.  ಈ ಪತ್ರವನ್ನು ನನ್ನ ರಾಜೀನಾಮೆ  ಎಂದು ಪರಿಗಣಿಸಲು ಮನವಿ.

ನಿಮ್ಮ ವಿಶ್ವಾಸಿ
ಎಲ್.ಕೆ. ಅಡ್ವಾಣಿ

ADVERTISEMENT

ನವದೆಹಲಿ (ಪಿಟಿಐ/ಐಎಎನ್‌ಎಸ್): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸಿದ ನಂತರ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸೋಮವಾರ ಪಕ್ಷದ ಮೂರು ಹುದ್ದೆಗಳನ್ನು ತೊರೆಯುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸೋಮವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಅಡ್ವಾಣಿ ಅವರು, ಸಂಸದೀಯ ಮಂಡಳಿ, ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಚುನಾವಣಾ ಸಮಿತಿ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದರು.

ಮೂರು ಪ್ಯಾರಾಗಳ ರಾಜೀನಾಮೆ ಪತ್ರವನ್ನು ಬೆಳಿಗ್ಗೆ 11ಗಂಟೆಗೆ  ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಖುದ್ದಾಗಿ ಸಲ್ಲಿಸಿದರು. ಹೀಗಾಗಿ ರಾತ್ರಿಯವರೆಗೂ ಬಿಜೆಪಿ ಪಾಳೆಯದಲ್ಲಿ ಎಡೆಬಿಡದ ರಾಜಕೀಯ ಚಟುವಟಿಕೆ ಕಂಡುಬಂದವು. ಸಂಜೆ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಅಡ್ವಾಣಿ ರಾಜೀನಾಮೆ ಸ್ವೀಕರಿಸದಂತೆ ತೀರ್ಮಾನಿಸಲಾಯಿತು ಎಂದು ರಾಜನಾಥ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಡ್ವಾಣಿ ಅವರ ಮನೆಗೆ ಧಾವಿಸಿದ ರಾಜನಾಥ್ ಸಿಂಗ್ ಅವರನ್ನು ಅಡ್ವಾಣಿ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಮೋದಿ ಅವರಿಗೆ ಚುನಾವಣಾ ಪ್ರಚಾರ ಸಮಿತಿ ಸಾರಥ್ಯ ವಹಿಸಿದ್ದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಡ್ವಾಣಿ ಆಶೀರ್ವಾದ ಪಡೆಯಲು ರಾಜನಾಥ್ ಮತ್ತು ಮೋದಿ ಸಜ್ಜಾಗಿದ್ದರು. ಆದರೆ, ರಾಜನಾಥ್ ಅವರನ್ನು ಮಾತ್ರ ಅಡ್ವಾಣಿ ತಮ್ಮ ನಿವಾಸಕ್ಕೆ ಬರುವಂತೆ ಸೂಚಿಸಿದರು ಎನ್ನಲಾಗಿದೆ.   

ಅಟಲ್ ಬಿಹಾರಿ ವಾಜಪೇಯಿ ನಂತರ ಪಕ್ಷದ ಅತ್ಯಂತ ಹಿರಿಯ ಮತ್ತು ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಅಡ್ವಾಣಿ ರಾಜೀನಾಮೆಯಿಂದಾಗಿ ಬಿಜೆಪಿಯಲ್ಲಿನ ಆಂತರಿಕ ಗುಂಪುಗಾರಿಕೆ ಅಧಿಕೃತವಾಗಿ ಬಹಿರಂಗಗೊಂಡಂತಾಗಿದೆ.

ಹಿರಿಯ ನಾಯಕನ ರಾಜೀನಾಮೆ ಬಿಜೆಪಿಯಲ್ಲಿ  ಮಾತ್ರವಲ್ಲಿ ರಾಷ್ಟ್ರ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರತಿಪಕ್ಷಗಳೂ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳು ಅಡ್ವಾಣಿ ರಾಜೀನಾಮೆಯನ್ನು ಗಂಭೀರವಾಗಿ ತೆಗೆದುಕೊಂಡಿವೆ.

ಈ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಿಂದ ಅಚ್ಚರಿಗೊಂಡ ಪಕ್ಷದ ನಾಯಕರಾದ ಸುಷ್ಮಾ ಸ್ವರಾಜ್, ಎಂ.ವೆಂಕಯ್ಯ ನಾಯ್ಡು, ಅನಂತಕುಮಾರ್ ಮುಂತಾದವರು ಅಡ್ವಾಣಿ ಅವರ ನಿವಾಸದತ್ತ ಧಾವಿಸಿದರು.

ರಾಜೀನಾಮೆ ನಿರ್ಧಾರವನ್ನು ಪುನಃ ಪರಿಶೀಲಿಸುವಂತೆ ಅವರ ಮೇಲೆ ಒತ್ತಡ ಹೇರಿದರು. ಆದರೆ, ಅವರ ಮನವೊಲಿಕೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮನವೊಲಿಕೆ ಕಸರತ್ತು ಸೋಮವಾರ ರಾತ್ರಿಯೂ ಮುಂದುವರಿದಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಪಕ್ಷದಲ್ಲಿ ತಲೆದೋರುವ ಪರಿಸ್ಥಿತಿಯ ನಿರ್ವಹಣೆ ಕುರಿತು ರಾಜನಾಥ್ ಸಿಂಗ್ ಅವರು ಅರುಣ್ ಜೇಟ್ಲಿ ಹಾಗೂ ಇತರ ನಾಯಕರೊಂದಿಗೆ ತಡರಾತ್ರಿಯವರೆಗೂ ಚರ್ಚೆ ನಡೆಸಿದ್ದಾರೆ. 

ಅಡ್ವಾಣಿ ಬರೆದಿರುವ ಮೂರು ಪ್ಯಾರಾಗಳ ಖಾರವಾದ ಪತ್ರದಲ್ಲಿ ಎಲ್ಲಿಯೂ ಅವರು ಅಪ್ಪಿತಪ್ಪಿ ಮೋದಿ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೆ, ಮೋದಿ ಅವರಿಗೆ ಬಡ್ತಿ ನೀಡಿದ ನಿರ್ಧಾರವೇ ಅವರ ಅಸಮಾಧಾನಕ್ಕೆ ಕಾರಣ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.   

`ಬಿಜೆಪಿಯ ಬಹುತೇಕ ನಾಯಕರು ಕೇವಲ ತಮ್ಮ ವೈಯಕ್ತಿಕ ಹಿತಾಸಕ್ತಿ ಮತ್ತು ಕಾರ್ಯಸೂಚಿಗಳ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾರೆ' ಎಂದು ಅವರು ಪತ್ರದಲ್ಲಿ ಕಿಡಿಕಾರಿದ್ದಾರೆ. ಪಕ್ಷದಲ್ಲಿಯ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಅಡ್ವಾಣಿ, ಗೋವಾದಲ್ಲಿ ಮುಕ್ತಾಯಗೊಂಡ ಮೂರು ದಿನಗಳ ಬಿಜೆಪಿ ಕಾರ್ಯಕಾರಣಿಯಿಂದ ದೂರವೇ ಉಳಿದಿದ್ದರು.

ಈ ನಡುವೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾಗಿರುವ ಜೆಡಿಯು, ಮೈತ್ರಿಕೂಟ ತೊರೆಯುವ ಸುಳಿವು ನೀಡಿದೆ. `ಕೃತಕ ಉಸಿರಾಟ ವ್ಯವಸ್ಥೆಯಲ್ಲಿರುವ ಎನ್‌ಡಿಎ ಮೈತ್ರಿಕೂಟದ ಪರಿಸ್ಥಿತಿ ಅಡ್ವಾಣಿ ರಾಜೀನಾಮೆಯ ನಂತರ ಮತ್ತಷ್ಟು ಬಿಗಡಾಯಿಸಿದ ಕಾರಣ ಮೈತ್ರಿಕೂಟದಲ್ಲಿ ಮುಂದುವರಿಯುವುದು ಕಷ್ಟ' ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಹೇಳಿದ್ದಾರೆ.

`ಅಡ್ವಾಣಿ ಅವರ ರಾಜೀನಾಮೆ ಅತ್ಯಂತ ಗಂಭೀರ ವಿಷಯವಾಗಿದ್ದು, ಎನ್‌ಡಿಎ ಭವಿಷ್ಯದ ದೃಷ್ಟಿಯಿಂದ ಇದು ಆರೋಗ್ಯಕರವಾದ ಬೆಳವಣಿಗೆ ಅಲ್ಲ' ಎಂದು  ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜೀನಾಮೆ ಮೊದಲು ಸಭೆಗೆ ಹಾಜರಿ!
ಅನಾರೋಗ್ಯದ ಕಾರಣ ನೀಡಿ ಗೋವಾ ಕಾರ್ಯಕಾರಿಣಿಯಿಂದ ದೂರ ಉಳಿದಿದ್ದ ಅಡ್ವಾಣಿ ಸೋಮವಾರ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸುವ ಮೊದಲು ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಗೆ ಹಾಜರಾಗಿದ್ದರು. ಅವರ ಈ ನಡೆ ಕುತೂಹಲಕ್ಕೆ ಕಾರಣವಾಯಿತು.

ಬಿಜೆಪಿ ಮತ್ತೊಬ್ಬ ಧುರೀಣ ವೆಂಕಯ್ಯ ನಾಯ್ಡು ಅವರ ನೇತೃತ್ವದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಅಡ್ವಾಣಿ ಭಾಗವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿ ತೆರಳಿದ ನಂತರ ಅವರು ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದರು.

ಮೂರು ಹುದ್ದೆಗಳ ಹೊರತಾಗಿಯೂ ಅಡ್ವಾಣಿ ಅವರು ಬಿಜೆಪಿ ಸಂಸದೀಯ ಪಕ್ಷ ಮತ್ತು ಎನ್‌ಡಿಎ ಮೈತ್ರಿಕೂಟದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಆರ್‌ಎಸ್‌ಎಸ್ ಹಸ್ತಕ್ಷೇಪ ಇಲ್ಲ
ನಾಗಪುರ (ಪಿಟಿಐ): ಅಡ್ವಾಣಿ ರಾಜೀನಾಮೆಗೆ ಆಘಾತ ವ್ಯಕ್ತಪಡಿಸಿರುವ ಹಿರಿಯ ಆರ್‌ಎಸ್‌ಎಸ್ ಮುಖಂಡ ಎಂ.ಜಿ.ವೈದ್ಯ, ಇನ್ನಷ್ಟು ಜನರು ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

`ಅಡ್ವಾಣಿಯಂತಹ ಮುತ್ಸದ್ಧಿ ರಾಜೀನಾಮೆ ನೀಡಿರುವುದು ಅಚ್ಚರಿ ತಂದಿದೆ. ಇದರಿಂದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಬೀತಾಗಿದೆ. ಅವರು ಪಕ್ಷದೊಳಗಿನ ಆಂತರಿಕ ಕಲಹದಿಂದ ಕ್ಷೋಭೆಗೊಂಡು ರಾಜೀನಾಮೆ ನೀಡಿರಬಹುದು' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿ ಕೇಳದ ಹೊರತು ಆರ್‌ಎಸ್‌ಎಸ್ ಸದ್ಯದ ಬೆಳವಣಿಗೆಗೆ ಮೂಗು ತೂರಿಸಲಾರದು. ಈ ಹಿಂದೆ ಪಕ್ಷದ ಮುಖಂಡರಾದ ಕಲ್ಯಾಣ್ ಸಿಂಗ್ ಹಾಗೂ ಉಮಾಭಾರತಿ ರಾಜೀನಾಮೆ ನೀಡಿದ್ದರೂ ಅಡ್ವಾಣಿ ಪ್ರಕರಣ ವಿಭಿನ್ನ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.