ADVERTISEMENT

ಅತ್ಯಾಚಾರ ನಡೆದ ಮೇಲಷ್ಟೇ ಕ್ರಮ ಸಾಧ್ಯ

ಮಧ್ಯ ಪ್ರದೇಶದ ಗೃಹ ಸಚಿವ ಬಾಬುಲಾಲ್‌ ಗೌರ್‌ ವಿಚಿತ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

ಭೋಪಾಲ್‌ (ಪಿಟಿಐ): ಅತ್ಯಾಚಾರ ಪ್ರಕರಣಗಳ ತಡೆಗೆ ಯಾವುದೇ ಸರ್ಕಾರ ಖಾತ್ರಿ ನೀಡಲು ಸಾಧ್ಯವಿಲ್ಲ. ಘಟನೆಯ ಬಳಿಕವಷ್ಟೇ ಕ್ರಮ ಜರುಗಿಸ­ಬಹುದು ಎಂದು ಮಧ್ಯ ಪ್ರದೇಶದ ಗೃಹ ಸಚಿವ ಬಾಬುಲಾಲ್‌ ಗೌರ್‌ ಅವರು ಗುರುವಾರ ಇಲ್ಲಿ ಹೇಳಿಕೆ ನೀಡಿದರು.

ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಬಾಬು­ಲಾಲ್‌ ಅವರು ಹುದ್ದೆಯಲ್ಲಿ ಮುಂದು­ವರಿಯುವ ಹಕ್ಕು ಕಳೆದುಕೊಂಡಿದ್ದಾರೆ ಎಂದಿದೆ.

‘ಇದೊಂದು ಸಾಮಾಜಿಕ ಅಪರಾಧ­ವಾಗಿದ್ದು, ಇದು ಪುರುಷ ಮತ್ತು ಮಹಿಳೆಯನ್ನು ಅವಲಂಬಿಸಿದೆ. ಕೆಲವು ಬಾರಿ ಇದು ಸರಿಯಾಗಿದ್ದರೆ ಕೆಲ ಸಲ ತಪ್ಪು ಆಗುತ್ತದೆ. ದೂರು ದಾಖಲಿಸದೇ ಇದ್ದರೆ ಏನೂ ಆಗುವುದಿಲ್ಲ’ ಎಂದು ಗೌರ್‌ ಹೇಳಿದರು.

ಮಹಿಳೆಯರು ಆತ್ಮ ರಕ್ಷಣೆಗೆ ಜೂಡೊ, ಕರಾಟೆ ಕಲಿಯಬೇಕು. ‘ವ್ಯಕ್ತಿ­ಯೊಬ್ಬ ಬಯಸದ ಹೊರತು ಅವರನ್ನು ಮುಟ್ಟಲು ಯಾರು ಕೂಡ ಧೈರ್ಯ ತೋರುವುದಿಲ್ಲ. ಚಲನಚಿ­ತ್ರಗಳ ಲ್ಲಿರುವ ಅಶ್ಲೀಲ ನೃತ್ಯ ವಾತಾವ­ರಣವನ್ನು ಹಾಳು ಮಾಡುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

2007ರಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಿ­ವುಡ್‌ನ ಹೆಸರಾಂತ ನಟಿಯೊ­ಬ್ಬರಿಗೆ ಹಾಲಿವುಡ್‌ ನಟರೊಬ್ಬರು ಮುತ್ತು ನೀಡಿದ್ದರು. ಆದರೆ, ಅದು ಅವರಿಗೆ ತಪ್ಪು ಎನಿಸಿರಲಿಲ್ಲ ಎಂದೂ ಘಟನೆಯನ್ನು ಉಲ್ಲೇಖಿಸಿದರು.

ಸಚಿವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ಮನಕ್‌ ಅಗರವಾಲ್‌, ಸಚಿವರು ಅವರ ಹುದ್ದೆಯಲ್ಲಿ ಮುಂದುವರಿ­ಯುವ ಹಕ್ಕು ಕಳೆದುಕೊಂಡಿದ್ದಾರೆ ಎಂದರು.

ಸಚಿವರ ಈ ಹೇಳಿಕೆಯಿಂದ ಅತ್ಯಾ­ಚಾರಿ­ಗಳಿಗೆ ಪ್ರೋತ್ಸಾಹ ನೀಡಿದಂತಾ­ಗಿದೆ. ಸಚಿವರ ಕರ್ತವ್ಯ ಮಹಿಳೆಯರಿಗೆ ರಕ್ಷಣೆ ಒದಗಿಸುವುದೇ ಹೊರತು  ಅತ್ಯಾಚಾರಿಗಳಿಗಲ್ಲ ಎಂದಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಬೆಂಬ­ಲಕ್ಕೆ ಬಂದಿರುವ ಸಚಿವರು, ‘ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅತ್ಯಾ­ಚಾರ ಪ್ರಕರಣಗಳನ್ನು ತಡೆಯಲು ಅವರಿಂದ ಸಾಧ್ಯವಿಲ್ಲ’ ಎಂದು ಹೇಳಿ­ದರು.

ಬದಾಯೂಂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿರುವುದನ್ನು ಉಲ್ಲೇಖಿಸಿ ಸಚಿವರು ಹೀಗೆ ಹೇಳಿದರು.

ಸಚಿವರ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಇದು ಅವರ ವೈಯಕ್ತಿಯ ನಿಲುವು ಎಂದು ಪಕ್ಷದ ನಾಯಕಿ ಲಲಿತಾ ಕುಮಾರಮಂಗಲಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.