ADVERTISEMENT

ಆಗಬೇಕಾದ ಕೆಲಸ ಸಾಕಷ್ಟಿದೆ

ಎನ್‌ಡಿಎ ಸರ್ಕಾರಕ್ಕೆ 1 ವರ್ಷ: ಸಾರ್ವಜನಿಕರಿಗೆ ನರೇಂದ್ರ ಮೋದಿ ಬಹಿರಂಗ ಪತ್ರ

​ಪ್ರಜಾವಾಣಿ ವಾರ್ತೆ
Published 26 ಮೇ 2015, 19:30 IST
Last Updated 26 ಮೇ 2015, 19:30 IST

ನವದೆಹಲಿ (ಪಿಟಿಐ): ಎನ್‌ಡಿಎ ಸರ್ಕಾರ ಒಂದು ವರ್ಷ ಪೂರೈಸಿದ ವೇಳೆ ಸಾರ್ವಜನಿಕರಿಗೆ ಬರೆದಿರುವ ಎರಡು ಪತ್ರಗಳಲ್ಲಿ ಸಾಧನೆಯ ವರದಿ  ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಜನ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾವು ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ’ ಎಂದಿದ್ದಾರೆ.

ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಂಡ ಕ್ರಮಗಳಿಂದ ಹಿಡಿದು ಬಡವರಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳವರೆಗೆ ಸರ್ಕಾರವು ಒಂದು ವರ್ಷದಲ್ಲಿ ಮಾಡಿದ ಕೆಲಸಗಳನ್ನು ಅವರು ಪಟ್ಟಿ ಮಾಡಿದ್ದಾರೆ. ‘ನಮ್ಮ ಸರ್ಕಾರವು ಅತ್ಯಂತ ವ್ಯವಸ್ಥಿತವಾಗಿ ಸವಾಲುಗಳನ್ನು ಎದುರಿಸುತ್ತಿದೆ. ಜೀವನ ಮಟ್ಟ, ಮೂಲಸೌಕರ್ಯ ಹಾಗೂ ಸೇವೆಗಳನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

‘ಇದು ಕೇವಲ ಆರಂಭ. ಸಾಗ ಬೇಕಾದ ದಾರಿ ದೂರ ಇದೆ. ನೀವು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ ಎನ್ನುವುದನ್ನು ನಾನು ಬಲ್ಲೆ. ವರ್ಷದ ಹಿಂದೆ ನೀವು ಕೊಟ್ಟ ಹೊಣೆಗಾರಿಕೆಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವುದಕ್ಕೆ ನನ್ನ ದೇಹದ ಕಣಕಣವನ್ನೂ ಮೀಸಲಿಟ್ಟಿದ್ದೇನೆ’ ಎಂದಿದ್ದಾರೆ.

‘ದೇಶವು ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದ  ಸಂದರ್ಭದಲ್ಲಿ ನಾವು ಅಧಿಕಾರ ಸೂತ್ರ ಹಿಡಿದೆವು.  ಹಣದುಬ್ಬರ ಹಾಗೂ ಆರ್ಥಿಕ ಅಭದ್ರತೆಯಿಂದ ಜನ ಹತಾಶರಾಗಿದ್ದರು. ಇಂಥ ಸನ್ನಿವೇಶದಲ್ಲಿ ತುರ್ತಾಗಿ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯ ಇತ್ತು’ ಎಂದು ಪ್ರಧಾನಿ ಹೇಳಿದ್ದಾರೆ.

‘ಒಂದು ವರ್ಷದಲ್ಲಿ ದೇಶದ ಆರ್ಥಿಕತೆಯು ಚೇತರಿಸಿಕೊಂಡಿದೆ. ಹಣದುಬ್ಬರ ಇಳಿಕೆಯಾಗಿದೆ. ವಿದೇಶಿ ಹೂಡಿಕೆ ಹೆಚ್ಚಾಗಿದೆ. ಡೀಸೆಲ್‌ ಮೇಲಿನ ಸರ್ಕಾರಿ ನಿಯಂತ್ರಣವನ್ನು ತೆಗೆದುಹಾಕಲಾಗಿದೆ. ವಿಮೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿ ಹೆಚ್ಚಿಸಲಾಗಿದೆ. ಇದೀಗ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರಲು  ಪ್ರಯತ್ನಿಸಲಾಗುತ್ತಿದೆ’ ಎಂದೂ ತಿಳಿಸಿದ್ದಾರೆ.

ಕಿಸಾನ್‌ ಚಾನೆಲ್‌ ಉದ್ಘಾಟನೆ:  ಮೋದಿ ಅವರು ರೈತರಿಗಾಗಿ ದೂರದರ್ಶನದ ‘ಕಿಸಾನ್‌ ಚಾನೆಲ್‌’ ಉದ್ಘಾಟಿಸಿದರು.
ರೈತರು ಪ್ರಗತಿ ಸಾಧಿಸದೇ ದೇಶ ಮುನ್ನಡೆಯಲು ಸಾಧ್ಯವಿಲ್ಲ. ಗ್ರಾಮಗಳು ಅಭಿವೃದ್ಧಿ ಸಾಧಿಸಿದರೆ ಮಾತ್ರ ದೇಶ ಮುನ್ನಡೆಯುತ್ತದೆ ಎಂದರು.

ಜನ ಬಯಸಿದ್ದು ನಿಸ್ವಾರ್ಥ ನಾಯಕತ್ವ.  (ಸೆಲ್ಫ್‌ಲೆಸ್‌ ಲೀಡರ್‌ಶಿಪ್‌) ಆದರೆ ದೊರೆತಿರುವುದು ‘ಸೆಲ್ಫಿ’ ನಾಯಕತ್ವ
ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT