ADVERTISEMENT

ಅದಾನಿಗೆ ಸಾಲ: ಕಾಂಗ್ರೆಸ್‌ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 19:30 IST
Last Updated 20 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾದ ಕ್ವೀನ್ಸ್‌­ಲ್ಯಾಂಡ್‌­ನಲ್ಲಿನ ಕಾರ್‌ಮೈಖೇಲ್‌ ಕಲ್ಲಿದ್ದಲು ಗಣಿ ಅಭಿವೃದ್ಧಿಗೆ ಅದಾನಿ ಸಮೂಹಕ್ಕೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸುಮಾರು ₨6200 ಕೋಟಿ ಸಾಲ ನೀಡಿರುವ ಕ್ರಮವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳ­ಲಾಗಿದೆ. ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಅವರ ಸಮೀಪದಲ್ಲಿಯೇ ಅದಾನಿ ಅವರು ಕುಳಿ­ತಿದ್ದರು. ಐದು ವಿದೇಶಿ ಬ್ಯಾಂಕುಗಳು ಅದಾನಿ ಸಮೂಹಕ್ಕೆ ಈ ಯೋಜನೆಗೆ ಸಾಲ ನೀಡಲು ನಿರಾ­ಕ­ರಿಸಿವೆ. ವಸ್ತುಸ್ಥಿತಿ ಹೀಗಿರುವಾಗ ಎಸ್‌ಬಿಐ ಸಾಲ ನೀಡಿ­ರುವುದರ ಔಚಿತ್ಯವೇನು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ ಮಾಕನ್‌ ಪ್ರಶ್ನಿಸಿದ್ದಾರೆ.

₨6200 ಕೋಟಿ ಸಾಲ ಪಡೆಯಲು ಅದಾನಿ ಸಮೂಹಕ್ಕೆ ನೆರವಾಗುವಲ್ಲಿ ಪ್ರಧಾನಿ ಮೋದಿ ಅವರು ಭಾರಿ ಆಸಕ್ತಿ ತೋರಿದ್ದಾರೆ. ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ ಎಸ್‌ಬಿಐ ಅಧ್ಯಕ್ಷರೂ ಇದ್ದರು ಎಂದು ಮಾಕನ್‌ ಆರೋಪಿಸಿದ್ದಾರೆ. ಯೋಜನೆಗೆ ಸಂಬಂಧಿಸಿ ಅದಾನಿ ಸಮೂಹ­ದೊಂ­ದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಎಸ್‌ಬಿಐ ಯಾಕೆ ಬಹಿರಂಗಪಡಿಸಿಲ್ಲ ಎಂದೂ ಮಾಕನ್‌ ­ಪ್ರಶ್ನಿಸಿದ್ದಾರೆ.
ಐದು ವಿದೇಶಿ ಬ್ಯಾಂಕುಗಳು ಸಾಲ ನೀಡಲು ನಿರಾಕರಿಸಿರುವಾಗ ದೇಶದ ಜನರು ಕಷ್ಟಪಟ್ಟು ದುಡಿದು ಠೇವಣಿ ಇರಿಸಿರುವ ಹಣವನ್ನು ಸಾಲವಾಗಿ ನೀಡುವ ಅಗತ್ಯ ಏನಿತ್ತು ಎಂದು ಮಾಕನ್‌ ಕೇಳಿದ್ದಾರೆ.

‘ಅಗತ್ಯ ಕ್ರಮಗಳನ್ನು ಎಸ್‌ಬಿಐ ಅನುಸರಿಸಿದೆಯೇ? ಹಾಗಿದ್ದರೆ ಒಪ್ಪಂದವನ್ನು ಯಾಕೆ ಬಹಿರಂಗಪಡಿ­ಸು­ತ್ತಿಲ್ಲ? ಯಾವ ಷರತ್ತುಗಳನ್ನು ಹಾಕಿಕೊಂಡು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಮಾಕನ್‌ ಪ್ರಶ್ನಿಸಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿನ ಕಾರ್‌ಮೈಖೇಲ್‌ ಕಲ್ಲಿದ್ದಲು ಗಣಿ ಅಭಿವೃದ್ಧಿ ಯೋಜನೆಗೆ ಅದಾನಿ ಸಮೂಹಕ್ಕೆ ಸುಮಾರು ₨ 6200 ಕೋಟಿ ಸಾಲ ನೀಡಲು ಎಸ್‌ಬಿಐ ನಿರ್ಧ­ರಿಸಿದೆ ಎಂದು ವರದಿಯಾಗಿದೆ. 2017ರಲ್ಲಿ ಇಲ್ಲಿ ಗಣಿಗಾರಿಕೆ ಆರಂಭಿಸುವ ಉದ್ದೇಶವನ್ನು ಅದಾನಿ ಸಮೂಹ ಹೊಂದಿದೆ. ವಿದೇಶಿ ಯೋಜನೆಯೊಂದಕ್ಕೆ ಭಾರತದ ಬ್ಯಾಂಕೊಂದು ನೀಡುತ್ತಿರುವ ಅತ್ಯಂತ ದೊಡ್ಡ ಮೊತ್ತದ ಸಾಲ ಇದಾಗಿದೆ.

ಎಸ್‌ಬಿಐ ಸ್ಪಷ್ಟೀಕರಣ: ಅದಾನಿ ಸಮೂಹಕ್ಕೆ ₨ 6,200 ಕೋಟಿ ಸಾಲ ನೀಡಿಕೆ ವಿವಾದದ ವಿಚಾರದಲ್ಲಿ ಎಸ್‌ಬಿಐ ಸ್ಪಷ್ಟೀಕರಣ ನೀಡಿದೆ.  ‘ನಾವು ಒಪ್ಪಂದ ಮಾತ್ರ ಮಾಡಿಕೊಂಡಿದ್ದೇವೆ. ಇದು ಸಾಲ ಮಂಜೂರು ಅಲ್ಲ. ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಿದ ನಂತರವೇ ಸಾಲ ನೀಡಲಾಗುವುದು’ ಎಂದು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

ಗಣಿಗಾರಿಕೆ ವಿರೋಧಾಭಾಸ
ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಪ್ರಧಾನಿಯವರು ಒತ್ತು ನೀಡುತ್ತಿದ್ದಾರೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ ಕಲ್ಲಿದ್ದಲು ಆಮದನ್ನು ನಿಲ್ಲಿಸಲಾಗುವುದು ಎಂದು ಕಲ್ಲಿದ್ದಲು ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. ಇದು ವಿರೋಧಾಭಾಸಕರವಾಗಿದೆ ಎಂದು ಅಜಯ್‌ ಮಾಕನ್‌ ಹೇಳಿದ್ದಾರೆ. ಪ್ರಧಾನಿ ಹೇಳುತ್ತಿರುವುದು ನಿಜವೇ ಅಥವಾ ಕಲ್ಲಿದ್ದಲು ಸಚಿವರು ಹೇಳುತ್ತಿರುವುದು ನಿಜವೇ? ಆಸ್ಟ್ರೇಲಿಯಾದ ಕಲ್ಲಿದ್ದಲಿನಿಂದ ಇಡೀ ಭಾರತ­ವನ್ನು ಬೆಳಗಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಮುಂದಿನ ಎರಡು ವರ್ಷ­ಗಳಲ್ಲಿ ಕಲ್ಲಿದ್ದಲು ಆಮದು ನಿಲ್ಲಿಸಲು ಭಾರತಕ್ಕೆ ಸಾಧ್ಯವಾ­ಬ­ಹುದು ಎಂದು ಗೋಯಲ್‌ ಹೇಳಿದ್ದಾರೆ. ಇದ­ರಲ್ಲಿ ಯಾವುದು ನಿಜ ಎಂದು ಮಾಕನ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT