ADVERTISEMENT

ಅನಂತಮೂರ್ತಿ ಸಮಯಸಾಧಕ: ಭೈರಪ್ಪ

ನಾನು ರಾಜಕೀಯದಿಂದ ಸದಾ ದೂರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2014, 19:52 IST
Last Updated 23 ಏಪ್ರಿಲ್ 2014, 19:52 IST

ನವದೆಹಲಿ: ‘ಸಾಹಿತಿ ಯು.ಆರ್‌. ಅನಂತಮೂರ್ತಿ ದೊಡ್ಡ ಅವಕಾಶ­ವಾದಿ. ರಾಜಕಾರಣಿಗಳಿಂದ ಸದಾ ಲಾಭ ಪಡೆದುಕೊಳ್ಳುವುದರಲ್ಲಿ ಅವರು  ಮುಂದು’ ಎಂದು ಹೆಸರಾಂತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ವ್ಯಂಗ್ಯವಾಡಿದರು.

ದೆಹಲಿಯಲ್ಲಿ ಮಂಗಳವಾರ ಬಿಜೆಪಿ ಏರ್ಪಡಿಸಿದ್ದ ಆಯ್ದ ಸಾಹಿತಿಗಳ ಸಂವಾದ ಗೋಷ್ಠಿ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ತಾವು ಈ ಹಿಂದೆ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿರ­ಲಿಲ್ಲ; ಮುಂದೆಯೂ ಭಾಗವಹಿಸುವುದಿಲ್ಲ ಎಂದು ನುಡಿದರು.

ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ಅನಂತ­ಮೂರ್ತಿ ನೀಡಿದ್ದ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ,  ‘ಕಾದು ನೋಡಿ. ಮೋದಿ ಪ್ರಧಾನಿಯಾದರೆ ಅವರೇ ಹೂಗುಚ್ಛ ನೀಡಿ ಮೋದಿಗೆ ಸ್ವಾಗತ ಕೋರು­ತ್ತಾರೆ. ಆದರೆ ನಾನು ಮೋದಿಗೆ ಹಾರ ಹಾಕುವುದೂ ಇಲ್ಲ; ಯಾವುದೇ ಲಾಭ ಪಡೆಯು­ವುದೂ ಇಲ್ಲ. ಅನಂತ­ಮೂರ್ತಿ­­ಯವರು ಹಿಂದೆ ಕರ್ನಾಟಕದ ಆಗಿನ ಸಿ.ಎಂ ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ.ದೇವೇಗೌಡ­­ರನ್ನು ಬೆಂಬ­ಲಿಸಿದ್ದರು.  ಅವರು ಪದೇ ಪದೇ ತಮ್ಮ ನಿಲುವನ್ನು ಬದಲಾಯಿಸುತ್ತಿರುತ್ತಾರೆ’ ಎಂದು ಗೇಲಿ ಮಾಡಿದರು.

‘ಅವರೊಡನೆ ನನ್ನನ್ನು ಹೋಲಿಸಬೇಡಿ. ರಾಜಕಾರಣಿಗಳಿಗೆ ಬೆಂಬಲ ಸೂಚಿಸುವ ಅನಂತಮೂರ್ತಿ, ರಾಜಕೀಯ ಪಕ್ಷ
ಗ­ಳಿಂದ ಅನುಕೂಲಗಳನ್ನು ನಿರೀಕ್ಷಿಸುತ್ತಾರೆ’ ಎಂದು ತಿಳಿಸಿದರು.

‘ನೀವು  ಇಲ್ಲಿಗೆ ಬಿಜೆಪಿ ಆಹ್ವಾನದ ಮೇಲೆ ಬಂದಿದ್ದೀರಾ’ ಎಂದು ಕೇಳಿದಾಗ, ‘ನಾನು ನನ್ನಷ್ಟಕ್ಕೆ ಬಂದಿದ್ದೇನೆಯೇ ಹೊರತು ಬಿಜೆಪಿ ಆಹ್ವಾನದ ಮೇಲಲ್ಲ’ ಎಂದರು. ತಾವು ಬಲ­ಪಂಥೀಯ ಸಿದ್ಧಾಂತದ ಬೆಂಬ­ಲಿಗ ಎಂಬ ಟೀಕೆ­­ಯನ್ನು ಒಪ್ಪದ ಭೈರಪ್ಪ, ‘ನಾನು ಬಲ­ಪಂಥೀಯ­ನಲ್ಲ. ಮೋದಿ ಪ್ರಾಮಾಣಿಕ ವ್ಯಕ್ತಿ. ಅವರು ದೇಶವನ್ನು ಅಭಿವೃ­ದ್ಧಿಪಡಿಸುವುದರಿಂದ ನಾನವರಿಗೆ ಬೆಂಬಲ ನೀಡಿದ್ದೇನೆ’ ಎಂದು ಹೇಳಿದರು.

‘ಗುಜರಾತ್‌ ದೇಶದ ಅತ್ಯುತ್ತಮ ರಾಜ್ಯಗಳಲ್ಲಿ ಒಂದು. ತಾವೊಬ್ಬ ದಕ್ಷ ಆಡಳಿತಗಾರ ಎಂಬುದನ್ನು ಮೋದಿ ಸಾಬೀತು ಮಾಡಿದ್ದಾರೆ. ಕಾಂಗ್ರೆಸ್‌ ಕೇವಲ ಒಂದು ಕುಟುಂಬದ ಪಕ್ಷ. ತಾವಷ್ಟೇ ಈ ದೇಶವನ್ನು ಆಳಬಲ್ಲವರು ಎಂದು ಸೋನಿಯಾ ಕುಟುಂಬ ಭಾವಿಸಿದೆ. ಮೋದಿ ಹೊಂದಾಣಿಕೆಗೆ ಸಿದ್ಧವಿರುವ ನಾಯಕ. ಅವರು ಉಳಿದೆಲ್ಲ ನಾಯಕರನ್ನು ತಮ್ಮ ವಿಶ್ವಾಸಕ್ಕೆ ತೆಗೆದು­­ಕೊಳ್ಳುವರು. ನಾನು ಅವರನ್ನು ಹಿಂದೆ ಭೇಟಿ ಮಾಡಿ­ದ್ದರೂ ಈಗ ಅವರು ನನ್ನ ಗುರುತು ಹಿಡಿಯಲಾರರು. ಹಿಂದೆ ವಿಶ್ವೇಶ್ವರ­ಯ್ಯನವರು ಹಠ ಹಿಡಿಯದಿದ್ದರೆ ಕೃಷ್ಣ­ರಾಜಸಾಗರ ಜಲಾಶಯ ನಿರ್ಮಾಣವಾಗುತ್ತಿರಲಿಲ್ಲ, ಕೆಲವು ಸಲ ಒಳ್ಳೆ ಕೆಲಸಕ್ಕೆ ಸರ್ವಾಧಿಕಾರಿಯಾಗಬೇಕಾಗುತ್ತದೆ’ ಎಂದರು.

ಬಿ.ಎಸ್‌.ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರದ ಆರೋಪವಿದ್ದರೂ ಬಿಜೆಪಿ ಅವರನ್ನು ಚುನಾವಣೆಗೆ ಇಳಿಸಿದ್ದನ್ನು ಬೆಂಬಲಿಸಿದ ಭೈರಪ್ಪ, ‘ಬಿಎಸ್‌ವೈ ಜನಪ್ರಿಯ ನಾಯಕ. ಸಿ.ಎಂ ಆಗಿದ್ದಾಗ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಆದರೆ ಅವರನ್ನು ಜೈಲಿಗೆ ಕಳುಹಿಸಿದ್ದರ ಹಿಂದೆ ಬಲವಾದ ಷಡ್ಯಂತ್ರವಿದೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.