ADVERTISEMENT

ಅನುಮತಿ ವಿಳಂಬ: ಗಣಿ ಕಂಪೆನಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2014, 19:30 IST
Last Updated 27 ಸೆಪ್ಟೆಂಬರ್ 2014, 19:30 IST

ನವದೆಹಲಿ: ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಕೇಳಿರುವ ಐದು ಗಣಿ ಕಂಪೆನಿಗಳ ಅರ್ಜಿಗಳನ್ನು ವಿಲೇವಾರಿ ಮಾಡಲು ಎಷ್ಟು ಕಾಲಾವ­ಕಾಶ ಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರವನ್ನು ಕೇಳಿತು.

ನ್ಯಾ. ಜೆ.ಎಸ್‌. ಖೇಹರ್ ಅವರ ನೇತೃತ್ವದ ಅರಣ್ಯ ಪೀಠದ ಮುಂದೆ ಐದು ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳು ವಿಚಾರಣೆಗೆ ಬಂದಾಗ, ರಾಜ್ಯ ಸರ್ಕಾರ ಗಣಿ ಗುತ್ತಿಗೆಗೆ ಅನುಮತಿ ನೀಡಲು ತೀವ್ರ ವಿಳಂಬ ಮಾಡುತ್ತಿದೆ ಎಂದು ಗಣಿ ಕಂಪೆನಿಗಳ ವಕೀಲರು ಆರೋಪಿಸಿದರು.

ಗಣಿ ಕಂಪೆನಿಗಳು ಗಣಿಗಾರಿಕೆಗೆ ಅನುಮತಿ ಕೇಳಿ­ರುವುದು ಪಟ್ಟಾ ಜಮೀನಿನಲ್ಲಿ ವಿನಾ ಅರಣ್ಯ ಭೂಮಿ­ಯಲ್ಲಿ ಅಲ್ಲ. 2001ರಲ್ಲಿ ಅರ್ಜಿ ಸಲ್ಲಿಸಲಾಗಿದ್ದರೂ, ಇದುವರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂದು ಗಣಿ ಕಂಪೆನಿಗಳು ದೂರಿದವು.

ನ್ಯಾಯಪೀಠ ಈ ಹಂತದಲ್ಲಿ,  ಅರ್ಜಿಗಳ ಮೇಲೆ ಕ್ರಮ ಕೈಗೊಳ್ಳಲು ಇನ್ನೆಷ್ಟು ಸಮಯ ಬೇಕು ಎಂದು ರಾಜ್ಯದ ವಕೀಲರಾದ ಅನಿತಾ ಶೆಣೈ ಅವರನ್ನು ಪ್ರಶ್ನಿಸಿತು.

‘ಇದು ಸರ್ಕಾರದ ನೀತಿಗೆ ಸಂಬಂಧಪಟ್ಟ ವಿಷಯ. ಈ ಬಗ್ಗೆ ಏನಾದರೂ ಹೇಳುವ ಮುನ್ನ ರಾಜ್ಯ ಸರ್ಕಾರದಿಂದ ನಿರ್ದೇಶನ ಪಡೆಯಬೇಕು. ಅದಕ್ಕೆ ಸ್ವಲ್ಪ ಸಮಯ ಬೇಕಾಗಲಿದೆ’ ಎಂದು ಅನಿತಾ ಹೇಳಿದರು.

‘ನಿಮಗೆ ಎಷ್ಟು ಸಮಯ ಬೇಕು?’ ಎಂದು ಕೋರ್ಟ್‌ ಕೇಳಿತು. ದಸರಾ ರಜೆ ಬಳಿಕ ಹೇಳುವುದಾಗಿ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.  ಗಣಿ ಕಂಪೆನಿಗಳ ಅರ್ಜಿಯನ್ನು ರಜೆ ಬಳಿಕ ವಿಚಾರಣೆಗೆ ಪಟ್ಟಿ ಮಾಡುವಂತೆ ನ್ಯಾಯಾಲಯ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.