ADVERTISEMENT

ಆಭರಣ ವ್ಯಾಪಾರ ಸಂಸ್ಥೆಯಿಂದ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ಗೆ ₹390 ಕೋಟಿ ವಂಚನೆ: ಸಿಬಿಐನಿಂದ ಪ್ರಕರಣ ದಾಖಲು

ಏಜೆನ್ಸೀಸ್
Published 24 ಫೆಬ್ರುವರಿ 2018, 5:33 IST
Last Updated 24 ಫೆಬ್ರುವರಿ 2018, 5:33 IST

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ(ಪಿಎನ್‌ಬಿ) ನೀರವ್ ಮೋದಿಯಿಂದ ವಂಚನೆ ಹಾಗೂ ರೊಟೊಮ್ಯಾಕ್‌ ಪೆನ್‌ ಕಂಪನಿಯ ಪ್ರವರ್ತಕರಿಂದ ಏಳು ಬ್ಯಾಂಕುಗಳಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಆಭರಣ ವ್ಯಾಪಾರಿ ಸಂಸ್ಥೆ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ಗೆ ವಂಚಿಸಿದ ಮತ್ತೊಂದು ಪ್ರಕರಣ ಹೊರಬಿದ್ದಿದೆ.

ಆಭರಣ ವ್ಯಾಪಾರಿ ಸಂಸ್ಥೆ ಬ್ಯಾಂಕಿಗೆ ವಂಚನೆ ಮಾಡಿದೆ ಎಂದು ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ದೂರು ನೀಡಿದ ಆರು ತಿಂಗಳ ಬಳಿಕ ಸಿಬಿಐ ದೆಹಲಿ ಮೂಲದ ಆಭರಣ ವ್ಯಾಪಾರ ಸಂಸ್ಥೆ ವಿರುದ್ಧ ₹390 ಕೋಟಿ ವಂಚನೆ ಪ್ರಕರಣ ದಾಖಲಿಸಿಕೊಂಡಿದೆ.

ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಕರಾಲ್ ಬಾಗ್ ಮೂಲದ ದ್ವಾರಕಾ ದಾಸ್ ಸೇಠ್ ಸಂಸ್ಥೆ ವಿರುದ್ಧ ಸಿಬಿಐ ಗುರುವಾರ ಪ್ರಕರಣ ದಾಖಲಿಸಿಕೊಂಡಿದೆ.

ADVERTISEMENT

ಒಬಿಸಿಯ ಗ್ರೇಟರ್ ಕೈಲಾಶ್ -2 ಶಾಖೆಯಿಂದ 2007ರಿಂದ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲಾಗಿತ್ತು.

ಪಂಜಾಬ್‌ನ ಬಾಗ್‌ ನಿವಾಸಿಗಳಾದ ಸಭಯ್‌ ಸೇಠ್‌ ಹಾಗೂ ರೀಟಾ ಸೇಠ್‌ ಮತ್ತು ಸರಯಿ ಕಲೇ ಖಾನ್‌ ನಿವಾಸಿಗಳಾದ ಕೃಷ್ಣಕುಮಾರ್‌ ಸಿಂಗ್‌ ಮತ್ತು ರವಿಕುಮಾರ್ ಸಿಂಗ್‌ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಎಲ್ಲರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.