ADVERTISEMENT

ಇಲ್ಲಿ ಸ್ಯಾಮ್‌ಸಂಗ್‌, ನೋಕಿಯಾಗೂ ಹೊಟ್ಟೆನೋವು!

ಪಿಟಿಐ
Published 16 ಏಪ್ರಿಲ್ 2017, 19:58 IST
Last Updated 16 ಏಪ್ರಿಲ್ 2017, 19:58 IST
ಇಲ್ಲಿ ಸ್ಯಾಮ್‌ಸಂಗ್‌, ನೋಕಿಯಾಗೂ ಹೊಟ್ಟೆನೋವು!
ಇಲ್ಲಿ ಸ್ಯಾಮ್‌ಸಂಗ್‌, ನೋಕಿಯಾಗೂ ಹೊಟ್ಟೆನೋವು!   

ಬುಂಡಿ (ರಾಜಸ್ತಾನ):‘ರಾಷ್ಟ್ರಪತಿಯವರು ಮೇಕೆ ಮೇಯಿಸಲು ಹೋಗಿದ್ದಾರೆ’, ‘ಪ್ರಧಾನಿ ಅವರು ದಿನಸಿ ತರಲು ಪೇಟೆಗೆ ಹೋಗಿದ್ದಾರೆ’ ಎಂಬ ಮಾತುಗಳು ರಾಜಸ್ತಾನದ ಬುಂಡಿ ನಗರದ ಬಳಿ ಇರುವ ರಾಮನಗರದಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುತ್ತವೆ!

ಅಷ್ಟೇ ಅಲ್ಲ; ಇಲ್ಲಿ ಸ್ಯಾಮ್‌ಸಂಗ್‌ ಮತ್ತು ನೋಕಿಯಾಗಳಿಗೆ ಹೊಟ್ಟೆ ನೋವು ಬರುತ್ತದೆ. ಆ ಹೊಟ್ಟೆ ನೋವಿಗೆ ಇಲ್ಲಿನ ವೈದ್ಯರು ಔಷಧಿಯನ್ನೂ ಬರೆದುಕೊಡುತ್ತಾರೆ. ಅಂದಹಾಗೆ ಈ ರಾಷ್ಟ್ರಪತಿ, ಪ್ರಧಾನಿ, ಸ್ಯಾಮ್‌ಸಂಗ್, ನೋಕಿಯ.. ಇವೆಲ್ಲಾ ರಾಮನಗರದ ಜನರ ಅಧಿಕೃತ ಹೆಸರುಗಳು!
ಸರ್ಕಾರದ ಉನ್ನತ ಹುದ್ದೆಯ ಹೆಸರುಗಳನ್ನು ಜನರು ತಮ್ಮ ಮಕ್ಕಳಿಗೆ ಇಡುವುದಕ್ಕೆ ರಾಮನಗರ ಖ್ಯಾತವಾಗಿದೆ.   ಈ ಹೆಸರುಗಳ ಪಟ್ಟಿಗೆ ಈಗ ಮೊಬೈಲ್‌ ತಯಾರಿಕಾ ಕಂಪೆನಿಗಳ, ಮೊಬೈಲ್‌ ಬಿಡಿಭಾಗಗಳ ಹೆಸರುಗಳೂ ಸೇರುತ್ತಿವೆ.

‘ಈ ಊರಿನಲ್ಲಿ ಸುಮಾರು 500 ಜನ ಇದ್ದಾರೆ. ಬಹಳ ಹಿಂದಿನಿಂದಲೂ ಪ್ರತಿ ಮನೆಯವರೂ ಒಂದಲ್ಲಾ ಒಂದು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಊರಿನ ಜನ ಪದೇ ಪದೇ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಿಗೆ ಹೋಗುತ್ತಿರುತ್ತಾರೆ. ಅಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸಿಗುವ ಗೌರವವನ್ನು ಗಮನಿಸಿ, ಈ ಜನ ತಮ್ಮ ಮಕ್ಕಳಿಗೂ ಆ ಹುದ್ದೆಗಳ ಹೆಸರನ್ನೇ ಇಟ್ಟಿದ್ದಾರೆ. ಯಾವ ಕಾಲದಲ್ಲಿ ಇದು ಆರಂಭವಾಯಿತು ಎಂಬದು ತಿಳಿದಿಲ್ಲ’ ಎಂದು ಊರಿನಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ವಿಶ್ಲೇಷಿಸಿದ್ದಾರೆ.

ADVERTISEMENT

‘ಇಲ್ಲಿನ ಜನರು ತಮ್ಮ ಮಕ್ಕಳಿಗೆ ಸಾಮಾನ್ಯ ಹೆಸರುಗಳನ್ನೂ ಇಡುತ್ತಾರೆ. ಆದರೆ ಅವು ಜನಪ್ರಿಯ ಮತ್ತು ಗಣ್ಯ ವ್ಯಕ್ತಿಗಳ ಹೆಸರುಗಳಾಗಿರುತ್ತವೆ. ಈಚೆಗೆ ಆಂಡ್ರಾಯ್ಡ್, ಸಿಮ್‌ಕಾರ್ಡ್‌, ಮಿಸ್ಡ್‌ ಕಾಲ್, ಜಿಯೋನಿ ಎಂದೆಲ್ಲಾ ಹೆಸರು ಇಡಲು ಆರಂಭಿಸಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
‘ಊರಿನಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರು ಇದ್ದಾರೆ. ಅವರು ಹುಟ್ಟಿದ ದಿನ, ಅವರ ತಾತನಿಗೆ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು. ಹೀಗಾಗಿ ಅವರಿಗೆ ಹೈಕೋರ್ಟ್‌ ಎಂದು ಹೆಸರಿಡಲಾಗಿದೆ!  ಇವೆಲ್ಲಾ ಅವರ ಅಧಿಕೃತ ಹೆಸರುಗಳು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.