ADVERTISEMENT

ಆರೋಪಿ ಬಾಲಕರಿಗೆ 3 ಬಿಂದಿಗೆ ಸಾರಾಯಿ ದಂಡ

ಆದಿವಾಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2014, 19:30 IST
Last Updated 2 ಜೂನ್ 2014, 19:30 IST

ಸುರಿ/ಪಶ್ಚಿಮ ಬಂಗಾಳ (ಪಿಟಿಐ): ಬೀರ್‌ಭೂಮ್‌ ಜಿಲ್ಲೆ­ಯಲ್ಲಿ ಆದಿವಾಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆ­ಸಿದ ಆರೋಪ ಎದುರಿಸುತ್ತಿರುವ ಮೂವರು ಬಾಲಕರ ಪೈಕಿ ಇಬ್ಬರನ್ನು ಬಾಲ ನ್ಯಾಯ ಮಂಡಳಿ ಜೂನ್‌ 13ರ ವರೆಗೆ ಸರ್ಕಾರಿ ಪಾಲನಾ ಗೃಹಕ್ಕೆ  ಕಳುಹಿಸಿದೆ.

ಐಪಿಸಿ ಸೆಕ್ಷನ್‌ 164ರ ಅಡಿ ನ್ಯಾಯಾಲಯದ ಸಮ್ಮುಖದಲ್ಲಿ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಬೇಕೆಂಬ ಪೊಲೀಸರ ಕೋರಿಕೆಯನ್ನು ಮಂಡಳಿ ಮಾನ್ಯ ಮಾಡಿದೆ.

‘ಮೇ 29ರಂದು ಇತರ ಬಾಲಕರು ಮತ್ತು ಬಾಲಕಿಯರೊಂದಿಗೆ ಆಟ ಆಡುತ್ತಿದ್ದೆವು. ನಾವು ಮೂವರು ಬಾಲಕರು ಬಾಲಕಿಯ ಮೇಲೆ ಹಾರಿದೆವು. ಈ ವೇಳೆ ಬಾಲಕಿ ಕೆಳಗೆ ಬಿದ್ದು ಗಾಯಗೊಂಡಿದ್ದಳು. ಇದಕ್ಕಿಂತ ಹೆಚ್ಚಿನದೇನೂ ನಡೆಯಲಿಲ್ಲ’ ಎಂದು ಪಾಲನಾ ಗೃಹಕ್ಕೆ ಕಳುಹಿಸಿರುವ ಇಬ್ಬರು ಬಾಲಕರ ಪೈಕಿ ಕಪಿಸ್ತಾ ಗ್ರಾಮದಲ್ಲಿ ಭಾನುವಾರ ಬಂಧಿಸಲಾಗಿರುವ 16 ವರ್ಷದ ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆಯು ಮೇ 30ರಂದು ಹಿರಿಯರ ಪಂಚಾಯತಿಗೆ (ಸಾಲಿಷಿ ಸಭಾ ಅಥವಾ ಮೊರೊಲ್‌) ತೆರಳಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದರು.  ಬಳಿಕ ಪಂಚಾಯತಿಯು  ಸಭೆ ಸೇರಿ ಮೂವರು ಬಾಲಕರು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಪೋಷಕರಿಗೆ ಮೂರು ಬಿಂದಿಗೆ ಸಾರಾಯಿಯನ್ನು ದಂಡವಾಗಿ ನೀಡುವ ಶಿಕ್ಷೆ ವಿಧಿಸಿತು.

 ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿತು. ‘ನ್ಯಾಯ ಕೋರಿ ಪಂಚಾಯಿತಿಗೆ ಮೊರೆ ಹೋದದ್ದು ನಿಜ. ಆದರೆ, ಹಣದ ಬೇಡಿಕೆ ಇಟ್ಟಿರಲಿಲ್ಲ’ ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಬಳಿ ತೆರಳದಂತೆ ತಡೆ ಒಡ್ಡಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.