ADVERTISEMENT

ಇಂಗ್ಲಿಷ್‌ ಹೇರಿಕೆ ಮಗುವಿಗೆ ಮಾರಕ

ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:30 IST
Last Updated 21 ಫೆಬ್ರುವರಿ 2017, 19:30 IST
ಇಂಗ್ಲಿಷ್‌ ಹೇರಿಕೆ ಮಗುವಿಗೆ ಮಾರಕ
ಇಂಗ್ಲಿಷ್‌ ಹೇರಿಕೆ ಮಗುವಿಗೆ ಮಾರಕ   

ನವದೆಹಲಿ: ಮಾತೃ ಭಾಷಾ ಶಿಕ್ಷಣದ ಜಾಗದಲ್ಲಿ ಇಂಗ್ಲಿಷ್‌ ಶಿಕ್ಷಣಕ್ಕೆ ಒತ್ತು ನೀಡುವುದು ಮಕ್ಕಳ ‘ಭಾವನೆ ಮತ್ತು ಯೋಚನಾ’ ಶಕ್ತಿಯನ್ನು  ಹತ್ತಿಕ್ಕುತ್ತದೆ ಎಂದು ಖ್ಯಾತ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಪ್ರತಿಪಾದಿಸಿದರು.

ನವದೆಹಲಿಯಲ್ಲಿ ನಡೆದ ಸಾಹಿತ್ಯ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಆರಂಭದ ಶಿಕ್ಷಣವನ್ನು ಅವರ ಪ್ರಾದೇಶಿಕ ಭಾಷೆಗಳಲ್ಲಿ ಕಥೆ, ಹಾಡು, ಕವನ ಮತ್ತು ಸರಳ ಗದ್ಯಗಳನ್ನು ಹೇಳುವುದರ ಮೂಲಕ ನೀಡಬೇಕು ಎಂದು ಅಭಿಪ್ರಾಯಪಟ್ಟರು.

‘1970ರವರೆಗೆ ಕರ್ನಾಟಕದ ಶೇ 90ರಷ್ಟು ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಶಿಕ್ಷಣವಿತ್ತು. ಆದರೆ, ಈಗ ಪ್ರತಿ ನಗರ ಮತ್ತು ಪಟ್ಟಣಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಸೇರಿಸಲು ಬಯಸುತ್ತಿದ್ದಾರೆ.  ಮಕ್ಕಳು ಎಂಜಿನಿಯರ್‌, ಡಾಕ್ಟರ್‌ ಆಗಬೇಕು ಎಂದು ಅವರು ಕನಸು ಕಾಣುತ್ತಿರುವುದು ಇದಕ್ಕೆ ಕಾರಣ’ ಎಂದು ಅವರು ಹೇಳಿದರು.

ADVERTISEMENT

ಸಾಹಿತ್ಯ ಅಕಾಡೆಮಿ ಆಯೋಜಿಸಿರುವ ಈ ಬಾರಿಯ ಉತ್ಸವದಲ್ಲಿ  ‘ಮಾತೃ ಭಾಷೆ ಮತ್ತು ಜನಪದ ಸಾಹಿತ್ಯ ರಕ್ಷಣೆ’ ಎಂಬುದು ಮುಖ್ಯ ವಿಷಯ.
ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಉಲ್ಲೇಖಿಸಿದ ಭೈರಪ್ಪ, ಮಾತೃ ಭಾಷೆಯು ಮಗುವಿನ ಮಾನಸಿಕ ಮತ್ತು ಭಾವನಾತ್ಮಕ ಪ್ರಗತಿಗೆ ಅತ್ಯಂತ ಸೂಕ್ತವಾಗಿ ಹೊಂದುತ್ತದೆ ಎಂದರು.

‘ಬೇರೆ ಭಾಷೆ ಅಥವಾ ತಿಳಿಯದ ಭಾಷೆಯನ್ನು ಮಗುವಿನ ಮೇಲೆ ಹೇರಿದರೆ ಅದು ಆ ಮಗುವಿನ ಆಲೋಚನೆ ಮತ್ತು ಭಾವನಾತ್ಮಕ ಸಾಮರ್ಥ್ಯವನ್ನು ಕೊಲ್ಲುತ್ತದೆ. ಆದರೆ, ಪೋಷಕರು ಈ ವಿಷಯಕ್ಕೆ ಹೆಚ್ಚು ಗಮನಕೊಡುವುದಿಲ್ಲ’ ಎಂದು ಭೈರಪ್ಪ ಕಳವಳ ವ್ಯಕ್ತಪಡಿಸಿದರು.

ಪ್ರಾದೇಶಿಕ ಭಾಷೆಗಳು ಈ ದೇಶದ ಶ್ರೀಮಂತ ಸಂಸ್ಕೃತಿಯ ಪ್ರತಿಬಿಂಬ ಎಂದು ಪ್ರತಿಪಾದಿಸಿದ ಅವರು, ‘ಈಗ ಸೃಜನಶೀಲ ಬರಹಗಾರರು ಬಳಸುತ್ತಿರುವ ಭಾಷೆಗಳು, ಹಲವು ಶತಮಾನಗಳಿಂದ ನಮ್ಮ ಪೂರ್ವಿಕ ಲೇಖಕರು ಬಳಸಿದ, ರೂಪಿಸಿದ  ಮತ್ತು ಪೋಷಿಸಿದ ಭಾಷೆಗಳು. ನಮ್ಮ ಜಾನಪದದಿಂದ ಅವುಗಳಿಗೆ ಜೀವ ಬಂದಿದೆ. ದೈನಂದಿನ ಜೀವನದಲ್ಲಿ ನಾವು ಬಳಸುವ ಪ್ರತಿ ಪದವೂ ಸಾಂಸ್ಕೃತಿಕ ಇತಿಹಾಸ ಹೊಂದಿದೆ’ ಎಂದು ವಿವರಿಸಿದರು.

‘ಹಾಗಾಗಿ, ಇಂಗ್ಲಿಷ್‌ನಲ್ಲಿ ಬರೆಯುತ್ತಿರುವ ಭಾರತದ ಲೇಖಕರಿಗೆ ಈ ದೇಶದ ಸಾಂಸ್ಕೃತಿಕ ಆತ್ಮ ದಕ್ಕುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಒಂದು ವೇಳೆ, ದೇಶದಲ್ಲಿ ಇಂಗ್ಲಿಷ್‌ ಮಾಧ್ಯಮದ ಹಾವಳಿ ಇದೇ ರೀತಿ ಮುಂದುವರಿದರೆ, ಪ್ರಾದೇಶಿಕ ಭಾಷೆಗಳ ಪುಸ್ತಕಗಳನ್ನು ಬರೆಯುವವರು ಮತ್ತು ಓದುವವರೇ ಇರುವುದಿಲ್ಲ’ ಎಂದು ಭೈರಪ್ಪ ಎಚ್ಚರಿಸಿದರು.

ಪ್ರಾದೇಶಿಕ ಭಾಷೆಗಳಲ್ಲಿರುವ ಅತ್ಯುತ್ತಮ ಸಾಹಿತ್ಯವನ್ನು ಇಂಗ್ಲಿಷ್‌ಗೆ ಭಾಷಾಂತರ  ಮಾಡುವ ಕೆಲಸವೂ ಸರಿಯಾಗಿ ನಡೆಯುತ್ತಿಲ್ಲ ಎಂದು ವಿಷಾದಿಸಿದರು.

* ಇಂಗ್ಲಿಷ್‌ ಭಾಷೆಯನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ಆಡಳಿತದಲ್ಲಿ ಬಳಸಲಾಗುತ್ತಿದೆಯಾದರೂ, ಸಾಂಸ್ಕೃತಿಕವಾಗಿ ಅದು ನಿರ್ಜೀವ ಭಾಷೆ
-ಎಸ್‌.ಎಲ್‌. ಭೈರಪ್ಪ, ಕಾದಂಬರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.