ADVERTISEMENT

ಆಧಾರ್‌ ಕಡ್ಡಾಯವಲ್ಲ: ‘ಸುಪ್ರೀಂ’

ಪಿಟಿಐ
Published 27 ಮಾರ್ಚ್ 2017, 19:51 IST
Last Updated 27 ಮಾರ್ಚ್ 2017, 19:51 IST
ಆಧಾರ್‌ ಕಡ್ಡಾಯವಲ್ಲ: ‘ಸುಪ್ರೀಂ’
ಆಧಾರ್‌ ಕಡ್ಡಾಯವಲ್ಲ: ‘ಸುಪ್ರೀಂ’   

ನವದೆಹಲಿ: ಸಾಮಾಜಿಕ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಆದರೆ ಬ್ಯಾಂಕ್‌ ಖಾತೆ ತೆರೆಯುವುದು, ಆದಾಯ ತೆರಿಗೆ ಲೆಕ್ಕ ಸಲ್ಲಿಸುವುದು ಸೇರಿದಂತೆ ಸಾಮಾಜಿಕ ಕಲ್ಯಾಣ ಉದ್ದೇಶ ಹೊಂದಿಲ್ಲದ ಯೋಜನೆಗಳಿಗೆ ಆಧಾರ್‌ ಸಂಖ್ಯೆ ಪಡೆಯುವುದನ್ನು ನಿಲ್ಲಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಸ್.ಕೆ. ಕೌಲ್ ಅವರು ಈ ಪೀಠದಲ್ಲಿದ್ದಾರೆ.

ADVERTISEMENT

ನಾಗರಿಕರ ಖಾಸಗಿತನದ ಹಕ್ಕನ್ನು ಆಧಾರ್‌ ಯೋಜನೆ ಉಲ್ಲಂಘಿಸುತ್ತದೆ ಎಂಬ ದೂರು ಸೇರಿದಂತೆ ಈ ಯೋಜನೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ದಿನ ನಿಗದಿ ಮಾಡಲು ಪೀಠ ನಿರಾಕರಿಸಿತು.

‘ಈ ಅರ್ಜಿಗಳ ವಿಚಾರಣೆಗೆ ಏಳು ನ್ಯಾಯಮೂರ್ತಿಗಳ ಪೀಠ ರಚನೆ ಆಗಬೇಕು. ಆದರೆ, ಅದನ್ನು ರಚಿಸಲು ಈಗ ಆಗದು. ಬೇರೆ ಮೂರು ವಿಷಯಗಳ ಬಗ್ಗೆ ಸಂವಿಧಾನ ಪೀಠ ವಿಚಾರಣೆ ನಡೆಸಬೇಕಿದೆ. ಒಂದಾದ ನಂತರ ಒಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು’ ಎಂದು ತ್ರಿಸದಸ್ಯ ಪೀಠ ತಿಳಿಸಿತು.

ಆಧಾರ್‌ ಸಂಖ್ಯೆ ನೀಡುವುದು ಐಚ್ಛಿಕವಾಗಿರಬೇಕೇ ವಿನಾ ಅದು ಕಡ್ಡಾಯ ಆಗಬಾರದು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳನ್ನು ಸರ್ಕಾರ ಪಾಲಿಸುತ್ತಿಲ್ಲ ಎಂದು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್ ದೂರಿದರು.

ವಾಹನ ಚಾಲನಾ ಪರವಾನಗಿ ಪಡೆಯಲು, ಆದಾಯ ತೆರಿಗೆ ವಿವರ ಸಲ್ಲಿಸಲು ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ನ್ಯಾಯಾಂಗ ನಿಂದನೆಗೆ ಸಮ ಎಂದು ದಿವಾನ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.