ADVERTISEMENT

ಅನಿಲ ಸ್ಫೋಟ: 15 ಸಾವು

ಆಂಧ್ರಪ್ರದೇಶದಲ್ಲಿ ‘ಗೇಲ್‌’ ಕೊಳವೆ ಸೋರಿಕೆಯಿಂದ ಭಾರಿ ದುರಂತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2014, 20:00 IST
Last Updated 27 ಜೂನ್ 2014, 20:00 IST

ಹೈದರಾಬಾದ್‌ (ಪಿಟಿಐ /ಐಎಎನ್‌ಎಸ್‌): ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತಕ್ಕೆ (ಗೇಲ್‌–ಜಿಎಐಎಲ್‌) ಸೇರಿದ ಅನಿಲ ಕೊಳವೆ  ಮಾರ್ಗದಲ್ಲಿ  ಶುಕ್ರವಾರ ನಸುಕಿನಲ್ಲಿ ಭಾರಿ ಸ್ಫೋಟ­ದೊಂದಿಗೆ ಸಂಭವಿಸಿದ ಅಗ್ನಿ ದುರಂತದಲ್ಲಿ 15 ಗ್ರಾಮಸ್ಥರು ಸುಟ್ಟು ಕರಕಲಾಗಿದ್ದಾರೆ.

ಅಮಲಾಪುರಂ ಮಂಡಲದ ನಗರಂ ಗ್ರಾಮದಲ್ಲಿ ಬೆಳಗಿನ ಜಾವ 5.30ರ ಸುಮಾರಿಗೆ ಸಂಭವಿಸಿದ ಈ ದುರಂತ­ದಲ್ಲಿ 30 ಮಂದಿ ಗಾಯಗೊಂಡಿದ್ದಾರೆ. ಬೆಂಕಿಯ ಜ್ವಾಲೆಗೆ ತೆಂಗಿನ ತೋಟ ಸೇರಿ­ ಆಸುಪಾಸಿನ ಸುಮಾರು ಹತ್ತು ಎಕರೆ ಕೃಷಿ ಪ್ರದೇಶ ಭಸ್ಮವಾಗಿದೆ. ಹಲ­ವಾರು ಮನೆಗಳು, ಅಂಗಡಿಗಳು, ಪಶು, ಪಕ್ಷಿಗಳು ಸುಟ್ಟು ಬೂದಿಯಾಗಿವೆ.

‘ಭಾರಿ ಸದ್ದು ಕೇಳಿದ್ದೇ ತಡ ನಿದ್ದೆಯ­ಲ್ಲಿದ್ದ ಗ್ರಾಮಸ್ಥರು  ಎದ್ದು ಹೊರಗೆ ಬಂದರು. ಆಗ ಹಲವಾರು ಮೀಟರ್‌ ಎತ್ತರಕ್ಕೆ ಧಗಧಗಿಸುತ್ತಿದ್ದ ಬೆಂಕಿಯ ಝಳಕ್ಕೆ ಸಿಲುಕಿ 15 ಮಂದಿ ಗುರುತಿಸಲಾಗದ ರೀತಿಯಲ್ಲಿ ಸುಟ್ಟು ಕರಕಲಾದರು. ಜ್ವಾಲೆಯ ಕೆನ್ನಾಲಿಗೆ­ಯಿಂದ ತಪ್ಪಿಸಿಕೊಂಡ ಕೆಲವರು ದಿಕ್ಕಾಪಾ­ಲಾಗಿ ಓಡುತ್ತಾ ಸಹಾಯಕ್ಕಾಗಿ ಅಂಗಲಾ­ಚುತ್ತಿದ್ದರು’ ಎಂದು ಪ್ರತ್ಯಕ್ಷದ­ರ್ಶಿಗಳು ಹೇಳಿದ್ದಾರೆ.

ಸತ್ತವರಲ್ಲಿ ಮೂವರು ಮಕ್ಕಳು ಹಾಗೂ ಮೂವರು ಮಹಿಳೆ­ಯರು ಸೇರಿದ್ದಾರೆ. ಗಾಯಗೊಂಡ­ವರಲ್ಲಿ ನಾಲ್ವರು ಮಕ್ಕಳು ಇದ್ದಾರೆ.  15 ಮಂದಿಯ ಸ್ಥಿತಿ ಚಿಂತಾ­­ಜ­ನಕವಾ­ಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ಇವರಿಗೆ ಅಮ­ಲಾಪುರಂ ಹಾಗೂ ಕಾಕಿನಾಡದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ.

ಗ್ರಾಮಸ್ಥರ ಆರೋಪ: ‘ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ತಟಿಪಾಕ ಸಂಸ್ಕರಣ ಘಟಕದ ಬಳಿ ಗೇಲ್‌ಗೆ ಸೇರಿದ 18 ಇಂಚಿನ ಕೊಳವೆ ತುಕ್ಕು ಹಿಡಿದಿತ್ತು. ಅಲ್ಲದೇ ಅನಿಲ ಸೋರಿಕೆಯಿಂದ ವಾಸನೆ ಬರು­ತ್ತಿತ್ತು. ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ತೆಗೆದು­ಕೊಂಡಿರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಅನಾಹುತ ಸಂಭವಿ­ಸಿದೆ’ ಎಂದು ಗ್ರಾಮಸ್ಥರು ಆರೋಪಿ­ಸಿದ್ದಾರೆ.

ಘಟನೆಯಿಂದ ಉದ್ರಿಕ್ತರಾದ ಗ್ರಾಮ­ಸ್ಥರು ಅನಿಲ ದಾಸ್ತಾನು ಕೇಂದ್ರಕ್ಕೆ ಲಗ್ಗೆ ಹಾಕಿ­ದರು. ಅಲ್ಲಿದ್ದ ಕೆಲವು ವಾಹನ­ಗಳನ್ನು ಜಖಂಗೊಳಿಸಿದರು.

‘ನೆಲದಡಿಯ ಈ ಕೊಳವೆ ಮಾರ್ಗದಲ್ಲಿ ತುಕ್ಕು ಹಿಡಿದಿತ್ತು. ಪೂರ್ವ ಗೋದಾವರಿಯಿಂದ ವಿಜಯವಾಡ ಬಳಿಯ 1466 ಮೆಗಾವಾಟ್‌್ ಸಾಮರ್ಥ್ಯದ ಕೊಂಡಪಲ್ಲಿ ವಿದ್ಯುತ್‌ ಸ್ಥಾವರಕ್ಕೆ ಅನಿಲ ಪೂರೈಸುವ ಮಾರ್ಗ ಇದಾಗಿದೆ.  ಘಟನೆಯಿಂದಾಗಿ ಸ್ಥಾವರ ಸ್ಥಗಿತಗೊಂಡಿದೆ.

ಸಿ. ಎಂ. ಸಾಂತ್ವನ: ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ತಮ್ಮ ದೆಹಲಿ ಭೇಟಿ ಮೊಟಕುಗೊಳಿಸಿ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೊಂದಿಗೆ  ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಿರ್ಲ್ಯಕ್ಷ ವಹಿಸಿದ ಗೇಲ್‌ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಪೂರ್ವ ಗೋದಾವರಿ ಜಿಲ್ಲೆಯ ಪಸರ್‌ಲಪುಡಿ ಗ್ರಾಮದಲ್ಲಿನ ಅನಿಲ ಬಾವಿಯಲ್ಲಿ 90ರ ದಶಕದ ಮಧ್ಯಾವಧಿಯಲ್ಲಿ ಕೂಡ ಇಂಥದ್ದೇ ಅಗ್ನಿ ಅನಾಹುತ ನಡೆದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘಟನೆಯ ತನಿಖೆಗೆ ಆದೇಶ ನೀಡಿವೆ.

‘ತುಕ್ಕು ಹಿಡಿದಿದ್ದ ಕೊಳವೆ’: ‘ತುಕ್ಕು ಹಿಡಿದಿದ್ದ ಕೊಳವೆ ಮಾರ್ಗದಲ್ಲಿ ಸಣ್ಣ ಪ್ರಮಾಣದಲ್ಲಿ ಅನಿಲ ಸೋರಿಕೆ­ಯಾಗು­ತ್ತಿತ್ತು. ಆದರೆ ಆ ಜಾಗ  ಯಾವುದು ಎನ್ನುವುದನ್ನು ಪತ್ತೆಹಚ್ಚುವುದು ಕಷ್ಟವಾಯಿತು. ಒಂದೊಮ್ಮೆ ಹಿಂದಿನ ಸಂಜೆಯೇ ಈ ಸೋರಿಕೆಯನ್ನು ನಿಲ್ಲಿಸಿದ್ದಲ್ಲಿ ಅವಘಡ ಸಂಭವಿಸುತ್ತಿರಲಿಲ್ಲ’ ಎಂದು ನವದೆಹಲಿಯಲ್ಲಿ ‘ಗೇಲ್‌’ ಅಧಿಕಾರಿ­ಗಳು ಹೇಳಿದ್ದಾರೆ.

‘ತಟಿಪಾಕ ಸೇರಿದಂತೆ ಎಲ್ಲ ಸಂಸ್ಕರಣ ಘಟಕಗಳು ಸುರಕ್ಷಿತವಾಗಿವೆ. ಆದರೂ,  ಘಟನಾ ಸ್ಥಳದ  ಸುತ್ತಮುತ್ತ ಇರುವ ಘಟಕಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಅನಿಲ ಪೂರೈಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ’ ಎಂದು ಒಎನ್‌ಜಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೊಂಡಪಲ್ಲಿ ಸ್ಥಾವರಕ್ಕೆ ಪರ್ಯಾಯ ಮಾರ್ಗದ ಮೂಲಕ ಅನಿಲ ಪೂರೈಕೆ ಮಾಡಲಾಗುತ್ತಿದೆ’ ಎಂದು ಒಎನ್‌ಜಿಸಿ ನಿರ್ದೇಶಕ ದಿನೇಶ್‌ ಕೆ.ಶರಾಫ್‌ ಹೇಳಿದ್ದಾರೆ.

₨25 ಲಕ್ಷ ಪರಿಹಾರ: ‘ದುರಂತ­ದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₨25 ಲಕ್ಷ ಪರಿಹಾರ ಕೊಡಲಾಗುತ್ತದೆ’ ಎಂದು ಮುಖ್ಯ­ಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಈ ಮೊತ್ತದಲ್ಲಿ ಗೇಲ್‌ನಿಂದ ₨20 ಲಕ್ಷ, ಕೇಂದ್ರದಿಂದ ₨2 ಲಕ್ಷ ಹಾಗೂ ರಾಜ್ಯ ಸರ್ಕಾರಿಂದ ₨3 ಲಕ್ಷ ಸಿಗಲಿದೆ.

ಚಹಾ ಸ್ಟೌನಿಂದ ಬೆಂಕಿ
‘ಚಹಾ ವ್ಯಾಪಾರಿ ಸ್ಟೌ ಹಚ್ಚಿದ್ದು ಅನಿಲ ಕೊಳವೆ ದುರಂತಕ್ಕೆ ಕಾರಣ ಆಗಿರಬಹುದು’ ಎಂದು ಆಂಧ್ರ ಪೊಲೀಸರು ಹೇಳಿದ್ದಾರೆ.

‘ಪ್ರಾಥಮಿಕ ವರದಿ ಪ್ರಕಾರ, ಕೊಳವೆ ಮಾರ್ಗದಲ್ಲಿ ಬೆಳಗಿನ ಜಾವ ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆ­ಯಾಗಿದೆ. ಅದು ಸುತ್ತಮುತ್ತ ಹರಡಿದೆ. ಚಹಾ ವ್ಯಾಪಾರಿ ಸ್ಟೌ ಹಚ್ಚಿದಾಗ ಬೆಂಕಿ ಹೊತ್ತಿಕೊಂಡಿದೆ’ ಎಂದು ಉತ್ತರ ಕರಾವಳಿ ವಲಯದ ಐಜಿಪಿ ಅತುಲ್‌ ಸಿಂಗ್‌ ಹೇಳಿದ್ದಾರೆ.

ಹಿಂದಿನ ಅನಾಹುತಗಳು
* 1995: ಪೂರ್ವ ಗೋದಾವರಿ ಜಿಲ್ಲೆಯ ಪಸ­ರ್ಲಾಪುಡಿ­ಯಲ್ಲಿರುವ ಒಎನ್‌ಜಿಸಿ ಅನಿಲ ಬಾವಿ­ಯಲ್ಲಿ ಸ್ಫೋಟ ಬೆಂಕಿ ಆರಿಸಲು 60 ದಿನ ಹೋರಾಟ.

* 2012: ತಟಿಪಾಕ ಅನಿಲ ಸ್ಥಾವರದ ಬಳಿ ಒಎನ್‌ಜಿಸಿ ಕೊಳವೆ ಮಾರ್ಗದಲ್ಲಿ ಎರಡು ಬಾರಿ ಕಚ್ಚಾ ತೈಲ ಸೋರಿಕೆ.

* 2013: ವಿಶಾಖಪಟ್ಟಣದಲ್ಲಿರುವ ಹಿಂದೂಸ್ತಾನ್‌ ಪೆಟ್ರೋ­ಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಕರಣಾ ಘಟಕ­ದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 28 ಜನರ ಸಾವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.