ADVERTISEMENT

ಆರ್ಥಿಕತೆ ಪುನಶ್ಚೇತನಕ್ಕೆ ಪ್ಯಾಕೇಜ್‌?

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 19:41 IST
Last Updated 23 ಸೆಪ್ಟೆಂಬರ್ 2017, 19:41 IST
ಆರ್ಥಿಕತೆ ಪುನಶ್ಚೇತನಕ್ಕೆ ಪ್ಯಾಕೇಜ್‌?
ಆರ್ಥಿಕತೆ ಪುನಶ್ಚೇತನಕ್ಕೆ ಪ್ಯಾಕೇಜ್‌?   

ನವದೆಹಲಿ: ಬಿಜೆಪಿಯ ವಿಶೇಷ ಸಮಾವೇಶ ಸೋಮವಾರ ನಡೆಯಲಿದ್ದು ಸಂಕಷ್ಟದಲ್ಲಿರುವ ಕೆಲವು ಪ್ರಮುಖ ಕ್ಷೇತ್ರಗಳಿಗೆ ಸರ್ಕಾರ ನೀಡಲಿರುವ ಉತ್ತೇಜನ ಪ್ಯಾಕೇಜ್‌ ಬಗ್ಗೆ ಅಲ್ಲಿ ಪ‍್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಂಘ ಪರಿವಾರದ ಮೂಲ ಪುರುಷರಲ್ಲಿ ಒಬ್ಬರಾದ ದೀನ ದಯಾಳ್‌ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವ ಸಲುವಾಗಿ ವಿಶೇಷ ಸಮಾವೇಶವನ್ನು ಬಿಜೆಪಿ ಏರ್ಪಡಿಸಿದೆ.

2017–18ರ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿಯ ದರ ಶೇ 5.7ಕ್ಕೆ ಕುಸಿದಿದೆ. ಇದು ಕಳೆದ ಮೂರೂ ವರ್ಷಗಳಲ್ಲಿಯೇ ಅತ್ಯಂತ ಕಡಿಮೆ. ಹಾಗಾಗಿ ಕೆಲವು ಕ್ಷೇತ್ರಗಳಿಗೆ ಸರ್ಕಾರವು ಉತ್ತೇಜನ ಪ್ಯಾಕೇಜ್ ಘೋಷಿಸುವ ನಿರೀಕ್ಷೆ ಇದೆ.

ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಅಧಿಕಾರಿಗಳು ಮತ್ತು ಅರ್ಥಶಾಸ್ತ್ರಜ್ಞರ ಜತೆ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ. ಪ್ರದಾನಿ ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ ಅರ್ಥ ವ್ಯವಸ್ಥೆಗೆ ಉತ್ತೇಜನ ಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಜೇಟ್ಲಿ ಇತ್ತೀಚೆಗೆ ಹೇಳಿದ್ದರು.

ADVERTISEMENT

ಸರ್ಕಾರ ಹೆಚ್ಚು ಖರ್ಚು ಮಾಡಬೇಕು ಮತ್ತು ಆ ಮೂಲಕ ಖಾಸಗಿ ಕ್ಷೇತ್ರದ ಹೂಡಿಕೆ ಹೆಚ್ಚಲು ನೆರವಾಗಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಸಿ.ರಂಗರಾಜನ್‌ ಮತ್ತು ಇತರ ಅರ್ಥಶಾಸ್ತ್ರ‌ಜ್ಞರು ಹೇಳಿದ್ದಾರೆ. ವಿದ್ಯುತ್‌, ವಸತಿ, ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಿಗೆ ಪ್ರಧಾನಿ ಪ್ಯಾಕೇಜ್‌ ಘೋಷಿಸುವ ಸಾಧ್ಯತೆ ಇದೆ. ಇದು ಉದ್ಯೋಗ ಅವಕಾಶ ಹೆಚ್ಚಿಸುವುದಲ್ಲದೆ ಗ್ರಾಹಕ ವಸ್ತುಗಳಿಗೆ ಬೇಡಿಕೆ ಸೃಷ್ಟಿಸಲಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಮನೆಗಳಿಗೂ 2019ರೊಳಗೆ ವಿದ್ಯುತ್‌ ಸಂಪರ್ಕ ಒದಗಿಸುವುದಕ್ಕಾಗಿ ಪ್ರಧಾನಿ ಯೋಜನೆಯೊಂದನ್ನು ಪ್ರಕಟಿಸಲಿ
ದ್ದಾರೆ ಎಂಬ ಸುಳಿವನ್ನು ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ನೀಡಿದ್ದಾರೆ.

ಆರ್ಥಿಕ ಪ್ರಗತಿ ಕುಸಿಯುತ್ತಿರುವುದರ ಬಗ್ಗೆ ಬಿಜೆಪಿಯೊಳಗೆ ಅತೃಪ್ತಿ ಇದೆ. ಅರ್ಥ ವ್ಯವಸ್ಥೆಯು ಭಾರಿ ಹಿಂಜರಿತದತ್ತ ಸಾಗುತ್ತಿದೆ ಎಂದು ಪಕ್ಷದ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ 16 ಪುಟಗಳ ಪತ್ರವನ್ನು ಪ್ರಧಾನಿಗೆ ಬರೆದು ಹಲವು ಸಲಹೆಗಳನ್ನು ನೀಡಿದ್ದಾಗಿ ಹೇಳಿದ್ದಾರೆ.

‘ಅರ್ಥ ವ್ಯವಸ್ಥೆ ಕುಸಿಯುತ್ತಿರುವಂತೆ ಕಾಣಿಸುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿಯಲು ಬಿಡಬಾರದು. ಸರಿಯಾದ ಆರ್ಥಿಕ ನೀತಿ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಬಲ್ಲುದು’ ಎಂದು ಆರ್‌ಎಸ್‌ಎಸ್‌ ಮುಖಂಡಎಸ್‌. ಗುರುಮೂರ್ತಿ ಹೇಳಿದ್ದಾರೆ. ಇವರು ಕಳೆದ ವರ್ಷದ ನೋಟು ರದ್ದತಿಯನ್ನು ಬೆಂಬಲಿಸಿದ್ದರು.

‘ಒಂದರ ಹಿಂದೆ ಒಂದರಂತೆ ಅರ್ಥ ವ್ಯವಸ್ಥೆಯನ್ನು ಅಲ್ಲಾಡಿಸುವಂತಹ ನಿರ್ಧಾರಗಳನ್ನು ಕೈಗೊಂಡಿದ್ದು ಈಗಿನ ಸ್ಥಿತಿಗೆ ಕಾರಣ. ನೋಟು ರದ್ದತಿ, ವಸೂಲಾಗದ ಸಾಲದ ನಿಯಮಗಳು, ದಿವಾಳಿ ಕಾನೂನು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕಪ್ಪುಹಣದ ವಿರುದ್ಧ ಹೋರಾಟ ಎಲ್ಲವನ್ನೂ ಒಟ್ಟೊಟ್ಟಿಗೆ ಜಾರಿಗೆ ತರಲಾಯಿತು. ಅರ್ಥ ವ್ಯವಸ್ಥೆಯು ಎಲ್ಲವನ್ನು ಒಂದೇ ಬಾರಿಗೆ ಜೀರ್ಣಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದು ಗುರುಮೂರ್ತಿ ಹೇಳಿದರು.

ಬ್ಯಾಂಕುಗಳಿಗೆ ₹25 ಸಾವಿರ ಕೋಟಿ

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಾಲ ನೀಡಿಕೆ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಈ ಬ್ಯಾಂಕುಗಳಿಗೆ ಸರ್ಕಾರವು ₹25 ಸಾವಿರ ಕೋಟಿ ಮೊತ್ತವನ್ನು ನೀಡುವ ನಿರೀಕ್ಷೆ ಇದೆ. ಈ ಆರ್ಥಿಕ ವರ್ಷದಲ್ಲಿಯೇ ಹಲವು ಕಂತುಗಳಲ್ಲಿ ಈ ಹಣ ಪೂರೈಕೆ ಆಗಬಹುದು ಎಂದು ಮೂಲಗಳು ತಿಳಿಸಿವೆ.

ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸಿದ್ಧವಿಲ್ಲ. ಹಾಗಾಗಿ ಖಾಸಗಿ ಹೂಡಿಕೆ ಬಹುತೇಕ ಸ್ಥಗಿತಗೊಂಡಿದೆ. ಸರ್ಕಾರ ಹಣ ನೀಡದೇ ಇದ್ದರೆ ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯ ಹೆಚ್ಚುವುದಿಲ್ಲ. ಹಾಗಾಗಿ ಬ್ಯಾಂಕುಗಳಿಗೆ ಹಣ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.