ನವದೆಹಲಿ (ಪಿಟಿಐ): ಕರ್ನಾಟಕದ ಅನಂತ್ ಕುಮಾರ್ ಮತ್ತು ವೀರಪ್ಪ ಮೊಯಿಲಿ ಸೇರಿದಂತೆ 401 ಸಂಸದರು ನಿಗದಿತ ಗಡುವಿನ ಒಳಗೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿ ಸೆ.26 ರಂದು ಸಲ್ಲಿಸಿದ ಅರ್ಜಿಗೆ ಲೋಕಸಭಾ ಸಚಿವಾಲಯ ಈ ಮಾಹಿತಿ ನೀಡಿದೆ. 401 ಸಂಸದರ ಆಸ್ತಿ ವಿವರಕ್ಕೆ ಕಾಯಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಸಂಸದರ ಆಸ್ತಿ ವಿವರ ಘೋಷಣೆ ಕಾಯ್ದೆ 2004 ರ ಪ್ರಕಾರ ಸಂಸತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ 90 ದಿನಗಳ ಒಳಗೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಬೇಕು. ಆದರೆ ಆಸ್ತಿ ವಿವರ ಘೋಷಣೆ ಮಾಡುವಂತೆ ಸೆ.26ರ ವರೆಗೆ ಯಾವ ಸಂಸದರಿಗೂ ನೆನಪಿನ ಪತ್ರ ಕಳುಹಿಸಿರಲಿಲ್ಲ ಎಂದು ಲೋಕಸಭಾ ಸಚಿವಾಲಯ ಹೇಳಿದೆ.
ಆಸ್ತಿ ವಿವರ ಘೋಷಿಸದೇ ಇರುವವರ ಪಟ್ಟಿಯಲ್ಲಿ ರಾಹುಲ್, ಸೋನಿಯಾ ಗಾಂಧಿ, ಎಲ್.ಕೆ. ಅಡ್ವಾಣಿ, ಹಾಗೂ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಉಮಾಭಾರತಿ, ನಿತಿನ್ ಗಡ್ಕರಿ ಮತ್ತು ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಸೇರಿದ್ದಾರೆ.
ಬಿಜೆಪಿ 209, ಕಾಂಗ್ರೆಸ್ನ 31, ಟಿಎಂಸಿಯ 27, ಬಿಜೆಡಿಯ 18, ಶಿವಸೇನಾದ 15, ಟಿಡಿಪಿಯ 14, ಎಐಎಡಿಎಂಕೆಯ 9, ಟಿಆರ್ಎಸ್ನ 8, ವೈಎಸ್ಆರ್ ಕಾಂಗ್ರೆಸ್ನ 7, ಲೋಕಜನಶಕ್ತಿಯ 6, ಎನ್ಸಿಪಿ, ಸಿಪಿಎಂ ಮತ್ತು ಎಸ್ಪಿಯ ತಲಾ 4, ಅಕಾಲಿದಳ, ಆರ್ಜೆಡಿ ಮತ್ತು ಎಎಪಿಯ ತಲಾ ಮೂವರು ಮತ್ತು ಜೆಡಿಯು ಮತ್ತು ಅಪ್ನಾದಳದ ಇಬ್ಬರು ಇದುವರೆಗೂ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.