ADVERTISEMENT

ಅತಿಥಿ ಗೃಹವಾಗಲಿದೆ ‘ದುರದೃಷ್ಟದ’ ಬಂಗಲೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2014, 19:30 IST
Last Updated 22 ಜೂನ್ 2014, 19:30 IST

ನವದೆಹಲಿ (ಪಿಟಿಐ):  ‘ದುರದೃಷ್ಟಕರ, ಅಶುಭಕರ’ ಎಂದು ಹಣೆಪಟ್ಟಿ ಹೊತ್ತ ಸರ್ಕಾರಿ ಬಂಗಲೆ­ಯೊಂದನ್ನು ಅತಿಥಿ ಗೃಹವನ್ನಾಗಿ ಪರಿವರ್ತಿಸಲು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ನೀಡಿದ್ದಾರೆ.

ಹಿಂದೆ ದೆಹಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿದ್ದ ಶಾಮ್‌ನಾಥ್‌ ಮಾರ್ಗದಲ್ಲಿರುವ 33ನೇ ಸಂಖ್ಯೆಯ ಬಂಗಲೆಗೆ ‘ಅಮಂಗಳಕರ’ವೆಂಬ ಹಣೆ ಪಟ್ಟಿ ಹಚ್ಚಲಾಗಿದೆ. ಈ ಮೂಢ­ನಂಬಿಕೆ­ಯನ್ನು ನಂಬಿದ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಇಲ್ಲಿಗೆ ವಾಸಕ್ಕೆ ಬರಲು ಹೆದರುತ್ತಿದ್ದಾರೆ. ಆದ್ದರಿಂದ ಈ ಬಂಗಲೆಯನ್ನು ಅತಿಥಿ ಗೃಹವನ್ನಾಗಿ ಪರಿವರ್ತಿ ಸಲಾಗುತ್ತಿದೆ.

ಹಳೆ ಸಚಿವಾಲಯದ ಕೂಗಳತೆಯಲ್ಲಿರುವ ವಿಶಾಲವಾದ ಈ ಬಂಗಲೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ. ಆದರೆ, ಈ ಹಿಂದೆ ಇಲ್ಲಿ ವಾಸವಾಗಿದ್ದವರಿಗೆ ದುರದೃಷ್ಟ ಬೆನ್ನು ಹತ್ತಿತು. ಇದಕ್ಕೆ ಅಶುಭಕರವಾದ ಈ ಬಂಗಲೆಯೇ ಕಾರಣ ಎಂಬ ಮೂಢನಂಬಿಕೆ ಬಲವಾಗಿ ಬೇರೂರಿದೆ.

ಬಿಜೆಪಿ ಮುಖಂಡ ಮದನ್‌ ಲಾಲ್‌ ಖುರಾನಾ ಅವರು ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ಇದು ಅವರ ಅಧಿಕೃತ ನಿವಾಸವಾಗಿತ್ತು. ಆದರೆ, ಹವಾಲಾ ಹಗರಣದ ಆರೋಪದಲ್ಲಿ ಅವರು ರಾಜೀನಾಮೆ ನೀಡಿದರು. ನಂತರ ಮುಖ್ಯಮಂತ್ರಿಯಾದ ಸಾಹಿಬ್‌ ಸಿಂಗ್ ವರ್ಮಾ ಅವರು ಇಲ್ಲಿಗೆ ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡರು.

ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದ ದೀಪ್‌ ಚಂದ್‌ ಬಂಧು ಅವರು ಈ ಬಂಗಲೆಗೆ ಸ್ಥಳಾಂತರವಾದ ಮೇಲೆ (1998) ಅನಾರೋಗ್ಯದಿಂದ ಕೊನೆಯುಸಿರೆಳೆದರು. ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರು ಈ ಬಂಗಲೆಯನ್ನು ತಮ್ಮ ನಿವಾಸವನ್ನಾಗಿ ಮಾಡಿಕೊಳ್ಳಲು ಒಪ್ಪಲಿಲ್ಲ. ಆದ್ದರಿಂದ ಈ ಬಂಗ್ಲೆ ಪತ್ರಿಕಾಗೋಷ್ಠಿ ಮತ್ತು ಸಭೆ– ಸಮಾರಂಭಗಳಿಗೆ ಬಳಕೆ ಆಗುತ್ತಿತ್ತು.

ಆನಂತರದಲ್ಲಿ ಹಲವು ಕಾಲ ಖಾಲಿ ಇದ್ದ ಈ ಬಂಗಲೆಗೆ  ಐಎಎಸ್‌ ಅಧಿಕಾರಿಯೊಬ್ಬರು ಕಳೆದ ವರ್ಷ ವಾಸಕ್ಕೆ ಬಂದರು. ಆದರೆ, 2014ರ ಫೆಬ್ರುವರಿಯಲ್ಲಿ ಅವರೂ ಈ ಬಂಗಲೆ ತೊರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.