ADVERTISEMENT

ಅಧಿಕಾರಕ್ಕೇರಲು ಬಿಜೆಪಿ ಹೊಂದಾಣಿಕೆ ಲೆಕ್ಕಾಚಾರ

ಹೊನಕೆರೆ ನಂಜುಂಡೇಗೌಡ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST

ಜಮ್ಮು: ಎರಡು ಹಂತದ ಮತದಾನ ಬಾಕಿ ಉಳಿ­ದಿ­ರುವ ಜಮ್ಮು– ಕಾಶ್ಮೀರದತ್ತ ಎಲ್ಲರ ಕಣ್ಣು. ಅಧಿ­ಕಾರಕ್ಕೆ ಬರುವ ಪಕ್ಷ ಯಾವುದು? ಮುಖ್ಯಮಂತ್ರಿ ಯಾರಾಗುತ್ತಾರೆ? ಮೊದಲ ಬಾರಿಗೆ ಮುಸ್ಲಿ­ಮೇತರ ನಾಯಕರೊಬ್ಬರು ಆಡಳಿತ ಚುಕ್ಕಾಣಿ ಹಿಡಿಯುವರೇ? ಇತ್ಯಾದಿ ನಾಲ್ಕಾರು ಪ್ರಶ್ನೆಗಳು ಗಡಿ ರಾಜ್ಯದೊಳಗೆ ಮತ್ತು ಹೊರಗೆ ಚರ್ಚೆಗಳನ್ನು ಹುಟ್ಟುಹಾಕಿದೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾ­ವಣೆ ನಡೆಯುತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ನಡೆದ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಜಮ್ಮು– ಕಾಶ್ಮೀರ­ದಲ್ಲೂ ಗೆಲ್ಲಲು ಶತಾಯಗತಾಯ ಪ್ರಯತ್ನಿ­ಸುತ್ತಿರುವ ಪಕ್ಷ ‘ಮಿಷನ್‌ 44’ ತಂತ್ರ ರೂಪಿಸಿದೆ.
ಒಟ್ಟು 87 ಕ್ಷೇತ್ರಗಳನ್ನು ಹೊಂದಿರುವ ವಿಧಾನ­ಸಭೆಯಲ್ಲಿ ಅಧಿಕಾರಕ್ಕೆ ಬರುವ ಪಕ್ಷ  ಕನಿಷ್ಠ 44 ಸ್ಥಾನಗಳನ್ನು ಗೆಲ್ಲಲೇಬೇಕು. ‘ಮೋದಿ ಅಲೆ’ಯಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳನ್ನು ಗೆದ್ದು ನೈತಿಕ ಬಲ ಹೆಚ್ಚಿಸಿ­ಕೊಂಡಿರುವ ಬಿಜೆಪಿ, ಜಮ್ಮು– ಕಾಶ್ಮೀರದಲ್ಲೂ ಪ್ರಧಾನಿ ಜನಪ್ರಿಯತೆಯನ್ನು ಪಣಕೊಡ್ಡಿದೆ. ಸದ್ಯದ ರಾಜಕೀಯ ವಾತಾವರಣ ಗಮನಿಸಿದರೆ, ಜಮ್ಮು ಭಾಗದಲ್ಲಿ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವಲ್ಲಿ ಸಂದೇಹವಿಲ್ಲ. ಆದರೆ, ಕಾಶ್ಮೀರ­ದೊಳಗೂ ಖಾತೆ ತೆರೆಯುವುದೇ? ‘44 ಮ್ಯಾಜಿಕ್‌ ಸಂಖ್ಯೆ’ ಮುಟ್ಟುವುದೇ? ಎಂಬ ಕುತೂಹಲ.

ಬಿಜೆಪಿಗೆ ಕಾಶ್ಮೀರದೊಳಗೆ ಇದುವರೆಗೂ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. 2002ರ ಚುನಾವಣೆಯಲ್ಲಿ ಜಮ್ಮು ಭಾಗದಲ್ಲಿ ಕೇವಲ ಒಂದು ಸ್ಥಾನ ಗಳಿಸಿದ್ದ ಬಿಜೆಪಿ. ಆರು ವರ್ಷದ ಬಳಿಕ ನಡೆದ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಆಗ ‘ಅಮರನಾಥ ದೇವಾಲಯ ಜಮೀನು ವಿವಾದ’ ಇದ್ದರೂ ಹೆಚ್ಚು ಸೀಟುಗಳು ದಕ್ಕಲಿಲ್ಲ. ಆದರೆ, ಈಗ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ.

ಜಮ್ಮು ಭಾಗದಲ್ಲಿರುವ ವಿಧಾನಸಭೆ ಸ್ಥಾನಗಳ ಸಂಖ್ಯೆ 37, ಲಡಾಖ್‌ ವಲಯದಲ್ಲಿ ನಾಲ್ಕು ಕ್ಷೇತ್ರ­ಗಳಿವೆ. ಮಿಕ್ಕ 46 ಸ್ಥಾನಗಳು ಕಾಶ್ಮೀರದ ವ್ಯಾಪ್ತಿ­ಯ­ಲ್ಲಿವೆ. ಜಮ್ಮು, ಲಡಾಖಿನ ಎಲ್ಲ 31 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡರೂ,  ಸರ್ಕಾರ ರಚನೆ ಮಾಡಲು ಇನ್ನೂ ಮೂರು ಸ್ಥಾನ ಕಡಿಮೆ ಆಗಲಿವೆ. ಕಡಿಮೆಯಾಗುವ ಮೂರು ಸ್ಥಾನಗಳನ್ನು ಕಾಶ್ಮೀರದಲ್ಲೇ ಗೆಲ್ಲಬೇಕು.

‘ಜಮ್ಮು ಮತ್ತು ಲಡಾಖ್‌ನ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಿಲ್ಲ. ಕೆಲವೆಡೆ ಪೀಪಲ್‌ ಡೆಮಾಕ್ರಟಿಕ್‌ ಪಕ್ಷ, ನ್ಯಾಷನಲ್‌ ಕಾನ್ಫರೆನ್ಸ್‌, ಕಾಂಗ್ರೆಸ್‌  ಪ್ರಬಲ ಪೈಪೋಟಿ ನೀಡುತ್ತಿವೆ. ಅನೇಕ ಕ್ಷೇತ್ರಗಳಲ್ಲಿ ಮುಸ್ಲಿಮರ ಸಂಖ್ಯೆ ಹಿಂದೂಗಳಿಗಿಂತ ಅಧಿಕವಾಗಿದ್ದು, ಅವರೂ ಕಾಶ್ಮೀರದ ಮುಸ್ಲಿಮ­ರಂತೆ ಕಠಿಣ ನಿಲುವು ತಳೆಯುವರೇ ಎಂಬ ಅಂಶದ ಮೇಲೆ ಬಿಜೆಪಿ ಭವಿಷ್ಯ ನಿಂತಿದೆ’ ಎನ್ನುವುದು ‘ಗುಪ್ತಾ ಟ್ರಾವೆಲ್ಸ್‌’ ಮಾಲೀಕ ತಾರಾಜಿ ಗುಪ್ತಾ ಅವರ ಅಭಿಪ್ರಾಯ.

ಬಿಜೆಪಿ ಕಟ್ಟಾ ಬೆಂಬಲಿಗರಾದ ಗುಪ್ತಾ ಅವ­ರಿಗೂ ‘ಮಿಷನ್ 44’ ದಾರಿ ಸುಲಭವಾಗಿ ಕಾಣು­ತ್ತಿಲ್ಲ. ಜಮ್ಮುವಿನ ವಿವಿಧ ಕ್ಷೇತ್ರಗಳಲ್ಲಿ ಸುತ್ತಾ­ಡಿ­ದರೆ ತಾರಾಜಿ ಅವರ ಮಾತು ಉತ್ಪ್ರೇಕ್ಷೆ­ಯಲ್ಲ ಎನಿಸು­ತ್ತದೆ. ಅನೇಕ ಕಡೆ ಬಿಜೆಪಿಗೆ ಉಳಿದ ಪಕ್ಷ­ಗಳು ಸಮ­ಬಲದ ಸ್ಪರ್ಧೆಯೊಡ್ಡಿವೆ.

ಕಾಶ್ಮೀರದಲ್ಲಿ ಹುರಿಯತ್‌ ಕಾನ್ಫರೆನ್ಸ್‌ ‘ಚುನಾ­ವಣೆ ಬಹಿಷ್ಕಾರ’ ಕರೆ ನೀಡಿದೆ. ಆದರೆ, ಬಹಿಷ್ಕಾರ ಕರೆ­ಯನ್ನು ಲೆಕ್ಕಿಸದೆ ಜನ ಹಕ್ಕು ಚಲಾ­ಯಿ­ಸು­ತ್ತಿ­ದ್ದಾರೆ. ‘ಮತದಾನದಲ್ಲಿ ಹೆಚ್ಚಿನ ಸಂಖ್ಯೆ­­ಯಲ್ಲಿ ಜನ ಭಾಗವಹಿಸುತ್ತಿರುವುದು ಪ್ರತ್ಯೇಕವಾದಿಗಳಿಗೆ ಹಿನ್ನಡೆ. ಪ್ರಜಾಸತ್ತಾತ್ಮಕ ವಿಧಾನದಲ್ಲೇ ಕಾಶ್ಮೀ­ರದ ಜನ ಉತ್ತರ ಕೊಟ್ಟಿದ್ದಾರೆ’ ಎಂದು ರಾಜ­ಕೀಯ ವಲಯದಲ್ಲೂ ವ್ಯಾಖ್ಯಾನಿಸಲಾಗುತ್ತಿದೆ.

ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುತ್ತಿ­ರು­ವುದಕ್ಕೆ ಮತ್ತೊಂದು ವಾದವೂ ಇದೆ. ಮತದಾನ ಬಹಿಷ್ಕಾರ ಕರೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿ­ಸಿ­ದರೆ ಕಣಿವೆಯೊಳಗೆ ಬಿಜೆಪಿ ನುಸುಳಲು ಅವಕಾಶ ಕೊಟ್ಟಂತಾಗುತ್ತದೆ ಎಂಬ ಆತಂಕದಿಂದ ಹುರಿಯತ್‌ ಕಾನ್ಫರೆನ್ಸ್‌ ತನ್ನ ತೀರ್ಮಾನವನ್ನು ಕಟ್ಟುನಿಟ್ಟಾಗಿ ಹೇರಿಲ್ಲವಂತೆ.

‘ಹುರಿಯತ್‌ ಕಾನ್ಫರೆನ್ಸ್‌ ಚುನಾವಣೆ ಬಹಿ­ಷ್ಕಾರಕ್ಕೆ ಕರೆ ಕೊಟ್ಟಿರುವ ಸುದ್ದಿಯನ್ನು ಪತ್ರಿಕೆ­ಗಳಲ್ಲಿ ಓದಿದ್ದೇವೆ. ಧಾರ್ಮಿಕ ಮುಖಂಡರಿಂದ ಇದು­ವರೆಗೂ ಯಾವುದೇ ಸಂದೇಶ ಬಂದಿಲ್ಲ. ಅದನ್ನು ಗಮನಿಸಿದರೆ ಚುನಾವಣಾ ಬಹಿಷ್ಕಾರ ನಿರ್ಧಾರ­­ ಕಟ್ಟುನಿಟ್ಟಾಗಿ ಜಾರಿಗೊಳಿ­ಸಿ­ದಂತಿಲ್ಲ’ ಎಂದು ಕಾರಿನ ಚಾಲಕ ಜಾನ್‌ ಮಹ­ಮದ್‌ ಸ್ಪಷ್ಟ­ಪಡಿಸಿದರು. ಜಾನ್‌ ಮಹಮದ್‌ ಶ್ರೀನಗರದ ಮತ­ದಾರ. ಶ್ರೀನಗರದ ವಿಧಾನಸಭೆ ಕ್ಷೇತ್ರಗಳಿಗೆ ಡಿಸೆಂಬರ್‌ 14ರಂದು ನಾಲ್ಕನೇ ಹಂತ­ದಲ್ಲಿ ಮತ­ದಾನ ಆಗಲಿದೆ. ಅಂದಿನ ಮತ­ದಾನದ ಪ್ರಮಾಣ ನೋಡಿಕೊಂಡು ಖಚಿತ ಅಭಿಪ್ರಾಯಕ್ಕೆ ಬರ­ಬಹುದು ಎಂದು ಅನೇಕರು ಪ್ರತಿಪಾದಿಸುತ್ತಾರೆ.

ಲೋಕಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಲಡಾಖ್‌ನ ಮೂರು ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇದು ವಿಧಾನಸಭೆ ಚುನಾವಣೆ ಗೆಲ್ಲುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ವಿಶ್ವಾಸವನ್ನು ಹೆಚ್ಚಿಸಿದೆ. ಈ ಉದ್ದೇಶದಿಂದ ಮೋದಿ ಮೇಲಿಂದ ಮೇಲೆ ಕಣಿವೆಗೆ ಬರುತ್ತಿದ್ದಾರೆ.

ಮುಂದೆಯೂ ಬರು­ವುದಾಗಿ ಭರವಸೆ ಕೊಡುತ್ತಿದ್ದಾರೆ. ಬೆರಳೆ­ಣಿಕೆ ಕ್ಷೇತ್ರಗಳನ್ನಾ­ದರೂ ಗೆಲ್ಲಬೇಕೆಂಬ ಲೆಕ್ಕಾಚಾರ ಮೋದಿ ಅವರಿಗಿದೆ. ಬಿಜೆಪಿ ಸ್ವಂತ ಬಲದ ಮೇಲೆ ಗೆಲ್ಲಲು ಸಾಧ್ಯವಾಗದಿದ್ದರೆ ಪರೋಕ್ಷ­ವಾಗಿ ಹೆಜ್ಜೆ­ಗಳ­ನ್ನಿ­ಡುವ ಯೋಜನೆಗ­ಳನ್ನು ಹೆಣೆದಿದೆ. ಮಾಜಿ ಪ್ರತ್ಯೇಕತಾ­ವಾದಿ, ಪೀಪಲ್‌ ಕಾನ್ಫರೆನ್ಸ್ ನಾಯಕ ಸಜ್ಜಾದ್‌ ಲೋನ್‌ ಸೇರಿದಂತೆ ಕೆಲವು ಅಭ್ಯರ್ಥಿ­ಗಳ ಜತೆ ಸಂಪರ್ಕದಲ್ಲಿದೆ. ಚುನಾವಣೆ ಬಳಿಕ ಹೊಂದಾ­ಣಿಕೆ ಮಾಡಿಕೊಳ್ಳುವ ಲೆಕ್ಕಾಚಾರ ಬಿಜೆಪಿಗಿದೆ.

ಕಾಶ್ಮೀರದಲ್ಲೂ ಕೆಲವರು ಮೋದಿ ಅವರ ಕಡೆ ನೋಡುತ್ತಿದ್ದಾರೆ. ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಆರು ವರ್ಷದ ಆಡಳಿತ ಕಂಡು ಜನ ಹತಾಶರಾಗಿದ್ದಾರೆ. ಭ್ರಷ್ಟಾ­ಚಾರ, ಸ್ವಜನಪಕ್ಷಪಾತ ಬೇಸರ ಹುಟ್ಟಿಸಿದೆ. ಕಾಶ್ಮೀರದ ಜನ ಬದಲಾವಣೆ ಬಯಸಿದ್ದಾರೆ. ಇದು ಬಿಜೆಪಿಗೆ ಎಷ್ಟರಮಟ್ಟಿಗೆ ಲಾಭವಾಗಲಿದೆ ಎಂದು ಹೇಳುವುದು ಕಷ್ಟವಾದರೂ ಶೇಕಡಾ­ವಾರು ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ­ಯಿದೆ.

ಕಣಿವೆಯಲ್ಲಿರುವ ಆಡಳಿತ ವಿರೋಧಿ ಅಲೆ­ಯಿಂದ ಮುಫ್ತಿ ಮಹಮದ್‌ ಸಯೀದ್‌ ಅವರ ಪಿಡಿಪಿಗೆ ಹೆಚ್ಚಿನ ಲಾಭವಾಗುವಂತಿದೆ. 2002­ರಿಂದ ಆರು ವರ್ಷ ಅಧಿಕಾರದಲ್ಲಿದ್ದ ಪಿಡಿಪಿ– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಆಡಳಿತ ಉತ್ತಮ­ವಾಗಿತ್ತು ಎಂಬ ಭಾವನೆ ಜನರಲ್ಲಿದೆ. ಕಾಂಗ್ರೆಸ್‌, ಎನ್‌ಸಿ ಸರ್ಕಾರದಲ್ಲೂ ಭಾಗಿಯಾದ್ದರಿಂದ ಮತ­ದಾರರ ಅಸಹನೆ ಎದುರಿಸುತ್ತಿದೆ. ಕಾಂಗ್ರೆಸ್‌ ಮುಖಂಡರಾದ ಗುಲಾಂನಬಿ ಆಜಾದ್‌ ಮತ್ತು ಸೈಫುದ್ದೀನ್‌ ಸೋಜ್‌ ನಡುವಿನ ಕಿತ್ತಾಟವೂ ಚುನಾವಣೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್‌ ನಾಯಕರೇ ಹೇಳುತ್ತಿದ್ದಾರೆ.

ಒಮರ್‌ ಅಬ್ದುಲ್ಲಾ ಅವರ ಆರು ವರ್ಷದ ಆಡಳಿತ ತೀವ್ರ ಟೀಕೆಗೆ ಒಳಗಾಗಿದೆ. ಪ್ರವಾಹದ ಸಮಯದಲ್ಲಿ ರಾಜ್ಯ ಸರ್ಕಾರ ನಿಷ್ಕ್ರಿಯವಾದ ಬಗ್ಗೆ ಜನರಿಗೆ ಸಿಟ್ಟು, ಅಸಮಾಧಾನವಿದೆ. ಮುಖ್ಯ­ಮಂತ್ರಿ ಕಣ್ಣುಮುಚ್ಚಿ ಕುಳಿತರೆಂಬ ಆರೋಪವಿದೆ. ಒಮರ್‌ ಅಬ್ದುಲ್ಲಾ ಅವರಿಗಿಂತಲೂ ಅವರ ಪಕ್ಷದ ಕೆಲವು ನಾಯಕರ ಮೇಲೆ ಕಾಶ್ಮೀರ ಜನರಿಗೆ ಆಕ್ರೋಶವಿದೆ. ಈ ಚುನಾವಣೆಯಲ್ಲಿ ಮುಖ್ಯ­ಮಂತ್ರಿ ಏಕಾಂಗಿ ಆಗಿದ್ದಾರೆ. ಅವರ ತಂದೆ ಫಾರೂಕ್‌ ಅಬ್ದುಲ್ಲಾ ಅನಾರೋಗ್ಯದಿಂದ ಚುನಾ­ವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ. ಮುಫ್ತಿ ಮಹಮದ್‌ ಸಯೀದ್‌ ತಮ್ಮ ಪಕ್ಷದ ಪರ ಭರಾಟೆ ಪ್ರಚಾರ ಮಾಡುತ್ತಿದ್ದಾರೆ.

ಜಮ್ಮು– ಕಾಶ್ಮೀರ ಅಭಿವೃದ್ಧಿಯೇ ಚುನಾ­ವಣೆಯ ಪ್ರಮುಖ ವಿಷಯ. ಮೋದಿ ಜನರ ಬದುಕನ್ನು ಬದಲಾವಣೆ ಮಾಡುವ ಆಶ್ವಾಸನೆ ಕೊಡುತ್ತಿದ್ದಾರೆ. ಸಂವಿಧಾನದ 370ನೇ ಕಲಂ ಮತ್ತು ಏಕರೂಪದ ನಾಗರಿಕ ಸಂಹಿತೆ ಕುರಿತು ಅವರು ಪ್ರಸ್ತಾಪ ಮಾಡುತ್ತಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಈ ಬಗ್ಗೆಯೂ ಕಣಿವೆ ಜನರಿಗೆ ಕುತೂಹಲವಿದೆ.

ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಒಂದು ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವ ಸಾಮಾನ್ಯ ಅಭಿಪ್ರಾಯಗಳು ಜಮ್ಮು– ಕಾಶ್ಮೀರದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.