ADVERTISEMENT

ಆದೇಶಕ್ಕೆ ತಡೆ ನೀಡಲು ‘ಸುಪ್ರೀಂ’ ನಕಾರ

ಜಾಟ್ ಸಮುದಾಯಕ್ಕೆ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2014, 19:30 IST
Last Updated 9 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಜಾಟ್ ಸಮು­ದಾ­ಯ­ವನ್ನು ಇತರೆ ಹಿಂದುಳಿದ ಜಾತಿಯ (ಒಬಿಸಿ) ಮೀಸಲಾತಿ ಸೌಲ­ಭ್ಯದ ವ್ಯಾಪ್ತಿಗೆ ಒಳಪಡಿಸಿ ಹೊರಡಿಸಿದ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಸುಪ್ರೀಂ­ಕೋರ್ಟ್, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸು­ವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕೇಂದ್ರ ಸರ್ಕಾರದ ಆದೇಶಕ್ಕೆ ತಡೆ­ಯಾಜ್ಞೆ ನೀಡುವಂತಹ ಯಾವುದೇ ಅಂಶ­ಗಳೂ ಕಂಡುಬರುತ್ತಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಪಿ. ಸದಾ­ಶಿವಂ, ನ್ಯಾಯಮೂರ್ತಿಗಳಾದ ರಂಜನ್ ಗಗೋಯಿ ಮತ್ತು ಎನ್‌. ವಿ. ರಮಣಾ ಅವ­ರನ್ನು ಒಳಗೊಂಡ ನ್ಯಾಯಪೀಠವು ತಿಳಿಸಿದೆ.

ನಿರ್ದಿಷ್ಟ ಸಮುದಾಯದ ಮತ­ದಾರರನ್ನು ಓಲೈಸುವ ಉದ್ದೇಶದಿಂದ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಒಂದು ದಿನ ಮೊದಲು ಅಂದರೆ ಮಾರ್ಚ್ 4ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದ್ದರಿಂದ ಈ ಅಧಿಸೂಚನೆಗೆ ತಡೆಯಾಜ್ಞೆ ನೀಡ­ಬೇಕು ಎಂದು ಒಬಿಸಿ ಮೀಸಲಾತಿ ರಕ್ಷಾ ಸಮಿತಿಯ ಪರ ವಕೀಲ ಕೆ. ಕೆ. ವೇಣು­ಗೋಪಾಲ್ ವಾದಿಸಿದರು.

ಮಾದರಿ ನೀತಿ ಸಂಹಿತೆ ಜಾರಿ­ಯಾಗುವ ಒಂದು ದಿನ ಮೊದಲು ಅಧಿಸೂಚನೆ ಹೊರಡಿಸಿರುವ ಸರ್ಕಾರದ ನಿರ್ಧಾರದಲ್ಲಿ ಈಗ ಹಸ್ತಕ್ಷೇಪ ಮಾಡು­ವುದಿಲ್ಲ ಎಂದು ನ್ಯಾಯಪೀಠ ತಿಳಿಸಿತು.

ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಲಾಗಿದ್ದು, ಕೇಂದ್ರದ ಪ್ರತಿಕ್ರಿಯೆ ಬಂದ ನಂತರ ನಾಲ್ಕು ದಿನಗಳಲ್ಲಿ ಅದಕ್ಕೆ ಉತ್ತರ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ನಿರ್ದೇಶನ ನೀಡಿ ಮುಂದಿನ ವಿಚಾರಣೆಯನ್ನು ಮೇ1ಕ್ಕೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.