ADVERTISEMENT

ಉಗ್ರನಿಗೆ ಪಾಕ್‌ನಲ್ಲಿ ಪೂರ್ಣ ಸ್ವಾತಂತ್ರ್ಯ

ಹಫೀಜ್‌ ನಿರ್ದೋಷಿ ಎಂದ ಹೈಕಮಿಷನರ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಮುಂಬೈ ದಾಳಿ ಸೂತ್ರ­ಧಾರ ಉಗ್ರ ಹಫೀಜ್‌ ಸಯೀದ್‌ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಹಾಗಾಗಿ ಪಾಕಿಸ್ತಾನ­ದಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ಆತನಿಗೆ ಅವ­-ಕಾಶ ಇದೆ ಎಂದು ಪಾಕಿಸ್ತಾನ ಸೋಮವಾರ ಹೇಳಿದೆ.

‘ಹಫೀಜ್‌ ಸಯೀದ್‌ ಪಾಕಿಸ್ತಾನದ ಪ್ರಜೆ. ಹಾಗಾಗಿ ದೇಶದಲ್ಲಿ ಮುಕ್ತವಾಗಿ ಓಡಾಡುವುದಕ್ಕೆ ಆತನಿಗೆ ಅವಕಾಶ ಇದೆ. ಅದರಲ್ಲಿ ಏನು ಸಮಸ್ಯೆ... ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ’ ಎಂದು ಭಾರತದಲ್ಲಿ ಪಾಕಿ­ಸ್ತಾನದ ಹೈಕಮಿ­ಷನರ್‌ ಅಬ್ದುಲ್‌ ಬಾಸಿತ್‌ ಹೇಳಿ­ದ್ದಾರೆ. ನಿಯಂತ್ರಣ ರೇಖೆಗೆ ಅತ್ಯಂತ ಹತ್ತಿರದಲ್ಲಿ ಪಾಕಿಸ್ತಾನದ ಸೇನೆಯ ಜೊತೆಗೆ ಸಯೀದ್‌ ಕೆಲಸ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.

ಆತ ನಿರ್ದೋಷಿ ಎಂದು ನ್ಯಾಯಾಲಯ ಈಗಾ­ಗಲೇ ತೀರ್ಪು ನೀಡಿದೆ. ಆತನ ವಿರುದ್ಧ ಯಾವುದೇ ಪ್ರಕರಣದ ವಿಚಾರಣೆಯೂ ಬಾಕಿ ಇಲ್ಲ ಎಂದು ಬಾಸಿತ್‌ ತಿಳಿಸಿದ್ದಾರೆ.

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ಸೂತ್ರಧಾರ ಹಫೀಜ್‌ ಎಂದು ಭಾರತ ಹೇಳುತ್ತಲೇ ಇದೆ. ಈ ದಾಳಿಯ ಸಂಚು, ಯೋಜನೆ­ಗಳೆಲ್ಲವೂ ಪಾಕಿಸ್ತಾನ­ದಲ್ಲಿ­ಯೇ ನಡೆದಿದೆ. ಅಲ್ಲಿಂದಲೇ ದಾಳಿಯ ಅನುಷ್ಠಾನವೂ ನಡೆ­ದಿದೆ. ಈ ದಾಳಿ­ಯಲ್ಲಿ 166 ಜನರು ಬಲಿ­ಯಾ­ಗಿದ್ದರು. ಪಾಕಿಸ್ತಾನ­ದಲ್ಲಿ ಈ ಪ್ರಕರ­ಣದ ವಿಚಾರಣೆ­ಯಲ್ಲಿ ಆಗುತ್ತಿ­ರುವ ವಿಳಂಬದ ಬಗ್ಗೆ ಭಾರತ ಹಲವು ಬಾರಿ ಆಕ್ಷೇಪವನ್ನೂ ವ್ಯಕ್ತಪಡಿಸಿದೆ.

ಭಾರತದ ವಿರುದ್ಧ ಭಾರಿ ವಿರೋಧ ಹೊಂದಿ­ರುವ ಈತನನ್ನು ‘ಭಯೋತ್ಪಾದಕ’ ಎಂದು ಅಮೆರಿ­ಕವೂ ಘೋಷಿಸಿದೆ. ಭಾರತ ‘ಜಲ ಭಯೋತ್ಪಾದನೆ’­ಯಲ್ಲಿ ತೊಡಗಿದೆ ಎಂದು ಇತ್ತೀಚೆಗೆ ಈತ ಆರೋಪಿಸಿದ್ದಾನೆ.

‘ಭಾರತ ಸರ್ಕಾರ ಒಂದೆಡೆ ಯಾವುದೇ ಸೂಚನೆ ನೀಡದೆ ನದಿಗಳಿಗೆ ನೀರು ಬಿಡುತ್ತಿದೆ. ಮತ್ತೊಂದೆಡೆ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವುದಾಗಿ ಹೇಳು­ತ್ತಿದೆ’ ಎಂದು ಪಾಕಿಸ್ತಾನ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಫೀಜ್‌ ಕಿಡಿ ಕಾರಿದ್ದಾನೆ.

ADVERTISEMENT
ಮುಂಬೈ ದಾಳಿ ಸೂತ್ರಧಾರ: ಭಾರತ ತಿರುಗೇಟು

ನವದೆಹಲಿ (ಪಿಟಿಐ): ಹಫೀಜ್‌ ವಿರುದ್ಧ ಯಾವುದೇ ಪ್ರಕರಣ ಇಲ್ಲ, ಹಾಗಾಗಿ ಮುಕ್ತವಾಗಿ ಓಡಾಡುವುದಕ್ಕೆ ಆತನಿಗೆ ಅವಕಾಶ ಇದೆ ಎಂಬ ಪಾಕಿಸ್ತಾನದ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಈ ಉಗ್ರ ಮುಂಬೈ ದಾಳಿಯ ಸೂತ್ರಧಾರ. ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವುದು ಪಾಕಿಸ್ತಾನದ ಕರ್ತವ್ಯವಾಗಿದೆ ಎಂದು ಭಾರತ ಹೇಳಿದೆ.

‘ಹಫೀಜ್‌ ಸಯೀದ್‌ಗೆ ಸಂಬಂಧಿಸಿ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಆತ ಮುಂಬೈ ದಾಳಿಯ ಸೂತ್ರಧಾರ. ಮುಂಬೈಯ ಬೀದಿಗಳಲ್ಲಿ ಜನರ ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತದ ನ್ಯಾಯಾಲಯದಲ್ಲಿ ಆತ ಆರೋಪಿ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸಯ್ಯದ್‌ ಅಕ್ಬರುದ್ದೀನ್‌ ಹೇಳಿದ್ದಾರೆ.

‘26/11ರ ಮುಂಬೈ ದಾಳಿಗೆ ಸಂಬಂಧಿಸಿ ಆತನ ಬಂಧನ ಆಗದಿರುವುದೇ ಆಶ್ಚರ್ಯ. ಆತ ಪಾಕಿಸ್ತಾನದ ಪ್ರಜೆ ಆಗಿರುವುದೇ ಮುಕ್ತವಾಗಿ ಓಡಾಡಿಕೊಂಡಿರುವುದಕ್ಕೆ ಕಾರಣ’ ಎಂದು ಅಕ್ಬರುದ್ದೀನ್‌ ಹೇಳಿದ್ದಾರೆ.
ಪಾಕಿಸ್ತಾನ ಹೈಕಮಿಷನರ್‌ ಬಾಸಿತ್‌ ಅವರ ಹೇಳಿಕೆಗೆ ತಕ್ಷಣವೇ ಭಾರತ ತನ್ನ ಕಟು  ಪ್ರತಿಕ್ರಿಯೆ ನೀಡಿದೆ. ‘ಈ ಪ್ರಕರಣದ ಪಿತೂರಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿಯೇ ನಡೆದಿರುವುದರಿಂದ ಶೇ 99ರಷ್ಟು ಸಾಕ್ಷ್ಯಗಳು ಆ ದೇಶದಲ್ಲಿಯೇ ಇವೆ. ಅಮಾನವೀಯ ದಾಳಿಯ ಎಲ್ಲ ಯೋಜನೆಗಳೂ ಪಾಕಿಸ್ತಾನದಲ್ಲಿಯೇ ರೂಪುಗೊಂಡಿವೆ’ ಎಂದು ಅಕ್ಬರುದ್ದೀನ್‌ ಅವರು ಹೇಳಿದರು. ಹಫೀಜ್‌ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.