ADVERTISEMENT

ಉಗ್ರರ ವಿರುದ್ಧ ಜಂಟಿ ಹೋರಾಟ

ಭಯೋತ್ಪಾದನೆ ದಮನಕ್ಕೆ ಯತ್ನ: ಭಾರತ, ಯುಎಇ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌
ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌   

ನವದೆಹಲಿ (ಪಿಟಿಐ): ಜಾಗತಿಕ ಪಿಡುಗು ಎನಿಸಿರುವ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರವನ್ನು  ಇನ್ನಷ್ಟು ವಿಸ್ತರಿಸಲು ಭಾರತ ಮತ್ತು ಯುಎಇ ನಿರ್ಧರಿಸಿವೆ.

‘ಧರ್ಮದ ಹೆಸರು ಹೇಳಿಕೊಂಡು ಭಯೋತ್ಪಾದನಾ ಚಟುವಟಿಕೆಯನ್ನು ಸಮರ್ಥಿಸಿಕೊಳ್ಳುವ ಕ್ರಮವನ್ನು ಉಭಯ ದೇಶಗಳು ಖಂಡಿಸುತ್ತವೆ’ ಎಂದು ಶುಕ್ರವಾರ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಬುಧಾಬಿ ಯುವರಾಜ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ನಡುವಣ ಮಾತುಕತೆ ಗುರುವಾರ ನಡೆದಿತ್ತು.

ಭಯೋತ್ಪಾದನೆಯ ಪಿಡುಗನ್ನು ಹೋಗಲಾಡಿಸಲು ಜಾಗತಿಕ ಮಟ್ಟದಲ್ಲಿ ಗಂಭೀರ ಪ್ರಯತ್ನ ನಡೆಯಬೇಕು ಎಂದು ಉಭಯ ದೇಶಗಳು ಕರೆ ನೀಡಿವೆ.
ಕೆಲವು ದೇಶಗಳು ಧರ್ಮದ ಹೆಸರಿನಲ್ಲಿ ಇನ್ನೊಂದು ದೇಶದ ವಿರುದ್ಧ ಭಯೋತ್ಪಾದಕ ದಾಳಿಗೆ ಪ್ರಚೋದನೆ ನೀಡುತ್ತಿವೆ. ಉಗ್ರರ ಚಟುವಟಿಕೆಗಳಿಗೆ ನೆರವು ಮತ್ತು ಬೆಂಬಲ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂಬುದನ್ನು ಉಭಯ ದೇಶಗಳ ನಾಯಕರು ಒತ್ತಿ ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.

‘ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರದಲ್ಲಿ ಎಲ್ಲ ದೇಶಗಳು ಕೈಜೋಡಿಸಬೇಕು. ಯಾವುದೇ ದೇಶ ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡಬಾರದು’ ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ಟೀಕಿಸಿವೆ. ಐಎಸ್‌ ಸಂಘಟನೆ ಒಡ್ಡಿರುವ ಸವಾಲಿನ ಬಗ್ಗೆಯೂ ಚರ್ಚೆ ನಡೆದಿದೆ.

ರಕ್ಷಣಾ ಸಹಕಾರವನ್ನು ಇನ್ನಷ್ಟು ಹೆಚ್ಚಿಸಿ ಸಾಗರ ಸುರಕ್ಷತೆ ಮತ್ತು ಸೈಬರ್‌ ಸುರಕ್ಷತೆ ವಲಯದಲ್ಲಿ ಜಂಟಿಯಾಗಿ ಕೆಲಸ ಮಾಡಲು ಎರಡೂ ದೇಶಗಳು ಸಮ್ಮತಿ ಸೂಚಿಸಿವೆ. ಇಂಧನ, ರೈಲ್ವೆ, ರಸ್ತೆ, ಬಂದರು ಮತ್ತು ಹಡಗುಯಾನ ವಲಯಗಳಲ್ಲಿ ಭಾರಿ ಬಂಡವಾಳ ಹೂಡಲು ಯುಎಒ ಉತ್ಸುಕವಾಗಿದೆ ಎಂದು ಮಾತುಕತೆಯ ವೇಳೆ ನಹ್ಯಾನ್‌ ಅವರು ಪ್ರಧಾನಿಗೆ ತಿಳಿಸಿದ್ದಾರೆ.

ಮುಖ್ಯಾಂಶಗಳು

* ಭಾರತದಲ್ಲಿ ಭಾರಿ ಬಂಡವಾಳ ಹೂಡಿಕೆಗೆ ಯುಎಇ ಆಸಕ್ತಿ

ADVERTISEMENT

* ರಕ್ಷಣಾ ಸಹಕಾರ ವೃದ್ಧಿಗೆ ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.