ADVERTISEMENT

ಆಯೋಗದ ಗಮನಕ್ಕೆ ಸೇನಾ ಮುಖ್ಯಸ್ಥರ ನೇಮಕ

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:30 IST
Last Updated 2 ಮೇ 2014, 19:30 IST

ನವದೆಹಲಿ (ಪಿಟಿಐ):  ಹೊಸ ಸೇನಾ ಮುಖ್ಯಸ್ಥರ ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತ­ವಾಗಿರು­ವಂತೆಯೇ, ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದ್ದು ಆಯೋಗದ ಒಪ್ಪಿಗೆ ದೊರೆತ ನಂತರವೇ ನಿರ್ಧಾರ ಕೈಗೊಳ್ಳ­ಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

ಮುಂದಿನ ಸೇನಾ ಮುಖ್ಯಸ್ಥರ ನೇಮ­ಕದ ಸ್ಥಿತಿಗತಿ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ಎ.ಕೆ. ಆಂಟನಿ, ‘ಈ ವಿಚಾರವು ಚುನಾ­ವಣಾ ಆಯೋಗದ ಮುಂದಿದೆ. ಯಾವುದೇ ಅಂತಿಮ ನಿರ್ಧಾರ ಕೈಗೊ­ಳ್ಳು­ವು­ದಕ್ಕೂ ಮುನ್ನ ಎಲ್ಲಾ ನಿಯಮ­ಗಳನ್ನು ಪಾಲಿಸುವುದನ್ನು ನಾವು ಬಯ­ಸುತ್ತೇವೆ’ ಎಂದು ಹೇಳಿದರು.

ಈಗ ನಡೆಯುತ್ತಿರುವ ಚುನಾವಣೆ ಸಂದರ್ಭದಲ್ಲಿ ಹಾಗೂ ಭವಿಷ್ಯದಲ್ಲಿ ಕೂಡ ನೇಮಕಗಳು, ಬಡ್ತಿ, ಖರೀದಿ ಸೇರಿ­ದಂತೆ ಸರ್ಕಾರ ಕೈಗೊಳ್ಳುವ ನಿರ್ಧಾರ­ಗಳು ಚುನಾವಣಾ ನೀತಿ–ಸಂಹಿತೆ ವ್ಯಾಪ್ತಿಗೆ ಬರುವು­ದಿಲ್ಲ ಎಂದು ಆಯೋಗ ಈಗಾಗಲೇ ಹೇಳಿದ್ದರೂ, ಸೇನಾ­ ಮುಖ್ಯ­ಸ್ಥರ ನೇಮಕ ವಿಚಾರ­ವನ್ನು ರಕ್ಷಣಾ ಸಚಿ­ವಾ­ಲಯ ಈ ವಾರದ ಆರಂಭದಲ್ಲಿ ಆಯೋಗಕ್ಕೆ ಕಳುಹಿಸಿತ್ತು.

ಆಡಳಿತ ಕೊನೆಗೊಳ್ಳಲು ಇನ್ನೇನು ಕೆಲವೇ ದಿನಗಳು ಇರುವಾಗ ಈಗಿನ ಸರ್ಕಾರ ನೂತನ ಸೇನಾ ಮುಖ್ಯಸ್ಥರನ್ನು ನೇಮಿಸಲು ಮುಂದಾಗಿರುವುದನ್ನು ಬಿಜೆಪಿ ವಿರೋಧಿಸುತ್ತಿದೆ.

ನೇಮಕಕ್ಕೆ ಆತುರ ತೋರುವ ಅಗತ್ಯ­ವಿಲ್ಲ. ಈ ವಿಚಾರವನ್ನು ಹೊಸ ಸರ್ಕಾ­ರಕ್ಕೆ ಬಿಡಬೇಕು ಎಂದು ಬಿಜೆಪಿ ವಾದಿಸುತ್ತಿದೆ. ಸೇನಾ ಮುಖ್ಯಸ್ಥ ಜನರಲ್‌ ಬಿಕ್ರಮ್‌ ಸಿಂಗ್‌ ಅವರ ಅಧಿಕಾರಾವಧಿ ಜುಲೈ 31ರಂದು ಕೊನೆಗೊಳ್ಳಲಿದ್ದು, ನೂತನ ಮುಖ್ಯಸ್ಥರ ಹುದ್ದೆಗೆ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ಹೆಸರು ಮುಂಚೂಣಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.