ADVERTISEMENT

ಆರ್ಥಿಕ ಸಮೀಕ್ಷೆ ವರದಿ: ಶೇ 8.5 ‘ಜಿಡಿಪಿ’ ಪ್ರಗತಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 9:30 IST
Last Updated 27 ಫೆಬ್ರುವರಿ 2015, 9:30 IST

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಪ್ರಕಟಗೊಂಡಿದ್ದು ದೇಶದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಮುಂದಿನ ಹಣಕಾಸು ವರ್ಷದಲ್ಲಿ (2016–17) ಶೇ 8.1 ರಿಂದ ಶೇ 8.5ರ ವರೆಗೆ ಪ್ರಗತಿ ಕಾಣಲಿದೆ. 2018-20ರ ವೇಳೆಗೆ ದೇಶವು ಎರಡಂಕಿ ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದು ಅಂದಾಜು ಮಾಡಲಾಗಿದೆ.

ಕಚ್ಚಾ ತೈಲದ ಬೆಲೆ ತಗ್ಗಿದೆ. ಇದರ ಜತೆಗೆ ಹಣದುಬ್ಬರವೂ  ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಬ್ಯಾಂಕ್‌ಗಳು ಬಡ್ಡಿ ದರ ತಗ್ಗಿಸುವ ಸಾಧ್ಯತೆ ಹೆಚ್ಚಿದ್ದು ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿವು ನಿರೀಕ್ಷಿಸಲಾಗಿದೆ. ಪರಿಣಾಮವಾಗಿ ಹೂಡಿಕೆ ಹೆಚ್ಚಲಿದ್ದು ‘ಜಿಡಿಪಿ’ ಪ್ರಗತಿ ಕಾಣಲಿದೆ. ಇದರ ಜತೆಗೆ 2015–16ನೇ ಸಾಲಿನಲ್ಲಿ ಸಹಜ ಮುಂಗಾರು ಲಭಿಸಿದರೆ  ಉತ್ತಮ ಆರ್ಥಿಕ ವೃದ್ಧಿ ದರ ನಿರೀಕ್ಷಿಸಬಹುದು ಎಂದು ಶುಕ್ರವಾರ ಇಲ್ಲಿ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ‘ಜಿಡಿಪಿ’ ಶೇ 7.4ರಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ.  2013–14ನೇ ಸಾಲಿನಲ್ಲಿ ಇದು ಶೇ 6.9ರಷ್ಟಿತ್ತು. 2020ರ ವೇಳೆಗೆ ಎರಡಂಕಿ ಜಿಡಿಪಿ ಪ್ರಗತಿ ದಾಖಲಿಸಲು ರಾಜಕೀಯ ಸ್ಥಿರತೆಯೂ ಅಷ್ಟೇ ಮುಖ್ಯ ಎಂದೂ ಈ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಸಮೀಕ್ಷೆ ಮುಖ್ಯಾಂಶಗಳು

ADVERTISEMENT

* 2015–16ನೇ ಸಾಲಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ  ಶೇ 5 ರಿಂದ ಶೇ 5.5ರ ಒಳಗೆ ಸ್ಥಿರಗೊಳ್ಳುವ ಅಂದಾಜು

* ಹಣದುಬ್ಬರ ತಗ್ಗಿರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿದು ಬರುವ ನಿರೀಕ್ಷೆ, ಬ್ಯಾಂಕ್‌ ಬಡ್ಡಿ ದರ ಕಡಿತ ಸಾಧ್ಯತೆ ಹೆಚ್ಚಳ

* ದೊಡ್ಡ ಮಟ್ಟದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳ ನಿರೀಕ್ಷೆ

* ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಷೇರು ವಿಕ್ರಯ ಗುರಿ

* ಜನ್‌ ಧನ್‌ ಯೋಜನಾ, ಆಧಾರ್‌ ಮೂಲಕ ಬಡವರಿಗೆ ಸೋರಿಕೆ ಇಲ್ಲದೆ ಹಣ ವರ್ಗಾವಣೆ

* ದೇಶೀಯ ತಯಾರಿಕಾ ವಲಯದ ಉತ್ತೇಜನಕ್ಕೆ ‘ಮೇಕ್‌ ಇನ್‌ ಇಂಡಿಯಾ’ ಯೋಜನೆ

* ಹೂಡಿಕೆಗಾಗಿ ಮಾತ್ರ ಸಾಲ ಪಡೆಯಲು ಸಲಹೆ

* ಏಪ್ರಿಲ್‌–ಜನವರಿ ಅವಧಿಯಲ್ಲಿ ಆಹಾರ ಸಬ್ಸಿಡಿ ಮೊತ್ತದಲ್ಲಿ ಶೇ 20 ರಷ್ಟು  ಹೆಚ್ಚಳ. 1.08 ಲಕ್ಷ ಕೋಟಿಗೆ ಏರಿಕೆ

* ರೈಲ್ವೆ ಕಾರ್ಯವಿಧಾನದಲ್ಲಿ ಬದಲಾವಣೆ. ಸರಕು ಸಾಗಣೆ ಸೇರಿದಂತೆ ವಾಣಿಜ್ಯ ವ್ಯವಹಾರಗಳಲ್ಲಿ ತಂತ್ರಜ್ಞಾನ ಅಳವಡಿಕೆ 

* 2013–14ರಲ್ಲಿ ರೂ 1.39 ಲಕ್ಷ ಕೋಟಿಯಷ್ಟಿದ್ದ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ನಷ್ಟ  2014–15ರಲ್ಲಿ ರೂ 74,664 ಕೋಟಿಗೆ ಇಳಿಕೆ

*  ಹಣಕಾಸು ಮಾರುಕಟ್ಟೆ ಸ್ಥಿರತೆಗೆ ಇನ್ನಷ್ಟು ಬಿಗಿ ಕ್ರಮ

* ಜಿಡಿಪಿ ಪ್ರಗತಿಗಾಗಿ ಮತ್ತು ರಫ್ತು ಉತ್ತೇಜನಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲು ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.