ADVERTISEMENT

ಅಮಾನತು ಖಂಡಿಸಿ ಸಾಮೂಹಿಕ ಬಹಿಷ್ಕಾರ

25 ಕಾಂಗ್ರೆಸ್‌ ಸದಸ್ಯರನ್ನು ವಾಪಸ್‌ ತೆಗೆದುಕೊಳ್ಳಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2015, 10:11 IST
Last Updated 4 ಆಗಸ್ಟ್ 2015, 10:11 IST

ನವದೆಹಲಿ (ಪಿಟಿಐ): ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್‌ನ 25 ‌ ಸದಸ್ಯರನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಅಮಾನತು ಮಾಡಿರುವುದನ್ನು ಖಂಡಿಸಿ ಮಂಗಳವಾರ ಲೋಕಸಭೆಯಲ್ಲಿ  9 ವಿರೋಧ ಪಕ್ಷಗಳು ಒಟ್ಟಾಗಿ ಪ್ರತಿಭಟನೆ ನಡೆಸಿ ಸಾಮೂಹಿಕವಾಗಿ ಕಲಾಪ ಬಹಿಷ್ಕರಿಸಿದವು.

ಸದನ ಸೇರುತ್ತಿದ್ದಂತೆ ಎಡಪಕ್ಷ, ಎಸ್‌ಪಿ, ಮತ್ತು ಆರ್‌ಜೆಡಿ ಪಕ್ಷದ ಸದಸ್ಯರು  ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಾ ಹೊರನಡೆದರು.
ಮಂಗಳವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಎಡಪಕ್ಷಗಳು, ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ಬಳಿ ಕೆಲವು ವಿಷಯಗಳ ಕುರಿತು ಚರ್ಚೆಯಾಗಬೇಕು ಎಂದು ಆಗ್ರಹಿಸಿದರು. ಆದರೆ, ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿದ ಸ್ಪೀಕರ್‌, ತಕ್ಷಣದ ಚರ್ಚೆಗೆ ಅವಕಾಶ ನಿರಾಕರಿಸಿದರು. ಕೂಡಲೇ ಕಲಾಪವನ್ನು ಮುಂದೂಡಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು.

ಆದರೆ, ಈ ಬೇಡಿಕೆಯನ್ನೂ ನಿರಾಕರಿಸಲಾಯಿತು.  ಇದನ್ನು ಪ್ರತಿಭಟಿಸಿ ಎಸ್‌ಪಿ, ಟಿಎಂಸಿ ಮತ್ತು ಆರ್‌ಜೆಡಿ ಸದಸ್ಯರು ಸದನದಿಂದ ಹೊರನಡೆದರು. ಸ್ವಲ್ಪ ಸಮಯದಲ್ಲೇ ವಿರೋಧ ಪಕ್ಷಗಳ ಸಾಲಿನ ಸೀಟುಗಳೆಲ್ಲ ಖಾಲಿಯಾದವು. ಎಐಎಡಿಎಂಕೆ ಮುಖಂಡ ಪಿ. ವೇಣುಗೋಪಾಲ್‌ ಮಾತ್ರ ವಿರೋಧ ಪಕ್ಷಗಳ ಸಾಲಿನಲ್ಲಿ ಇದ್ದರು.

ಇದರ ಬೆನ್ನಿಗೇ, ಪ್ರಶ್ನೋತ್ತರ ವೇಳೆಯಲ್ಲಿ, ಆರ್‌ಜೆಡಿಯ ಜೈ ಪ್ರಕಾಶ್‌ ನಾರಾಯಣ್‌ ಯಾದವ್‌,  ಅಮಾನತು ಮಾಡಿರುವ ಕಾಂಗ್ರೆಸ್‌ನ 25 ‌ ಸದಸ್ಯರನ್ನು  ವಾಪಸ್‌ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಎಸ್‌ಪಿ ಮತ್ತು ಎಡಪಕ್ಷಗಳು ಇದಕ್ಕೆ ಧ್ವನಿಗೂಡಿಸಿದವು.

25 ಕಾಂಗ್ರೆಸ್ ಸದಸ್ಯರನ್ನು 5 ದಿನಗಳ ಅವಧಿಗೆ ಅಮಾನತು ಮಾಡುವುದರೊಂದಿಗೆ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ 5 ದಿನವೂ ಕಲಾಪ ಬಹಿಷ್ಕರಿಸಲು 9 ವಿರೋಧ ಪಕ್ಷಗಳು ತೀರ್ಮಾನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.